ತೈಪೆ ಸಿಟಿ: ಉದಯೋನ್ಮುಖ ತಾರೆ ತನ್ವಿ ಶರ್ಮ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ್ದು, ತೈಪೆ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಅತಿ ಕಿರಿಯ ಷಟ್ಲರ್ಎನಿಸಿದ್ದಾರೆ.. 17 ವರ್ಷದ ತನ್ವಿ ಶರ್ಮ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಯೆಟ್ನಾಂನ ಥುಯ್ ಲಿನ್ಹಾ ಎನ್ಗ್ಯುಯೆನ್ ಎದುರು 21-16, 21-16 ನೇರ ಗೇಮ್ಗಳಿಂದ ಗೆದ್ದು, ಈ ಸಾಧನೆ ಮಾಡಿದರು. ಜತೆಗೆ 18 ವರ್ಷಗಳ ನಂತರ ತೈಪೆ ಓಪನ್ ಪ್ರಶಸ್ತಿ ಜಯಿಸಿದ ಭಾರತದ ಆಟಗಾರ್ತಿ ಎಂಬ ದಾಖಲೆಗೂ ಪಾತ್ರರಾದರು. ಕೊನೆಯದಾಗಿ 2008ರಲ್ಲಿ ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ್ದರು..ಪ್ರಶಸ್ತಿ ಕಾದಾಟದಲ್ಲಿ 36 ನಿಮಿಷಗಳಲ್ಲಿ ವಿಶ್ವ ನಂ.21 ಎನ್ಗ್ಯುಯೆನ್ರನ್ನು ಮಣಿಸಿದ ತನ್ವಿ ಶರ್ಮ (17 ವರ್ಷ, 222 ದಿನ), ಕೊರಿಯಾದ ತೈ ತಜು ಯಿಂಗ್ (18 ವರ್ಷ,190 ದಿನ) ದಾಖಲೆ ಮುರಿದು, ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ ಎನಿಸಿದರು. ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರ ಮಾಜಿ ಕೋಚ್ ಪರ್ಕ್ ತೇ ಸಾನ್ ಬಳಿ ತರಬೇತಿ ಪಡೆಯುತ್ತಿರುವ ತನ್ವಿ ಶರ್ಮ, ಜೂನಿಯರ್ ವಿಭಾಗದಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ ಸಹ ಆಗಿದ್ದಾರೆ. ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ತನ್ವಿ, 1 ಗೇಮ್ನಲ್ಲಿ ಮಾತ್ರ ಹಿನ್ನಡೆ ಕಂಡಿದ್ದರು. ಕಳೆದ ವರ್ಷ ಯುಎಸ್ ಓಪನ್, ಒಡಿಶಾ ಮಾಸ್ಟರ್ಸ್, ಗುವಾಹಟಿ ಮಾಸ್ಟರ್ಸ್ನಲ್ಲಿ ಅವರು ರನ್ನರ್ ಅಪ್ ಆಗಿದ್ದು ಅತ್ಯುತ್ತಮ ಸಾಧನೆ ಆಗಿತ್ತು..‘ಪ್ರಶಸ್ತಿ ಜಯಿಸುವ ನಿರೀಕ್ಷೆಯಿರಲಿಲ್ಲ. ಆದರೆ, ನೂರರಷ್ಟು ಶ್ರಮವಹಿಸಿ ಪಂದ್ಯದಲ್ಲಿ ಆಡಲು ಬಯಸಿದ್ದೆ. ಪಂದ್ಯದಿಂದ ಪಂದ್ಯಕ್ಕೆ ಪ್ರದರ್ಶನ ಉತ್ತಮ ಪಡಿಸಿಕೊಳ್ಳುವ ಗುರಿ ಇದೆ’ ಎಂದು ಪಂಜಾಬ್ನ ತನ್ವಿ ಸಂತಸ ವ್ಯಕ್ತಪಡಿಸಿದರು.