ಐಡೆನ್ ಮಾರ್ಕ್ರಮ್ ನಾಟೌಟ್​ ಆಗಿದ್ದರು ಅಂಪೈರ್​ ಔಟ್​ ಕೊಟ್ಟಿದ್ದೇಕೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ... T20 World Cup 2026

ಐಡೆನ್ ಮಾರ್ಕ್ರಮ್ ನಾಟೌಟ್​ ಆಗಿದ್ದರು ಅಂಪೈರ್​ ಔಟ್​ ಕೊಟ್ಟಿದ್ದೇಕೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ... T20 World Cup 2026
ಐಡೆನ್ ಮಾರ್ಕ್ರಮ್ ನಾಟೌಟ್​ ಆಗಿದ್ದರು ಅಂಪೈರ್​ ಔಟ್​ ಕೊಟ್ಟಿದ್ದೇಕೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ... T20 World Cup 2026
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಟೂರ್ನಿಯಿಂದ ಅನಿರೀಕ್ಷಿತವಾಗಿ ಹೊರಬಿದ್ದ ದಕ್ಷಿಣ ಆಫ್ರಿಕಾ ತಂಡ
  • ದಕ್ಷಿಣ ಆಫ್ರಿಕಾ ಒಂದೇ ಒಂದು ಪಂದ್ಯವನ್ನು ಸೋಲದೆ ಸೆಮಿಫೈನಲ್ ತಲುಪಿತ್ತು
  • ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್‌ಗಳ ಹೀನಾಯ ಸೋಲು
  • ನಿನ್ನೆಯ ಪಂದ್ಯದಲ್ಲಿ ನಾಯಕ ಐಡೆನ್ ಮಾರ್ಕ್ರಮ್ ಔಟಾದ ರೀತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ
T20 World Cup 2026 : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್​ ತಂಡಗಳಲ್ಲಿ ಒಂದಾಗಿದ್ದ ದಕ್ಷಿಣ ಆಫ್ರಿಕಾ, ಅನಿರೀಕ್ಷಿತವಾಗಿ ವಿಶ್ವಕಪ್​ನಿಂದ ಹೊರಬಿದ್ದಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಹರಿಣ ಪಡೆ, ಬುಧವಾರ (ಮಾರ್ಚ್​ 04) ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಒಂದೇ ಒಂದು ಪಂದ್ಯವನ್ನು ಸೋಲದೆ ಸೆಮಿಫೈನಲ್ ತಲುಪಿತ್ತು. ಆದರೆ, ನಿನ್ನೆ ಅನಿರೀಕ್ಷಿತವಾಗಿ ಸೋಲುಂಡು ನಿರ್ಗಮಿಸಿತು. ಈ ಪಂದ್ಯದಲ್ಲಿ ಪ್ರೋಟಿಯಸ್​ ನಾಯಕ ಐಡೆನ್ ಮಾರ್ಕ್ರಮ್ ಔಟಾದ ರೀತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಮಾರ್ಕ್ರಮ್ ನೀಡಿದ ಕ್ಯಾಚ್ ಅನ್ನು ಕಿವೀಸ್ ಆಟಗಾರ ಡರೈಲ್​ ಮಿಚೆಲ್ ಲಾಂಗ್ ಆಫ್‌ನಲ್ಲಿ ಹಿಡಿದರು. ಆದರೆ, ಚೆಂಡು ನೆಲಕ್ಕೆ ತಾಗಿರುವುದು ರಿಪ್ಲೇಯಲ್ಲಿ ಗೋಚರಿಸಿದರು ಕೂಡ ಮೂರನೇ ಅಂಪೈರ್ ಔಟ್ ನೀಡಿದ ನಿರ್ಧಾರವು ಇದೀಗ ಸಂಚಲನ ಮೂಡಿಸುತ್ತಿದೆ.

ನಡೆದಿದ್ದೇನು?

ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ 8ನೇ ಓವರ್ ಅನ್ನು ಕಿವೀಸ್ ಬೌಲರ್ ರಾಚಿನ್ ರವೀಂದ್ರ ಎಸೆದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಮಾರ್ಕ್ರಮ್ ಬೃಹತ್ ಶಾಟ್ ಬಾರಿಸಿದರು. ಈ ವೇಳೆ ಚೆಂಡು ಲಾಂಗ್​ ಆನ್ ಕಡೆಗೆ ಹೋಯಿತು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಡರೈಲ್ ಮಿಚೆಲ್ ಮುಂದಕ್ಕೆ ಡೈವ್ ಮಾಡಿ, ಕ್ಯಾಚ್ ಪಡೆದರು. ಆದರೆ, ಚೆಂಡು ನೆಲವನ್ನು ಮುಟ್ಟಿದಂತೆ ತೋರುತ್ತಿತ್ತು. ಹೀಗಾಗಿ, ಫೀಲ್ಡ್ ಅಂಪೈರ್, ಮೂರನೇ ಅಂಪೈರ್ ಸಹಾಯವನ್ನು ಕೋರಿದರು. ರೀಪ್ಲೇನಲ್ಲೂ ಚೆಂಡು ಡರೈಲ್ ಮಿಚೆಲ್ ಅವರ ಬೆರಳುಗಳ ನಡುವೆ ನೆಲವನ್ನು ಮುಟ್ಟಿದಂತೆ ಕಂಡುಬಂದಿತು. ಇದನ್ನು ನೋಡಿದ ಎಲ್ಲರೂ ಮಾರ್ಕ್ರಮ್ ಔಟ್ ಆಗಿಲ್ಲ ಎಂದು ಭಾವಿಸಿದ್ದರು. ಆದರೆ, ಮೂರನೇ ಅಂಪೈರ್ ಅನಿರೀಕ್ಷಿತವಾಗಿ ಔಟ್ ಎಂದು ಘೋಷಿಸಿದಾಗ, ಮಾರ್ಕ್ರಮ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಮತ್ತು ಅಭಿಮಾನಿಗಳು ಆಘಾತಕ್ಕೊಳಗಾದರು. ಚೆಂಡಿನ ಕೆಳಗೆ ಬೆರಳುಗಳಿವೆ ಎಂದು ಭಾವಿಸಿದ ಕಾರಣ ಥರ್ಡ್​ ಅಂಪೈರ್ ನಿತಿನ್ ಮೆನನ್, ಔಟ್ ನೀಡಿದರು. ಆ ಹೊತ್ತಿಗೆ, ಮಾರ್ಕ್ರಮ್ 20 ಎಸೆತಗಳಲ್ಲಿ 18 ರನ್ ಗಳಿಸಿ ಕ್ರೀಸ್‌ನಲ್ಲಿ ಸೆಟ್ ಆಗಿದ್ದರು.
ಕಿವೀಸ್​ಗೂ ಇದು ಅಚ್ಚರಿ
ಇಲ್ಲಿ ಅಚ್ಚರಿಯ ಸಂಗತಿ ಏನೆಂದರೆ, ಕ್ಯಾಚ್​ ಹಿಡಿದ ಡರೈಲ್​ ಮಿಚೆಲ್​ಗೂ ಕ್ಯಾಚ್​ ಬಗ್ಗೆ ಅನುಮಾನವಿತ್ತು. ಕ್ಯಾಚ್​ ಹಿಡಿದ ಕೂಡಲೇ ಚೆಂಡು ನೆಲಕ್ಕೆ ತಾಕಿರುವಂತೆ ಕಾಣುತ್ತದೆ ಎಂದು ಸನ್ನೆಯ ಮೂಲಕ ತೋರಿಸಿದರು. ನ್ಯೂಜಿಲೆಂಡ್​ ಕ್ರಿಕೆಟಿಗರು ಕೂಡ ನಾಟೌಟ್​ ಎಂದು ಬರುತ್ತದೆ ಅಂತಾ ಭಾವಿಸಿದ್ದರು. ಆದರೆ, ಔಟ್​​ ಅಂತಾ ಬಂದಾಗ ಒಂದು ಕ್ಷಣ ಕಿವೀಸ್​ ಆಟಗಾರರಿಗೆ ಅಚ್ಚರಿಯಾಯಿತು. ಆದರೆ, ಅಂತಿಮವಾಗಿ ಪ್ರಮುಖ ವಿಕೆಟ್​ ಬಿದ್ದಿದ್ದರಿಂದ ಅವರು ಸಂಭ್ರಮಿಸಿದರು.
ಈ ಮಧ್ಯೆ, ಕ್ಯಾಚ್​ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆಲವರು ಇದು ಔಟ್ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಇದು ಔಟ್ ಅಲ್ಲ ಎಂದು ಹೇಳುತ್ತಿದ್ದಾರೆ. ನಿಮ್ಮ ಪ್ರಕಾರ ಇದು ಔಟಾ? ಅಥವಾ ನಾಟೌಟಾ? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net