ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಗೆಲುವಿಗೆ 6 ಕಾರಣಗಳು...

ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಗೆಲುವಿನ ಕಾರಣಗಳು...
ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಗೆಲುವಿನ ಕಾರಣಗಳು...
Published on
ಬೆಂಗಳೂರು: ಟೀಮ್​ ಇಂಡಿಯಾ 3ನೇ ಬಾರಿ ಟಿ20 ವಿಶ್ವಕಪ್ (T20 World Cup)​ ಜಯಿಸುವಲ್ಲಿ ಹಲವು ವ್ಯಕ್ತಿಗಳು, ನಿರ್ಧಾರಗಳು ಮತ್ತು ಸನ್ನಿವೇಶಗಳು ಪ್ರಮುಖ ಪಾತ್ರ ವಹಿಸಿವೆ. ಇದು ಬರೀ ಟೂರ್ನಿ ಆರಂಭಗೊಂಡ ಬಳಿಕವಷ್ಟೇ ಅಲ್ಲ, ರೋಹಿತ್​ ಶರ್ಮ-ವಿರಾಟ್​ ಕೊಹ್ಲಿ ಅವರ ಟಿ20 ನಿವೃತ್ತಿಯ ನಂತರ ಕಳೆದ 2 ವರ್ಷಗಳಿಂದ ಭಾರತ ತಂಡವನ್ನು ಬಲಿಷ್ಠವಾಗಿ ಕಟ್ಟುವ ಪ್ರಕ್ರಿಯೆಯ ಭಾಗವಾಗಿದ್ದವು. ಭಾರತ ತಂಡ ಯಶಸ್ಸಿಗೆ ನೆರವಾದ ಅಂಥ ಕೆಲ ಪ್ರಮುಖಾಂಶಗಳ ಸಂಪ್ತ ವಿವರ ಇಲ್ಲಿದೆ...
ಮ್ಯಾನೇಜ್​ಮೆಂಟ್​ ದಿಟ್ಟ ನಿರ್ಧಾರ
ಭಾರತ ತಂಡದ ಯಶಸ್ಸಿನಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​ ಅವರು ತೆಗೆದುಕೊಂಡ ಕೆಲವು ದಿಟ್ಟ ನಿರ್ಧಾರಗಳೂ ಪ್ರಮುಖ ಪಾತ್ರವಹಿಸಿವೆ. 2024ರ ವಿಶ್ವಕಪ್​ ಬಳಿಕ ರೋಹಿತ್​ ಶರ್ಮ ಉತ್ತರಾಧಿಕಾರಿಯಾಗಿ ಹಾರ್ದಿಕ್​ ಪಾಂಡ್ಯ ಬದಲಿಗೆ ಸೂರ್ಯಕುಮಾರ್​ಗೆ ನಾಯಕತ್ವ ನೀಡಿದಲ್ಲಿಂದಲೇ ಟಿ20 ತಂಡದ ಆಯ್ಕೆಯಲ್ಲಿ ಕೆಲ ನಿಷ್ಠುರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೂಪರ್​ಸ್ಟಾರ್​ ಸಂಸತಿಗೆ ಮನ್ನಣೆ ನೀಡದೆ ತಂಡದ ಹಿತದೃಷ್ಟಿಯನ್ನೇ ಗಮನದಲ್ಲಿಟ್ಟುಕೊಂಡು ಟಿ20 ವಿಶ್ವಕಪ್​ ತಂಡದಿಂದ ಉಪನಾಯಕ ಶುಭಮಾನ್​ ಗಿಲ್​, ಯಶಸ್ವಿ ಜೈಸ್ವಾಲ್​, ಫಿನಿಷರ್​ ಜಿತೇಶ್​ ಶರ್ಮರನ್ನು ಕೈಬಿಡಲಾಗಿತ್ತು. ಕಿಶನ್​ ಮಾತ್ರವಲ್ಲ, ಕಳೆದ 2 ವರ್ಷಗಳಿಂದ ಟಿ20 ಆಡಿರದ ವೇಗಿ ಮೊಹಮದ್​ ಸಿರಾಜ್​ರನ್ನು ಕೊನೇಕ್ಷಣದಲ್ಲಿ ತಂಡಕ್ಕೆ ಸೇರಿಸಲು ಕೂಡ ಹಿಂದೇಟು ಹಾಕಲಿಲ್ಲ.
ಬುಮ್ರಾ ಬೌಲಿಂಗ್​ ಬಲ
ಭಾರತ ಆಡಿದ ಕೊನೇ 3 ಪಂದ್ಯಗಳಲ್ಲಿ ರನ್​ಪ್ರವಾಹ ಹರಿದು ಬೌಲರ್​ಗಳು ತೀವ್ರ ದಂಡನೆಗೆ ಒಳಗಾದ ನಡುವೆಯೂ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಬಿಗಿ ದಾಳಿಯೊಂದಿಗೆ ಎದುರಾಳಿಯನ್ನು ಕಾಡಿದರು. ಈ ಮೂಲಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅದರಲ್ಲೂ ಅವರ ಶ್ರೇಷ್ಠ ಬೌಲಿಂಗ್​ (15ಕ್ಕೆ 4) ಫೈನಲ್​ ಪಂದ್ಯದಲ್ಲಿ ಹೊರಹೊಮ್ಮಿದ್ದು ವಿಶೇಷವಾಗಿತ್ತು. ಇಂಗ್ಲೆಂಡ್​ ವಿರುದ್ಧದ ಸೆಮೀಸ್​ನಲ್ಲಿ ಭಾರತ 253 ರನ್​ ಸಿಡಿಸಿಯೂ ಸೋಲುವ ಭೀತಿ ಎದುರಿಸಿದಾಗ ಬುಮ್ರಾ ಇನಿಂಗ್ಸ್​ನ 18ನೇ ಓವರ್​ನಲ್ಲಿ ಕೇವಲ 6 ರನ್​ ಬಿಟ್ಟುಕೊಟ್ಟಿದ್ದು ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು. 
ಸ್ಯಾಮ್ಸನ್​ ಸ್ಪೆಷಲ್​ ಇನಿಂಗ್ಸ್​
ಕೇರಳದ ವಿಕೆಟ್​ ಕೀಪರ್​-ಬ್ಯಾಟರ್​ ಸಂಜು ಸ್ಯಾಮ್ಸನ್​ ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುತ್ತಿದ್ದರೂ, ಅಸ್ಥಿರ ನಿರ್ವಹಣೆಯಿಂದಾಗಿ ಎಂದೂ ತಂಡದಲ್ಲಿ ಭದ್ರ ಸ್ಥಾನ ಕಂಡಿರಲಿಲ್ಲ. ಟಿ20 ವಿಶ್ವಕಪ್​ಗೆ ಮುನ್ನವೂ ರನ್​ಬರ ಎದುರಿಸಿದ್ದ ಅವರನ್ನು ಆರಂಭದಲ್ಲಿ ಆಡುವ 11ರ ಬಳಗಕ್ಕೆ ಪರಿಗಣಿಸಿರಲಿಲ್ಲ. ಆದರೆ ತಂಡದ ಅಗ್ರ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್​ಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸ್ಯಾಮ್ಸನ್​ಗೆ ಟೂರ್ನಿಯ ನಿರ್ಣಾಯಕ ಹಂತದಲ್ಲಿ ಮತ್ತೆ ಅವಕಾಶ ಕಲ್ಪಿಸಲಾಯಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಅವರು ವಿಂಡೀಸ್​ ವಿರುದ್ಧದ ನಿರ್ಣಾಯಕ ಸೂಪರ್​-8 ಪಂದ್ಯ, ಸೆಮೀಸ್​, ಫೈನಲ್​ನಲ್ಲಿ ಭಾರತದ ಗೆಲುವಿನ ರೂವಾರಿ ಎನಿಸಿದರು.
ಸೂಪರ್​ ಕ್ಯಾಚ್​ಗಳು
ಕ್ಯಾಚ್​ಗಳು ಪಂದ್ಯ ಗೆಲ್ಲಿಸುತ್ತವೆ ಎಂಬುದು ಸುಳ್ಳಲ್ಲ. 1983ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ನಾಯಕ ಕಪಿಲ್​ ದೇವ್​ ಹಿಡಿದ ವಿವ್​ ರಿಚರ್ಡ್ಸ್​ ಅವರ ಕ್ಯಾಚ್​, 2007ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಶ್ರೀಶಾಂತ್​ ಹಿಡಿದ ಮಿಸ್ಬಾ ಉಲ್​ ಹಕ್​ ಕ್ಯಾಚ್​, 2024ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಸೂರ್ಯಕುಮಾರ್​ ಬೌಂಡರಿ ಗೆರೆ ಬಳಿ ಹಿಡಿದ ಡೇವಿಡ್​ ಮಿಲ್ಲರ್​ ಕ್ಯಾಚ್​ಗಳು ಭಾರತಕ್ಕೆ ಕಪ್​ ಗೆದ್ದುಕೊಟ್ಟಿದ್ದವು. ಈ ಬಾರಿ ಅದೇ ರೀತಿಯ 2 ಅದ್ಭುತ ಕ್ಯಾಚ್​ಗಳನ್ನು ಅಕ್ಷರ್​ ಪಟೇಲ್​ ಸೆಮಿಫೈನಲ್​ನಲ್ಲಿ ಹಿಡಿದಿದ್ದರು. ಮೊದಲಿಗೆ ಇಂಗ್ಲೆಂಡ್​ ನಾಯ ಹ್ಯಾರಿ ಬ್ರೂಕ್​ ಕ್ಯಾಚ್​ಅನ್ನು ಸುಮಾರು 18 ಮೀಟರ್​ ದೂರ ಓಡಿ ಹೋಗಿ ಹಿಡಿದರು. ಬಳಿಕ ವಿಲ್​ ಜಾಕ್ಸ್​ ಹೊಡೆದ ಚೆಂಡನ್ನು ಹಿಡಿದು ಬೌಂಡರಿ ಗೆರೆ ದಾಟುವ ಮುನ್ನ ಶಿವಂ ದುಬೆಗೆ ಪಾಸ್​ ಮಾಡಿದರು. ಇವೆರಡು ಕ್ಯಾಚ್​ಗಳು ಭಾರತ ಫೈನಲ್​ಗೇರುವಲ್ಲಿ ಮಹತ್ವದ್ದಾಗಿದ್ದವು.
ಹರಿಣಗಳ ಎಚ್ಚರಿಕೆ ಗಂಟೆ
ಟಿ20 ಕ್ರಿಕೆಟ್​ನಲ್ಲಿ ಕಳೆದ 2 ವರ್ಷಗಳಿಂದ ಸತತ ಗೆಲುವನ್ನೇ ಕಂಡಿದ್ದರಿಂದ ಭಾರತ ತಂಡದ ಕೆಲ ದೌರ್ಬಲ್ಯಗಳು ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಬಂದರೂ ಗೆಲುವಿನ ಓಟದ ನಡುವೆ ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಸೂಪರ್​-8 ಹಂತದ ಮೊದಲ ಪಂದ್ಯದಲ್ಲಿ ದ. ಆಫ್ರಿಕಾ ಎದುರು ಕಂಡ ಸೋಲು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಇದರಿಂದ ಎಚ್ಚೆತ್ತ ಭಾರತ ತಂಡ ಎಡಗೈ ಬ್ಯಾಟರ್​ಗಳಿಂದಲೇ ತುಂಬಿದ್ದ ಅಗ್ರ ಕ್ರಮಾಂಕದಲ್ಲಿ ಬಲಗೈ ಬ್ಯಾಟರ್​ಗೂ (ಸ್ಯಾಮ್ಸನ್​) ಅವಕಾಶ ಕಲ್ಪಿಸಿತು. ಫೀಲ್ಡಿಂಗ್​ ವಿಭಾಗವನ್ನು ಸುಧಾರಿಸಲು ಆದ್ಯತೆ ನೀಡಿತು. ಆಫ್​ ಸ್ಪಿನ್ನರ್​ ಎದುರಿನ ವೈಫಲ್ಯವನ್ನೂ ನಿವಾರಿಸಲು ಪ್ರಯತ್ನಿಸಿತು.
ಕೊನೇಕ್ಷಣದಲ್ಲಿ ಕಿಶನ್​ ಸೇರ್ಪಡೆ
ಕಳೆದ 2 ವರ್ಷಗಳಿಂದ ಭಾರತ ತಂಡದಿಂದ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದ ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ರನ್ನು ಕೊನೇಕ್ಷಣದಲ್ಲಿ ಟಿ20 ವಿಶ್ವಕಪ್​ ತಂಡಕ್ಕೆ ಸೇರಿಸಿಕೊಂಡ ಭಾರತದ ನಡೆ ನಿರ್ಣಾಯಕ ಎನಿಸಿತು. ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಒಟ್ಟಾರೆ 517 ರನ್​ ಮತ್ತು ಫೈನಲ್​ ಶತಕ ಸಿಡಿಸಿ ಜಾರ್ಖಂಡ್​ ಗೆಲುವಿನ ರೂವಾರಿ ಎನಿಸಿದ್ದ ಕಿಶನ್​ರ ಭರ್ಜರಿ ಫಾರ್ಮ್​ಗೆ ಮನ್ನಣೆ ನೀಡಿದ್ದು ಲಾಭದಾಯಕ ಎನಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net