ಹರಿಣರ ಪಡೆ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಜಯ! ಆಸೀಸ್​ ಐತಿಹಾಸಿಕ ದಾಖಲೆ ಮುರಿದ ಟೀಮ್ ಇಂಡಿಯಾ

ಟೀಮ್ ಇಂಡಿಯಾ
ಟೀಮ್ ಇಂಡಿಯಾ
Published on

ಪ್ರಮುಖ ಮುಖ್ಯಾಂಶಗಳು

  • 3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್​ಗಳ ಜಯ
  • ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಮುನ್ನಡೆ
  • ಈ ಗೆಲುವಿನ ಮೂಲಕ ಆಸೀಸ್​ ಐತಿಹಾಸಿಕ ದಾಖಲೆ ಮುರಿದ ಟೀಮ್ ಇಂಡಿಯಾ
ನವದೆಹಲಿ: ನಿನ್ನೆ (ಡಿ.14) ಧರ್ಮಶಾಲಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದರೊಟ್ಟಿಗೆ ಆಸ್ಟ್ರೇಲಿಯಾದ ಐತಿಹಾಸಿಕ ದಾಖಲೆಯನ್ನು ಇದೀಗ ಸೂರ್ಯಕುಮಾರ್​ ಯಾದವ್ ಪಡೆ ಮುರಿದಿದೆ.
ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಐಡೆನ್ ಮಾರ್ಕ್ರಾಮ್ (61 ರನ್​, 6 ಬೌಂಡರಿ, 2 ಸಿಕ್ಸರ್) ಅರ್ಧಶತಕ ಬಾರಿಸುವ ಮೂಲಕ ತಂಡದ ಪರ ಏಕಾಂಗಿ ಹೋರಾಟ ನಡೆಸಿದರು. 20 ಓವರ್‌ ಅಂತ್ಯಕ್ಕೆ ಹರಿಣರ ಪಡೆ 117 ರನ್ ಕಲೆಹಾಕಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ, ಕೇವಲ 15.5 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ ಸುಲಭ ಗೆಲುವು ದಾಖಲಿಸಿತು.
ರೀಜಾ ಹೆಂಡ್ರಿಕ್ಸ್ (0), ಕ್ವಿಂಟನ್ ಡಿ ಕಾಕ್ (1), ಡೆವಾಲ್ಡ್ ಬ್ರೆವಿಸ್ (2), ಮತ್ತು ಟ್ರಿಸ್ಟಾನ್ ಸ್ಟಬ್ಸ್ (9) ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇನ್ನು ಟೀಮ್ ಇಂಡಿಯಾ ಪರ ಅರ್ಷ್​ದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು. ಭಾರತ ಪರ ಅಭಿಷೇಕ್ ಶರ್ಮ (18 ಎಸೆತ, 35 ರನ್), ಶುಭಮನ್ ಗಿಲ್ (28) ಮತ್ತು ತಿಲಕ್ ವರ್ಮಾ (ಅಜೇಯ 26) ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೀಡಿದರು.
3ನೇ ಟಿ20 ಪಂದ್ಯದ ಗೆಲುವಿನ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡವಾಗಿ ಹೊರಹೊಮ್ಮಿದೆ. ಆಸೀಸ್ ದಕ್ಷಿಣ ಆಫ್ರಿಕಾ ವಿರುದ್ಧ 19 ಟಿ20ಗಳನ್ನು ಗೆದ್ದಿದ್ದರೆ, ಭಾರತ ಈ ಗೆಲುವು ಸೇರಿ ಒಟ್ಟು 20 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಟಿ20 ಕ್ರಿಕೆಟ್‌ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳಿವು

  1. ಭಾರತ: 34 ಪಂದ್ಯ, 20 ಗೆಲುವು
  2. ಆಸ್ಟ್ರೇಲಿಯಾ: 28 ಪಂದ್ಯ, 19 ಗೆಲುವು
  3. ವೆಸ್ಟ್ ಇಂಡೀಸ್: 26 ಪಂದ್ಯ, 14 ಗೆಲುವು
  4. ಪಾಕಿಸ್ತಾನ: 27 ಪಂದ್ಯ, 14 ಗೆಲುವು
  5. ಇಂಗ್ಲೆಂಡ್: 28 ಪಂದ್ಯ, 13 ಗೆಲುವು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net