

IND vs NZ T20: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ನಾಲ್ಕನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲುಂಡಿದ್ದು, ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ಕಿವೀಸ್ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಸಂಪೂರ್ಣವಾಗಿ ಶರಣಾಗಿದೆ.
ಈ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ನ್ಯೂಜಿಲೆಂಡ್, ಭಾರತ ವಿರುದ್ಧ 87 ರನ್ಗಳ ಭಾರಿ ಅಂತರದಿಂದ ನಾಲ್ಕನೇ ಟಿ20 ಪಂದ್ಯವನ್ನು ಗೆದ್ದು ಬೀಗಿತು. ಈ ಮೂಲಕ ಸರಣಿಯಲ್ಲಿ ವೈಟ್ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳುವಲ್ಲಿ ಕಡೆಗೂ ಯಶಸ್ವಿಯಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಕಿವೀಸ್ ಪಡೆ ಪ್ರಾಬಲ್ಯ ಸಾಧಿಸಿದ್ದೇ ಆದರೂ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಕಿವೀಸ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಕಣಕ್ಕಿಳಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 259 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಗ್ಲೆನ್ ಫಿಲಿಪ್ಸ್ ಶತಕ (49 ಎಸೆತಗಳಲ್ಲಿ 107 ರನ್, 6 ಬೌಂಡರಿ, 10 ಸಿಕ್ಸರ್) ಸಿಡಿಸಿದರೆ, ಮೈಕಲ್ ಬ್ರೇಸ್ವೆಲ್ (25 ಎಸೆತಗಳಲ್ಲಿ 65) ವಿಧ್ವಂಸ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇನ್ನು, ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕರಿಂದ ಉತ್ತಮ ಇನ್ನಿಂಗ್ಸ್ ಬರಲೇ ಇಲ್ಲ.
260 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 20 ಓವರ್ ಗಳಲ್ಲಿ 9 ವಿಕೆಟ್ಗೆ 172 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಕಿವೀಸ್ ಎಸೆದ ಶಾರ್ಟ್ ಪಿಚ್ ಮತ್ತು ಬೌನ್ಸರ್ಗಳನ್ನು ಡಿಕೋಡ್ ಮಾಡಲು ಸಾಧ್ಯವಾಗದೆ ಭಾರತದ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು. ಸಂಜು ಸ್ಯಾಮ್ಸನ್ (4), ಇಶಾನ್ ಕಿಶನ್ (0) ನಿರಾಸೆ ಮೂಡಿಸಿದರೆ, ಅಭಿಷೇಕ್ ಶರ್ಮಾ (27), ಶ್ರೇಯಸ್ ಅಯ್ಯರ್ (22), ನಿತೀಶ್ ಕುಮಾರ್ ರೆಡ್ಡಿ (21), ನಮನ್ ಧೀರ್ (28) ಕೆಲಹೊತ್ತು ಹೋರಾಟ ನಡೆಸಿ ಔಟ್ ಆದರು.
ಇನ್ನು ತಿಲಕ್ ವರ್ಮಾ ಮಾತ್ರ 35 ರನ್ ಗಳಿಸಿದ್ದೇ ಆದರೂ ಗೆಲುವಿಗೆ ಯಾವುದೇ ರೀತಿಯ ಪ್ರಯೋಜನ ನೀಡಲಿಲ್ಲ. ಕಿವೀಸ್ ಬೌಲರ್ಗಳಲ್ಲಿ ಜೇಕಬ್ ಡಫಿ 4 ವಿಕೆಟ್ಗಳನ್ನು ಪಡೆದರೆ, ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಥ್ಯೂವ್ ಫಿಶರ್ ತಲಾ 2 ವಿಕೆಟ್ಗಳನ್ನು ಪಡೆದು ಮಿಂಚಿದರು. ಎಲ್ಲ ವಿಭಾಗಗಳಲ್ಲೂ ವಿಫಲವಾಗಿದ್ದ ಟೀಮ್ ಇಂಡಿಯಾ, ಈ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು. ಉಭಯ ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಇದೇ ನವೆಂಬರ್ 1ರಂದು ನಡೆಯಲಿದೆ.