ಐಸಿಸಿ ಲೆಕ್ಕಾಚಾರದ ಅನ್ವಯ, ಪಾಕಿಸ್ತಾನ, ಶ್ರೀಲಂಕಾ ತಂಡಗಳೆರಡೂ ಉಪಾಂತ್ಯಕ್ಕೆ ಏರದಿದ್ದರೆ, ಎರಡೂ ಸೆಮಿಫೈನಲ್ ಪಂದ್ಯಗಳು ಭಾರತದ ಮುಂಬೈ (ಮಾ.5) ಮತ್ತು ಕೋಲ್ಕತದಲ್ಲೇ (ಮಾ.4) ನಡೆಯಲಿವೆ. ಆದರೆ ಪಾಕಿಸ್ತಾನ ಸೆಮಿಫೈನಲ್ಗೇರಿದರೆ, ಮಾರ್ಚ್ 4ಕ್ಕೆ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲೇ ಆಡಲಿದೆ. ಇನ್ನು ಭಾರತ ತಂಡ ಸೆಮಿಫೈನಲ್ಗೇರಿ, ಪಾಕಿಸ್ತಾನ ಎದುರಾಳಿಯಾದರೆ ಆಗ ಶ್ರೀಲಂಕಾದಲ್ಲೇ ಸೆಮೀಸ್ ಆಡಬೇಕಾಗುತ್ತದೆ.
ಇನ್ನು ಶ್ರೀಲಂಕಾಕ್ಕೆ ತವರಿನಲ್ಲಿ ಸೆಮೀಸ್ ಆಡುವ ಅವಕಾಶ ಸಿಗಬೇಕಾದರೆ, ಭಾರತ ತಂಡ ಎದುರಾಳಿಯಾಗಬಾರದು ಮತ್ತು ಪಾಕಿಸ್ತಾನವೂ ಉಪಾಂತ್ಯಕ್ಕೇರಬಾರದು. ಭಾರತ ಎದುರಾಳಿಯಾದರೆ ಮತ್ತು ಪಾಕ್ ತಂಡವೂ ಉಪಾಂತ್ಯಕ್ಕೇರಿದರೆ ಲಂಕಾ ತಂಡ ಮುಂಬೈನಲ್ಲೇ ಸೆಮೀಸ್ ಆಡಬೇಕಾಗುತ್ತದೆ. ಯಾಕೆಂದರೆ ಮುಂಬೈನಲ್ಲಿ ಒಂದು ಸೆಮೀಸ್ ನಡೆಯುವುದು ನಿಶ್ಚಿತ.
ಇನ್ನು ಭಾರತ ತಂಡಕ್ಕೆ ಪಾಕಿಸ್ತಾನ ತಂಡ ಎದುರಾಳಿಯಾಗದಿದ್ದರೆ, ಮಾ.5ಕ್ಕೆ ಮುಂಬೈನಲ್ಲಿ ಸೆಮೀಸ್ ಆಡಲಿದೆ. ಪಾಕಿಸ್ತಾನ ಎದುರಾಳಿಯಾದರೆ ಭಾರತ ಮಾ.4ಕ್ಕೆ ಕೊಲಂಬೊದಲ್ಲೇ ಸೆಮೀಸ್ ಆಡಬೇಕಾಗುತ್ತದೆ. ಲಂಕಾ-ಪಾಕ್ ಸೂಪರ್-8ರಲ್ಲಿ ಒಂದೇ ಗುಂಪಿನಲ್ಲಿರುವುದರಿಂದ ಸೆಮೀಸ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯೇ ಇಲ್ಲ.
ಭಾರತ, ಪಾಕಿಸ್ತಾನ, ಶ್ರೀಲಂಕಾ ಈ ಮೂರೂ ತಂಡಗಳು ಉಪಾಂತ್ಯಕ್ಕೇರದಿದ್ದರೆ, ಎರಡೂ ಸೆಮೀಸ್ ಭಾರತದಲ್ಲೇ ನಡೆಯಲಿವೆ. ಆಗ ಸೂಪರ್-8 ಗ್ರೂಪ್-1ರ ಅಗ್ರಸ್ಥಾನಿ ಮತ್ತು ಗ್ರೂಪ್ 2ರ ದ್ವೀತಿಯ ಸ್ಥಾನಿ ಮಾ.4ಕ್ಕೆ ಕೋಲ್ಕತದಲ್ಲಿ ಹಾಗೂ ಗ್ರೂಪ್-2ರ ಅಗ್ರಸ್ಥಾನಿ ಮತ್ತು ಗ್ರೂಪ್-1ರ ದ್ವೀತಿಯ ಸ್ಥಾನಿ ಮಾ.5ಕ್ಕೆ ಮುಂಬೈನಲ್ಲಿ ಸೆಮಿಫೈನಲ್ನಲ್ಲಿ ಮುಖಾಮುಖಿ ಆಗಲಿವೆ.
ಇನ್ನು ಪಾಕಿಸ್ತಾನ ಫೈನಲ್ಗೇರಿದರೆ ಮಾರ್ಚ್ 8ಕ್ಕೆ ಕೊಲಂಬೊದಲ್ಲೇ ಪ್ರಶಸ್ತಿ ಹೋರಾಟ ನಡೆಯಲಿದೆ. ಪಾಕ್ ಅರ್ಹತೆ ಗಳಿಸದೆ, ಶ್ರೀಲಂಕಾ ಅಥವಾ ಬೇರಾವುದೇ ತಂಡ ಫೈನಲ್ಗೇರಿದರೂ, ಪ್ರಶಸ್ತಿ ಕಾದಾಟ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಯಲಿದೆ. ಅಂದರೆ ಪಾಕ್ ಎದುರಾಳಿಯಾದರೆ ಮಾತ್ರ ಲಂಕಾಗೆ ತವರಿನಲ್ಲಿ ಫೈನಲ್ ಆಡುವ ಅವಕಾಶ ಲಭಿಸಲಿದೆ. ಇನ್ನು ಪಾಕ್ ಎದುರಾಳಿಯಾದರೆ ಭಾರತಕ್ಕೂ ತವರಿನಲ್ಲಿ ಫೈನಲ್ ಆಡುವ ಅವಕಾಶ ಲಭಿಸುವುದಿಲ್ಲ.