124 ರನ್​ಗಳ ಭರ್ಜರಿ ಜಯ! ಲಂಕಾ ಪಡೆಯನ್ನು ಮಣಿಸಿ ಏಷ್ಯನ್​ ಗೇಮ್ಸ್​ ಫೈನಲ್​ಗೆ ಲಗ್ಗೆಯಿಟ್ಟ ಟೀಮ್ ಇಂಡಿಯಾ | Asian Games

124 ರನ್​ಗಳ ಭರ್ಜರಿ ಜಯ! ಲಂಕಾ ಪಡೆಯನ್ನು ಮಣಿಸಿ ಏಷ್ಯನ್​ ಗೇಮ್ಸ್​ ಫೈನಲ್​ಗೆ ಟೀಮ್ ಇಂಡಿಯಾ ಲಗ್ಗೆ | Asian Games
 Asian Games
124 ರನ್​ಗಳ ಭರ್ಜರಿ ಜಯ! ಲಂಕಾ ಪಡೆಯನ್ನು ಮಣಿಸಿ ಏಷ್ಯನ್​ ಗೇಮ್ಸ್​ ಫೈನಲ್​ಗೆ ಟೀಮ್ ಇಂಡಿಯಾ ಲಗ್ಗೆ
Published on: 
  • ಏಷ್ಯನ್ ಗೇಮ್ಸ್ 2026 ಪುರುಷರ ಕ್ರಿಕೆಟ್ ಎರಡನೇ ಸೆಮಿಫೈನಲ್ ಪಂದ್ಯ

  • ಭಾರತ ಕೊಟ್ಟ ರನ್ 170 ರನ್​ ಗುರಿ ತಲುಪಲು ಮುಗ್ಗರಿಸಿದ ಶ್ರೀಲಂಕಾ

  • 21 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 38 ರನ್ ಬಾರಿಸಿದ ವೈಭವ್ ಸೂರ್ಯವಂಶಿ

  • 46 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಿಡಿಸಿ ಅಜೇಯ 80 ರನ್ ಕಲೆಹಾಕಿದ ಇಶಾನ್ ಕಿಶನ್​

  • ಪಾಕಿಸ್ತಾನ ಮತ್ತು ಭಾರತ ನಡುವೆ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್​ ಫೈನಲ್​ ಪಂದ್ಯ

Asian Games: ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನ ಎರಡನೇ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ನೀಡಿದ 170 ರನ್‌ಗಳ ಗುರಿಯನ್ನು ತಲುಪಲು ಮುಗ್ಗರಿಸಿದ ಶ್ರೀಲಂಕಾ, ಕೇವಲ 50 ರನ್​ಗೆ ಆಲ್​ಔಟ್​ ಆಗುವ ಮೂಲಕ ಭಾರತದ ಎದುರು ಹೀನಾಯ ಸೋಲುಂಡಿದೆ.

ನಿಶಿನ್ ಮೈದಾನದಲ್ಲಿ ನಡೆದ ಇಂದಿನ ಸೆಮಿಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಆರಂಭಿಕ ಬ್ಯಾಟರ್​ಗಳಾಗಿ ಕಣಕ್ಕಿಳಿದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ (21 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್) 38 ರನ್ ಮತ್ತು ಅಭಿಷೇಕ್ ಶರ್ಮಾ ಕೇವಲ 7 ರನ್​ಗೆ ಔಟ್​ ಆಗಿ ನಿರಾಶೆ ಮೂಡಿಸಿದರು. ಅವರಂತೆಯೇ, ಸಂಜು ಸ್ಯಾಮ್ಸನ್ 7 ರನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಕೇವಲ 13 ರನ್ ಗಳಿಸಿ ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಸಂಪೂರ್ಣ ವಿಫಲರಾದರು.

ಟಾಪ್​ ಮತ್ತು ಮಿಡಲ್​ ಆರ್ಡರ್​ ಬ್ಯಾಟರ್​ಗಳೇ ಕೈಕೊಟ್ಟರೂ, ಕ್ರೀಸ್​ಗೆ ಅಂಟಿ ನಿಂತ ಇಶಾನ್ ಕಿಶನ್ ಮಾತ್ರ, ಟೀಮ್ ಇಂಡಿಯಾದ ಸ್ಕೋರ್​ 150 ಕೆಳಗೆ ಇಳಿಯಲು ಬಿಡಲಿಲ್ಲ. ಇಡೀ ಇನ್ನಿಂಗ್ಸ್ ಅನ್ನು ಕೊನೇ ಕ್ಷಣಗಳಲ್ಲಿ ಸಂಪೂರ್ಣವಾಗಿ ಬದಲಾಯಿಸಿದ ಇಶಾನ್, ಕೇವಲ 46 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನು, ಶ್ರೀಲಂಕಾ ಬೌಲರ್‌ಗಳ ಪೈಕಿ ಸಹನ್ ಅರಾಚ್ಚಿಗೆ 4 ಓವರ್‌ಗಳಲ್ಲಿ 2 ವಿಕೆಟ್, ತರಿಂದು ರತ್ನಾಯಕ 2 ವಿಕೆಟ್ ಪಡೆದರೆ, ವನುಜಾ ಸಹನ್ ಮತ್ತು ಲಸಿತ್ ಕ್ರುಸುಪುಲೆ ತಲಾ ಒಂದು ವಿಕೆಟ್ ಪಡೆದರು.

ಫೈನಲ್​ನಲ್ಲಿ ಪಾಕಿಸ್ತಾನ!

170 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಲಂಕಾ ಬ್ಯಾಟ್ಸ್​ಮನ್​ಗಳ ಪೈಕಿ ಒಬ್ಬರಂತೆ ಒಬ್ಬರು ಬಹುಬೇಗನೇ ಪೆವಿಲಿಯನ್​ ಹಾದಿ ಹಿಡಿಯುವ ಮೂಲಕ ಟೀಮ್ ಇಂಡಿಯಾಗೆ ಪೈಪೋಟಿಯೇ ಕೊಡದೆ ಸುಲಭವಾಗಿ ಸೋಲಿಗೆ ಹತ್ತಿರವಾದರು. ಒಟ್ಟು ಆರು ಲಂಕಾ ಬ್ಯಾಟರ್​ಗಳು ಶೂನ್ಯಕ್ಕೆ ಔಟ್ ಆಗಿ ತಂಡದ ಫೈನಲ್​ ಆಸೆಗೆ ತಣ್ಣೀರೆರಚಿದರು. ಇನ್ನು, ಭಾರತ ಪರ ಬೌಲಿಂಗ್​ನಲ್ಲಿ ಜಸ್ಪ್ರೀತ್​ ಬುಮ್ರಾ, ಅಭಿಷೇಕ್​ ಶರ್ಮಾ, ಅಕ್ಸರ್​ ಪಟೇಲ್​ ತಲಾ 2 ವಿಕೆಟ್​ ಪಡೆದರೆ, ವಾಷಿಂಗ್ಟನ್​ ಸುಂದರ್ ಒಂದು ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನ ಮೂಲಕ ಇದೀಗ ಏಷ್ಯನ್ ಗೇಮ್ಸ್​ ಫೈನಲ್​ನಲ್ಲಿ ಭಾರತ ತನ್ನ ಬದ್ಧ ವೈರಿ ಪಾಕಿಸ್ತಾನವನ್ನು ಎದುರಿಸಲಿದ್ದು, ಗೆಲುವು ನಮ್ಮದೇ, ಚಿನ್ನದ ಪದಕವೂ ನಮ್ಮದೇ ಎಂಬುದನ್ನು ಪರೋಕ್ಷವಾಗಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net