ಸೀನಿಯರ್ಸ್​ ಫಾಲೋ ಮಾಡಿದ ಜೂನಿಯರ್ಸ್​! ಮೊಹ್ಸಿನ್​ ನಖ್ವಿಯಿಂದ ಮೆಡಲ್​ ಧಿಕ್ಕರಿಸಿದ ಟೀಮ್ ಇಂಡಿಯಾ

ಏಷ್ಯಾಕಪ್​ ಫೈನಲ್​ನಲ್ಲಿ ಮೊಹ್ಸಿನ್​ ನಖ್ವಿಯಿಂದ ಪ್ರಶಸ್ತಿ ಪಡೆಯದ ಭಾರತ
ಏಷ್ಯಾಕಪ್​ ಫೈನಲ್​ನಲ್ಲಿ ಮೊಹ್ಸಿನ್​ ನಖ್ವಿಯಿಂದ ಪ್ರಶಸ್ತಿ ಪಡೆಯದ ಭಾರತ
Published on

ಪ್ರಮುಖ ಮುಖ್ಯಾಂಶಗಳು

  • ಹೈವೋಲ್ಟೇಜ್ ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಮೊಹ್ಸಿನ್ ನಖ್ವಿ
  • ನಖ್ವಿಯಿಂದ ರನ್ನರ್ ಅಪ್​ ಪದಕ ಪಡೆಯದ ಟೀಮ್ ಇಂಡಿಯಾ
  • ಅಫ್ಘಾನ್​ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮಿರ್ವೈಸ್ ಅಶ್ರಫ್ ಅವರಿಂದ ಭಾರತಕ್ಕೆ ಟ್ರೋಫಿ, ಮೆಡಲ್​ ಹಸ್ತಾಂತರ
Team India: ಇಂದು (ಡಿ.21) ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್​ 19 ಏಷ್ಯಾಕಪ್ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ 191 ರನ್​ಗಳಿಂದ ಭಾರತ ವಿರುದ್ಧ ಭಾರೀ ಅಂತರದ ಜಯ ಗಳಿಸಿತು. ಹೈವೋಲ್ಟೇಜ್ ಫೈನಲ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಸೋತಿದ್ದೇ ಆದರೂ ರನ್ನರ್​ ಅಪ್​ ಪ್ರಶಸ್ತಿ ಸ್ವೀಕರಿಸುವ ವೇಳೆ ಹಳೆಯ ಘಟನೆಯನ್ನು ನೆನಪಿಸಿದರು. 
ಪಂದ್ಯ ಸೋತ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಟೀಮ್ ಇಂಡಿಯಾ ನಾಯಕ ಆಯುಷ್ ಮಾತ್ರೆ ತಂಡದ ಪರವಾಗಿ ರನ್ನರ್ ಅಪ್​ ಬಹುಮಾನಗಳನ್ನು ಪಡೆಯಲು ವೇದಿಕೆ ಹತ್ತಲಿಲ್ಲ. ಇದಕ್ಕೆ ಕಾರಣ, ವೇದಿಕೆಯಲ್ಲಿ ಏಷ್ಯನ್ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಉಪಸ್ಥಿತಿ. ಈ ವರ್ಷ ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಪಂದ್ಯವನ್ನು ಗೆದ್ದ ಭಾರತ ಸೀನಿಯರ್ಸ್ ತಂಡಕ್ಕೆ ನಖ್ವಿ ಟ್ರೋಫಿ ಕೊಡದೆ ಹೊತ್ತೊಯ್ದರು. ಅಂದು ತನ್ನೊಂದಿಗೆ ಕಪ್​ ಎತ್ತೊಯ್ದ ಮೊಹ್ಸಿನ್​, ಸೂರ್ಯಕುಮಾರ್ ಯಾದವ್ ಪಡೆ ತನ್ನಿಂದ ಮೆಡಲ್​ ಸ್ವೀಕರಿಸಲು ವೇದಿಕೆಗೆ ಬರಲಿಲ್ಲ ಎಂಬ ಜಿದ್ದಿಗೆ ಸಿಡಿಮಿಡಿಗೊಂಡಿದ್ದರು. 
ಅಂದು ತಮ್ಮ ಸೀನಿಯರ್ಸ್​ ಹೇಗೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಅಧ್ಯಕ್ಷರಿಂದ ಪ್ರಶಸ್ತಿ ಸ್ವೀಕರಿಸಲಿಲ್ಲವೋ, ಇಂದು ಜೂನಿಯರ್ಸ್​ ಕೂಡ ಅವರ ಹಾದಿಯನ್ನು ಹಿಡಿದದ್ದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ವಿನ್ನರ್​ ಹಾಗೂ ರನ್ನರ್​ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲು ನಖ್ವಿ ವೇದಿಕೆಗೆ ಬಂದ ಕೂಡಲೇ ಹಿಂದೆ ಸರಿದ ಟೀಮ್ ಇಂಡಿಯಾ, ಅವರಿಂದ ಮೆಡಲ್​ಗಳನ್ನು ಸ್ವೀಕರಿಸಲು ಒಪ್ಪಲಿಲ್ಲ. ಈ ಬೆಳವಣಿಗೆ ನೋಡ್ತಿದ್ದಂತೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮಿರ್ವೈಸ್ ಅಶ್ರಫ್, ಭಾರತ ತಂಡಕ್ಕೆ ಟ್ರೋಫಿ ಹಸ್ತಾಂತರಿಸಿದರು.

ಪ್ರಶಸ್ತಿ ಹಸ್ತಾಂತರಕ್ಕೆ ಪ್ರತ್ಯೇಕ ವ್ಯವಸ್ಥೆ

ಅಂಡರ್ 19 ಏಷ್ಯಾಕಪ್‌ ಟೂರ್ನಿಯಲ್ಲಿ ಪಾಕ್​ ವಿರುದ್ಧ ಸೋತ ಬಳಿಕ, ನಖ್ವಿಯಿಂದ ರನ್ನರ್ ಅಪ್​ ಟ್ರೋಫಿ ಸ್ವೀಕರಿಸುವ ಅಗತ್ಯವಿಲ್ಲ ಎಂದು ಆಯುಷ್​ ಮಾತ್ರೆ ತಂಡ ನಿರ್ಧರಿಸಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆಯೋಜಕರು, ಈ ಸಂದರ್ಭದಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಭಾರತಕ್ಕೆ ಟ್ರೋಫಿಯನ್ನು ಪ್ರದಾನ ಮಾಡುವುದು ಸೂಕ್ತ ಎಂದು ನಿರ್ಧರಿಸಿದರು. ಅಂತೆಯೇ, ಟೀಮ್ ಇಂಡಿಯಾಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ನಖ್ವಿ ಇಲ್ಲದ ವೇದಿಕೆಗೆ ಕರೆಸಿ, ಮೆಡಲ್​ಗಳನ್ನು ನೀಡಿದರು,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net