ಟಿ20 ವಿಶ್ವಕಪ್: ಇಂದಿನಿಂದ ಸೂಪರ್​-8 ಹಣಾಹಣಿ; ನ್ಯೂಜಿಲೆಂಡ್​-ಪಾಕಿಸ್ತಾನ ಮೊದಲ ಮುಖಾಮುಖಿ

ಟಿ20 ವಿಶ್ವಕಪ್: ಇಂದಿನಿಂದ ಸೂಪರ್​-8 ಹಣಾಹಣಿ; ನ್ಯೂಜಿಲೆಂಡ್​-ಪಾಕಿಸ್ತಾನ ಮೊದಲ ಮುಖಾಮುಖಿ
ಟಿ20 ವಿಶ್ವಕಪ್: ಇಂದಿನಿಂದ ಸೂಪರ್​-8 ಹಣಾಹಣಿ; ನ್ಯೂಜಿಲೆಂಡ್​-ಪಾಕಿಸ್ತಾನ ಮೊದಲ ಮುಖಾಮುಖಿ
Published on
ಕೊಲಂಬೊ/ನವದೆಹಲಿ: ಟಿ20 ವಿಶ್ವಕಪ್ (T20 World Cup)​ 10ನೇ ಆವೃತ್ತಿಯಲ್ಲಿ ಲೀಗ್​ ಹಂತದ 40 ಪಂದ್ಯಗಳ ಬಳಿಕ ಸೂಪರ್​-8 ಹಂತದ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಅಸೋಸಿಯೇಟ್​ ತಂಡಗಳನ್ನೂ ಒಳಗೊಂಡ ಲೀಗ್​ ಹಂತದಲ್ಲಿ ಕೆಲವು ನೀರಸ ಪಂದ್ಯಗಳಿದ್ದವು. ಆದರೆ ಸೂಪರ್​-8 ಹಂತದಲ್ಲಿ ಆಡುವ ಎಲ್ಲ 8 ತಂಡಗಳು ಬಲಿಷ್ಠವಾಗಿದ್ದು, ಜಿದ್ದಾಜಿದ್ದಿನ ಕಾದಾಟದ ನಿರೀಕ್ಷೆ ಇದೆ. ಇದರಿಂದಾಗಿ "ಅಸಲಿ ವಿಶ್ವ ಸಮರ ಈಗ ಶುರು' ಎಂದು ಬಣ್ಣಿಸಬಹುದು.
ಲೀಗ್​ ಹಂತದ 4 ಗುಂಪುಗಳಿಂದ ಅಗ್ರ 2 ತಂಡಗಳು ಸೂಪರ್​-8 ಹಂತಕ್ಕೇರಿವೆ. ಸೂಪರ್​-8 ಹಂತದಲ್ಲೂ ಎರಡು ಗುಂಪುಗಳಿವೆ. ಹಾಲಿ ಚಾಂಪಿಯನ್​ ಹಾಗೂ ಆತಿಥೇಯ ಭಾರತ ತಂಡವನ್ನು ಒಳಗೊಂಡ ಗ್ರೂಪ್​-1ರ ಪಂದ್ಯಗಳು ಭಾರತದಲ್ಲಿ ನಡೆಯಲಿದ್ದರೆ, ಜಂಟಿ ಆತಿಥೇಯ ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ಒಳಗೊಂಡ ಗ್ರೂಪ್​-2ರ ಪಂದ್ಯಗಳು ದ್ವೀಪರಾಷ್ಟ್ರದ ಆತಿಥ್ಯದಲ್ಲಿ ನಡೆಯಲಿವೆ. ಎರಡೂ ಗುಂಪಿನಲ್ಲಿ ರೌಂಡ್​ ರಾಬಿನ್​ ಮಾದರಿಯಲ್ಲಿ ಸೂಪರ್​-8 ಪಂದ್ಯಗಳು ನಡೆಯಲಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ ಹಂತಕ್ಕೇರಲಿವೆ.
ಮಾರ್ಚ್​ 1ರವರೆಗೆ ಸೂಪರ್​-8 ಹಂತದ ಪಂದ್ಯಗಳು ನಡೆಯಲಿದ್ದು, ಮಾರ್ಚ್​ 4, 5ಕ್ಕೆ ಸೆಮಿಫೈನಲ್​ ಪಂದ್ಯಗಳು ನಡೆಯಲಿವೆ. ಮಾರ್ಚ್​ 8ಕ್ಕೆ ಫೈನಲ್​ ಪಂದ್ಯ ನಿಗದಿಯಾಗಿದೆ.
ಗುಂಪು ವಿಂಗಡನೆಯಲ್ಲಿ ಲೋಪ: ಲೀಗ್​ ಹಂತದಲ್ಲಿ ಅಜೇಯವಾಗುಳಿದ ಅಥವಾ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎಲ್ಲ 4 ತಂಡಗಳು ಒಂದೇ ಗುಂಪಿನಲ್ಲಿವೆ. ಐಸಿಸಿ ಟೂರ್ನಿಗೆ ಮೊದಲೇ ನೀಡಿದ ಶ್ರೇಯಾಂಕದ ಅನ್ವಯ, ಸೂಪರ್​-8ರಲ್ಲಿ ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಇದರಿಂದಾಗಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳಿಗೆ ಯಾವುದೇ ಲಾಭ ಇಲ್ಲದಂತಾಗಿದೆ. ಗುಂಪಿನಲ್ಲಿ 2ನೇ ಸ್ಥಾನ ಪಡೆದ ತಂಡಗಳು ಒಂದೇ ಗುಂಪಿನಲ್ಲಿದ್ದು, ಲೀಗ್​ನಲ್ಲಿ 2ನೇ ಸ್ಥಾನ ಪಡೆದ 2 ತಂಡಗಳಿಗೆ ಸೆಮಿಫೈನಲ್​ಗೇರುವ ಅವಕಾಶ ಸಿಕ್ಕಂತಾಗಿದೆ ಮತ್ತು ಲೀಗ್​ನಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ಸೂಪರ್​-8ನಲ್ಲೇ ಹೊರಬೀಳುವುದು ಕೂಡ ಖಚಿತವಾಗಿದೆ.
ಸೂಪರ್​-8
ಗ್ರೂಪ್​-1: ಭಾರತ, ಜಿಂಬಾಬ್ವೆ, ದಣ ಆಫ್ರಿಕಾ, ವೆಸ್ಟ್​ ಇಂಡೀಸ್​
ಗ್ರೂಪ್​-2: ಪಾಕಿಸ್ತಾನ, ನ್ಯೂಜಿಲೆಂಡ್​, ಶ್ರೀಲಂಕಾ, ಇಂಗ್ಲೆಂಡ್​
ಸೆಮಿಫೈನಲ್​ ಲೆಕ್ಕಾಚಾರ
ಸೂಪರ್​-8 ಹಂತದಲ್ಲಿ ಎಲ್ಲ ತಂಡಗಳಿಗೆ ತಲಾ 3 ಪಂದ್ಯಗಳನ್ನು ಆಡುವ ಅವಕಾಶ ಲಭಿಸಲಿದೆ. ಈ ಪೈಕಿ ಎಲ್ಲ 3 ಪಂದ್ಯಗಳನ್ನು ಗೆದ್ದ ತಂಡ ಸೆಮಿಫೈನಲ್​ಗೇರುವುದು ಖಚಿತ. ಇನ್ನು ಎರಡು ಪಂದ್ಯ ಗೆದ್ದ ತಂಡಕ್ಕೂ ಸೆಮಿಫೈನಲ್​ಗೇರುವ ಅವಕಾಶ ಇರಲಿದೆ. ಆದರೆ ಒಂದು ಗುಂಪಿನ 3 ತಂಡಗಳು ತಲಾ 2 ಪಂದ್ಯ ಗೆದ್ದರೆ ಆಗ ರನ್​ರೇಟ್​ ನಿರ್ಣಾಯಕ ಪಾತ್ರ ವಹಿಸಲಿದೆ. ಇನ್ನು ಒಂದು ಪಂದ್ಯವನ್ನಷ್ಟೇ ಗೆದ್ದ ತಂಡ ಉಪಾಂತ್ಯಕ್ಕೇರುವ ಆಸೆ ಕೈಚೆಲ್ಲಬೇಕಾಗುತ್ತದೆ. ಆದರೆ ತೀರಾ ಅಪರೂಪದ ಸಂದರ್ಭ ಎದುರಾದರೆ, ಅಂದರೆ ಗುಂಪಿನಲ್ಲಿ ಒಂದು ತಂಡ ಎಲ್ಲ 3 ಪಂದ್ಯ ಗೆದ್ದು, ಉಳಿದ 3 ತಂಡಗಳು ತಲಾ ಒಂದರಲ್ಲಿ ಮಾತ್ರ ಗೆದ್ದರೆ ಆಗ ರನ್​ರೇಟ್​ ಲೆಕ್ಕಾಚಾರದ ಅನ್ವಯ ಸೆಮಿಫೈನಲ್​ಗೇರಬಹುದು. ಆದರೆ ಒಂದು ಗುಂಪಿನಲ್ಲಿ 2 ತಂಡಗಳು ತಲಾ 2 ಪಂದ್ಯ ಗೆದ್ದರೆ ಆಗ 1 ಪಂದ್ಯ ಗೆದ್ದ ತಂಡ ಔಟ್​ ಎನ್ನಬಹುದು. ಹೀಗಾಗಿ ಸೂಪರ್​-8 ಹಂತದ ಪಂದ್ಯಗಳನ್ನು ಎಲ್ಲ ತಂಡಗಳು "ನಾಕೌಟ್​' ಮಾದರಿಯಲ್ಲೇ ಆಡುವ ನಿರೀಕ್ಷೆ ಇದೆ.
ಪಾಕ್​ ಎದುರು ಕಿವೀಸ್​ಗೆ ಸ್ಪಿನ್​ ಟೆಸ್ಟ್​
ಸೂಪರ್​-8 ಹಂತದಲ್ಲಿ ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ ಮತ್ತು ಪಾಕಿಸ್ತಾನ ತಂಡಗಳು ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ಸೆಣಸಲಿವೆ. ಈ ಮುಖಾಮುಖಿಯಲ್ಲಿ ನ್ಯೂಜಿಲೆಂಡ್​ ತಂಡದ ಬ್ಯಾಟರ್​ಗಳು ಪಾಕಿಸ್ತಾನ ತಂಡದ ಸ್ಪಿನ್​ ಬೌಲರ್​ಗಳ ಸವಾಲು ಎದುರಿಸಲಿದ್ದಾರೆ. ಲೀಗ್​ ಹಂತದಲ್ಲಿ ಉಭಯ ತಂಡಗಳು ತಲಾ 3 ಪಂದ್ಯಗಳಲ್ಲಿ ಗೆದ್ದಿವೆ. ಆದರೆ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋತಿದ್ದರೆ, ನ್ಯೂಜಿಲೆಂಡ್​ ತಂಡ ಹಾಲಿ ರನ್ನರ್​ಅಪ್​ ದ. ಆಫ್ರಿಕಾ ಎದುರು ಮುಗ್ಗರಿಸಿತ್ತು. ಪಾಕ್​ ತನ್ನ ಎಲ್ಲ ಪಂದ್ಯಗಳನ್ನು ಲಂಕಾದಲ್ಲೇ ಆಡುತ್ತಿದ್ದರೆ, ಕಿವೀಸ್​ಗೆ ಇದು ಲಂಕಾದಲ್ಲಿ ಟೂರ್ನಿಯ ಮೊದಲ ಪಂದ್ಯವೆನಿಸಿದೆ. ಕಿವೀಸ್​ ಆರಂಭಿಕರಾದ ಟಿಮ್​ ಸೀರ್ಟ್​ ಮತ್ತು ಫಿನ್​ ಅಲೆನ್​ ಒಟ್ಟಾರೆ 3 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಕಿವೀಸ್​ ಮಧ್ಯಮ ಕ್ರಮಾಂಕ ಇನ್ನೂ ಸ್ಥಿರ ನಿರ್ವಹಣೆ ತೋರಿಸಿಲ್ಲ. ಲಂಕಾದ ಸ್ಪಿನ್​ ಸ್ನೇಹಿ ಪಿಚ್​ ಕಿವೀಸ್​ಗೆ ಇನ್ನಷ್ಟು ಸತ್ವಪರೀಕ್ಷೆ ಒಡ್ಡಲಿದೆ. ವಿವಾದಾತ್ಮಕ ಸ್ಪಿನ್ನರ್​ ಉಸ್ಮಾನ್​ ತಾರಿಖ್​ ಜತೆಗೆ ಅಬ್ರಾರ್​ ಅಹ್ಮದ್​, ಸೈಮ್​ ಆಯುಬ್​, ಶಾದಾಬ್​ ಖಾನ್​, ಮೊಹಮದ್​ ನವಾಜ್​, ನಾಯಕ ಸಲ್ಮಾನ್​ ಅಘಾ ಸ್ಪಿನ್​ ದಾಳಿಯ ಸವಾಲು ಎದುರಾಗಲಿದೆ. ಪಾಕಿಸ್ತಾನಕ್ಕೆ ಬ್ಯಾಟಿಂಗ್​ ವಿಭಾಗದಲ್ಲಿ ಸಾಹಿಬ್​ಜಾದಾ ರ್ಹಾನ್​ (220) ಆಸರೆಯಾಗಿದ್ದರೂ, ಅನುಭವಿ ಬಾಬರ್​ ಅಜಮ್​ ರನ್​ಬರದೊಂದಿಗೆ ಸ್ಟ್ರೈಕ್​​ರೇಟ್​ ಕೂಡ ನೀರಸವೆನಿಸಿದೆ. ಭಾರತ ವಿರುದ್ಧ ದುಬಾರಿ ಎನಿಸಿದ್ದ ವೇಗಿ ಶಹೀನ್​ ಷಾ ಅಫ್ರಿದಿ ಅವರನ್ನು ನಮೀಬಿಯಾ ಎದುರು 11ರ ಬಳಗದಿಂದ ಕೈಬಿಟ್ಟಿದ್ದ ಪಾಕ್​, ಈ ಬಾರಿ ಬಾಬರ್​ರನ್ನೂ ಹೊರಗಿಟ್ಟು ಖರ್​ ಜಮಾನ್​ಗೆ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ. ನಾಯಕ ಮಿಚೆಲ್​ ಸ್ಯಾಂಟ್ನರ್​, ಇಶ್​ ಸೋಧಿ, ರಚಿನ್​ ರವೀಂದ್ರ, ಗ್ಲೆನ್​ ಫಿಲಿಪ್ಸ್​ ಒಳಗೊಂಡ ಕಿವೀಸ್​ ಸ್ಪಿನ್​ ವಿಭಾಗವೂ ಪರಿಣಾಮಕಾರಿ ಎನಿಸುವ ಸಾಮರ್ಥ್ಯ ಹೊಂದಿದೆ. ವೇಗದ ಬೌಲಿಂಗ್​ನಲ್ಲಿ ಲಾಕಿ ಫಗ್ಯುರ್ಸನ್​, ಮ್ಯಾಟ್​ ಹೆನ್ರಿ, ಜೇಕಬ್​ ಡಫಿ, ಜೇಮ್ಸ್​ ನೀಶಮ್​ ಬಲ ತುಂಬಲಿದ್ದಾರೆ.
ಪಾಕ್​ ವಿರುದ್ಧದ ಕೊನೇ 16 ಟಿ20 ಪಂದ್ಯಗಳಲ್ಲಿ 12ರಲ್ಲಿ ಕಿವೀಸ್​ ಜಯಿಸಿದೆ. ಆದರೆ ಟಿ20 ವಿಶ್ವಕಪ್​ನಲ್ಲಿ ಕಿವೀಸ್​ ವಿರುದ್ಧ ಪಾಕ್​ ಉತ್ತಮ ದಾಖಲೆ ಹೊಂದಿದೆ.
*ಆರಂಭ: ರಾತ್ರಿ 7.00
*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​
ಮುಖಾಮುಖಿ: 49
ನ್ಯೂಜಿಲೆಂಡ್​: 23
ಪಾಕಿಸ್ತಾನ: 24
ರದ್ದು: 2
ಟಿ20 ವಿಶ್ವಕಪ್​ನಲ್ಲಿ: 7
ನ್ಯೂಜಿಲೆಂಡ್​: 2
ಪಾಕಿಸ್ತಾನ: 5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net