ಅಫ್ಘಾನಿಸ್ತಾನ ಎದುರು 8 ವಿಕೆಟ್‌ಗಳ ಗೆಲುವು; ಅಂಡರ್-19 ಏಷ್ಯಾಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ! Under-19 Asia Cup

Under-19 Asia Cup
ಅಫ್ಘಾನಿಸ್ತಾನ ಎದುರು 8 ವಿಕೆಟ್‌ಗಳ ಗೆಲುವು; ಅಂಡರ್-19 ಏಷ್ಯಾಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ! Under-19 Asia Cup
Published on: 

Under-19 Asia Cup: ಪ್ರಸಕ್ತ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್‌ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ನೇರವಾಗಿ ಫೈನಲ್​ಗೆ ಲಗ್ಗೆಯಿಟ್ಟಿದ್ದು, ಸಾಂಪ್ರಾದಾಯಿಕ ವೈರಿ ಪಾಕಿಸ್ತಾನ ಜತೆ ಟ್ರೋಫಿಗಾಗಿ ಸೆಣಸಲಿದೆ.

ಇಂದು ಒಮಾನ್​ನ ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಭಾರತ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿರುವುದು ಸದ್ಯ ಭಾರತೀಯ ಕ್ರಿಕೆಟ್​ ಪ್ರೇಮಿಗಳ ಖುಷಿಗೆ ಕಾರಣವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತು. ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಅಫ್ಘಾನ್ ಬ್ಯಾಟರ್‌ಗಳಿಗೆ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು.

228 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಲಕ್ಷ್ಯ ರಾಜೇಶ್ ರೈಚಂದಾನಿ ಹಾಗೂ ಆರ್ಯವೀರ್ ಸೆಹ್ವಾಗ್ ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ನಾಯಕ ಲಕ್ಷ್ಯ ರನ್‌ಗಳ ಹೊಳೆ ಹರಿಸಿದರೆ, ಮತ್ತೊಂದೆಡೆ ಆರ್ಯವೀರ್ ಸ್ಥಿರ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರೈಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 117 ರನ್‌ಗಳ ಮಹತ್ವದ ಜತೆಯಾಟವಾಡಿತು.

Also Read
ವೃದ್ಧೆಯ ಒಡೆವೆ ಕದ್ದು ಊರೋರಿಗೆ ಗಿಫ್ಟ್​ ಕೊಟ್ಟ ರೀಲ್​ ಸ್ಟಾರ್​ ಈತ! ದೇವರ ಪರಮ ಭಕ್ತ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದೇ ರೋಚಕ | Influencer
Under-19 Asia Cup

ಆರ್ಯವೀರ್ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್‌ಗೆ ಬಂದ ವಿಕೆ ವಿನೀತ್ ಕೂಡ ಉತ್ತಮ ಆಟ ಪ್ರದರ್ಶಿಸಿದರು. ನಾಯಕ ಲಕ್ಷ್ಯ ಶತಕದ ಹೊಸ್ತಿಲಲ್ಲಿ ಎಡವಿದರೂ, ವಿನೀತ್ ಅರ್ಧಶತಕ ಪೂರೈಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ನೂರ್ ಅಲಿ ನಿಯಾಜಿ ಎಸೆದ 36.5ನೇ ಓವರ್‌ನಲ್ಲಿ ವಿನೀತ್ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಭಾರತ 36.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಗುರಿ ತಲುಪಿತು.

ಈ ಗೆಲುವಿನೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿರುವ ಟೀಮ್ ಇಂಡಿಯಾ, ಇದೇ ಭಾನುವಾರ (ನ.15) ನಡೆಯಲಿರುವ ಪ್ರಶಸ್ತಿ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರತ–ಪಾಕಿಸ್ತಾನ ಫೈನಲ್ ಪಂದ್ಯದ ಕುತೂಹಲ ದುಪ್ಪಟ್ಟಾಗಿದೆ,(ಏಜೆನ್ಸೀಸ್).