ಈ ಇಬ್ಬರು ಬೌಲರ್​ಗಳಿದ್ರೆ ಭಾರತ 400 ರನ್​ ಗಳಿಸಿದರು ಗೆಲುವು ಅಸಾಧ್ಯವಂತೆ! Team India

ಈ ಬೌಲರ್​ಗಳಿದ್ರೆ ಭಾರತದ ಗೆಲುವು ಅಸಾಧ್ಯವಂತೆ
ಈ ಬೌಲರ್​ಗಳಿದ್ರೆ ಭಾರತದ ಗೆಲುವು ಅಸಾಧ್ಯವಂತೆ
Published on

ಪ್ರಮುಖ ಮುಖ್ಯಾಂಶಗಳು

  • ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾಗೆ ಸೋಲು
  • ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ರೊಂದಿಗೆ ಸಮಬಲ ಸಾಧಿಸಿದ ಆಫ್ರಿಕಾ
  • ಇಬ್ಬರು ಬೌಲರ್‌ಗಳು ಮುಕ್ತವಾಗಿ ರನ್ ಬಿಟ್ಟುಕೊಟ್ಟಿದ್ದೆ ಸೋಲಿಗೆ ಪ್ರಮುಖ ಕಾರಣ
  • ಮೂರನೇ ಏಕದಿನ ಪಂದ್ಯದಿಂದ ಆ ಬೌಲರ್​ಗಳನ್ನು ತೆಗೆದುಹಾಕಬೇಕೆಂಬ ಬೇಡಿಕೆ
ನವದೆಹಲಿ: ರಾಯ್​​ಪುರದಲ್ಲಿ ನಡೆದ ಭಾರತ ( Team India ) ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ಆದರೆ, ಅಷ್ಟೇ ಬೇಸರ ಸಹ ಮೂಡಿಸಿತು. ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತದ ವಿರುದ್ಧ 17 ರನ್‌ಗಳಿಂದ ಸೋತಿದ್ದ ದಕ್ಷಿಣ ಆಫ್ರಿಕಾ, ಎರಡನೇ ಏಕದಿನ ಪಂದ್ಯದಲ್ಲಿ ಸೂಪರ್ ಗೆಲುವು ಸಾಧಿಸಿತು. ಟೀಮ್​ ಇಂಡಿಯಾ ಗೆಲುವು ಸಾಧಿಸಲಿದೆ ಎಂಬ ಭರವಸೆಯಲ್ಲಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಯಿತು.
ಟೀಮ್​ ಇಂಡಿಯಾ ನೀಡಿದ್ದ 359 ರನ್​ಗಳ ಬೃಹತ್​ ಗುರಿಯನ್ನು ನಾಲ್ಕು ಎಸೆತಗಳು ಬಾಕಿ ಇರುವಾಗಲೇ ದಕ್ಷಿಣ ಆಫ್ರಿಕಾ ತಲುಪಿತು. ಈ ಮೂಲಕ ನಾಲ್ಕು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ರೊಂದಿಗೆ ಸಮಬಲ ಸಾಧಿಸಿದೆ. ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಗೆದ್ದವರನ್ನು ಸರಣಿ ವಿಜೇತರೆಂದು ನಿರ್ಧರಿಸಲಾಗುವುದು.
ಏಕದಿನ ಪಂದ್ಯದಲ್ಲಿ 359 ರನ್‌ಗಳ ಗುರಿಯನ್ನು ಬೆನ್ನಟ್ಟುವುದು ಯಾವುದೇ ತಂಡಕ್ಕೆ ಸುಲಭದ ಕೆಲಸವಲ್ಲ. ಒಂದು ವೇಳೆ ಚೇಸ್​ ಮಾಡಿದರೆ ಎದುರಾಳಿ ತಂಡದ ಬೌಲಿಂಗ್ ತುಂಬಾ ದುರ್ಬಲವಾಗಿದೆ ಎಂದರ್ಥ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲೂ ಇದೇ ನಡೆಯಿತು. ಭಾರತೀಯ ಬೌಲರ್‌ಗಳು ಸಂಪೂರ್ಣವಾಗಿ ವಿಫಲರಾದರು. ಅದರಲ್ಲೂ ವಿಶೇಷವಾಗಿ ಇಬ್ಬರು ಬೌಲರ್‌ಗಳು ಮುಕ್ತವಾಗಿ ರನ್ ಬಿಟ್ಟುಕೊಟ್ಟರು. ಈ ಇಬ್ಬರ ಬೌಲಿಂಗ್ ನೋಡಿದ ಪ್ರತಿಯೊಬ್ಬ ಅಭಿಮಾನಿಯೂ ಇವರನ್ನೇಕೆ ತಂಡದಲ್ಲಿ ಇಟ್ಟುಕೊಂಡಿದ್ದೀರಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಆ ಇಬ್ಬರು ಬೇರೆ ಯಾರೂ ಅಲ್ಲ ಪ್ರಸಿದ್ಧ ಕೃಷ್ಣ ಮತ್ತು ಹರ್ಷಿತ್ ರಾಣ.
ಎರಡನೇ ಏಕದಿನ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ 8.2 ಓವರ್‌ಗಳಲ್ಲಿ 85 ರನ್ ಬಿಟ್ಟುಕೊಟ್ಟರು. ಬಹುಶಃ 10 ಓವರ್‌ಗಳನ್ನು ಬೌಲ್ ಮಾಡಿದ್ದರೆ, ಶತಕವನ್ನು ಗಳಿಸುತ್ತಿದ್ದರು. ಪ್ರಸಿದ್ಧ ಅವರ ಎಕಾನಮಿ ರೇಟ್ 10.20 ಆಗಿತ್ತು ಎಂಬುದು ಗಮನಾರ್ಹ. ಮತ್ತೊಂದೆಡೆ, ಹರ್ಷಿತ್ ರಾಣ ಕೂಡ 10 ಓವರ್‌ಗಳಲ್ಲಿ 70 ರನ್ ಬಿಟ್ಟುಕೊಟ್ಟರು. ಹೀಗಾಗಿ ಅವರಿಬ್ಬರನ್ನೂ ಮೂರನೇ ಏಕದಿನ ಪಂದ್ಯದಿಂದ ತೆಗೆದುಹಾಕಬೇಕೆಂಬ ಬೇಡಿಕೆಗಳು ಹೆಚ್ಚಾಗುತ್ತಿವೆ.
ಎರಡನೇ ಏಕದಿನ ಪಂದ್ಯದಲ್ಲಿ ಈ ಇಬ್ಬರು ಬೌಲರ್‌ಗಳ ಕಳಪೆ ಪ್ರದರ್ಶನದ ಬಳಿಕ ಕ್ರೀಡಾ ವಿಶ್ಲೇಷಕರು ಅವರಿಬ್ಬರ ವೃತ್ತಿಜೀವನ ಈಗ ಅಪಾಯದಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೊಹಮ್ಮದ್ ಶಮಿ ಅವರಂತಹ ಅನುಭವಿ ವೇಗದ ಬೌಲರ್ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಮತ್ತೊಂದು ಅವಕಾಶವನ್ನು ನೀಡಿ. ಒಂದು ವೇಳೆ ಶಮಿ ಅವರು ಈ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದರೆ, ಟೀಮ್ ಇಂಡಿಯಾದ ಬೌಲಿಂಗ್ ದಾಳಿ ತುಂಬಾ ಬಲವಾಗಿರುತ್ತಿತ್ತು ಎಂದು ಹೇಳುತ್ತಿದ್ದಾರೆ.
ಎರಡನೇ ಏಕದಿನ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಅವರು ಅವರಿಬ್ಬರ ಬೌಲಿಂಗ್ ಪ್ರದರ್ಶನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಂಡದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಹರ್ಷಿತ್ ರಾಣಾ ಅವರಂತಹ ಬೌಲರ್‌ಗಳು ಇರುವಾಗ, ಟೀಮ್ ಇಂಡಿಯಾ 400 ರನ್ ಗಳಿಸಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಸುನಿಲ್ ಗವಾಸ್ಕರ್ ಕಾಮೆಂಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಮೀಮ್ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ಇದರೊಂದಿಗೆ, ಕೆಲವು ನೆಟ್ಟಿಗರು ಭಾರತೀಯ ಬೌಲರ್‌ಗಳ ಪ್ರದರ್ಶನದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತಂಡದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಹರ್ಷಿತ್ ರಾಣಾ ಅವರಿಗಿಂತ ಉತ್ತಮ ಬೌಲರ್‌ಗಳು ಇಲ್ಲವೇ ಎಂದು ಅಭಿಮಾನಿಗಳು ಬಿಸಿಸಿಐ ಅನ್ನು ಪ್ರಶ್ನೆ ಮಾಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net