ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಆಡಲ್ಲ ಎಂದ ಪಾಕಿಸ್ತಾನಕ್ಕೆ ಐಸಿಸಿ ಕೊಟ್ಟ ಖಡಕ್​ ಉತ್ತರ ಹೀಗಿದೆ ನೋಡಿ... T20 World Cup 2026

ಟಿ20 ವಿಶ್ವಕಪ್ 2026
ಟಿ20 ವಿಶ್ವಕಪ್ 2026
Published on

ಪ್ರಮುಖ ಮುಖ್ಯಾಂಶಗಳು

  • ಫೆ.7ರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ಮೆಗಾ ಟೂರ್ನಿಗೆ ದಿನಗಣನೆ ಆರಂಭ
  • ಈ ಐತಿಹಾಸಿಕ ಟೂರ್ನಿಗಾಗಿ ಎಲ್ಲ ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ
  • ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ನಾವು ಆಡಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ
  • ಪಾಕ್​ ನಿರ್ಧಾರದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಸಂದೇಶವನ್ನು ರವಾನಿಸಿದೆ
ನವದೆಹಲಿ: ಫೆ.7ರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ( T20 World Cup 2026 )​ ಮೆಗಾ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲ ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಈ ಐತಿಹಾಸಿಕ ಟೂರ್ನಿಗಾಗಿ ಎದುರು ನೋಡುತ್ತಿದ್ದಾರೆ. ಅದರಲ್ಲೂ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಇಡೀ ಕ್ರೀಡಾ ಜಗತ್ತು ಕಾಯುತ್ತಿದೆ. ಆದರೆ, ಬೇಸರ ಸುದ್ದಿ ಏನೆಂದರೆ, ಭಾರತದ ವಿರುದ್ಧ ನಾವು ಆಡಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಭಾರತದ ವಿರುದ್ಧದ ಗ್ರೂಪ್​ ಪಂದ್ಯವನ್ನು ಪಾಕ್​ ಬಹಿಷ್ಕರಿಸಿದೆ. ಇದು ಪಾಕಿಸ್ತಾನಕ್ಕೆ ನಷ್ಟವೇ ಹೊರತು ಭಾರತಕ್ಕೆ ಯಾವುದೇ ನಷ್ಟವಿಲ್ಲ. ಆದರೆ, ಇಂಡೋ-ಪಾಕ್​ ಪಂದ್ಯಕ್ಕಾಗಿ ಕಾಯುತ್ತಿದ್ದವರಿಗೆ ಭಾರಿ ನಿರಾಶೆಯಾಗುವುದಂತೂ ಖಚಿತ.
ತಾಜಾ ಸಂಗತಿ ಏನೆಂದರೆ, ನಾವು ಭಾರತದ ವಿರುದ್ಧ ಆಡಲ್ಲ ಎಂದು ಪಾಕ್​ ಹೇಳಿದೆ. ಇದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ( ICC ) ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬ ಕೂತೂಹಲ ಎಲ್ಲರಲ್ಲೂ ಇತ್ತು. ಇದೀಗ ಐಸಿಸಿ ಕೂಡ ತನ್ನ ಹೇಳಿಕೆಯನ್ನು ಪ್ರಕಟಿಸಿದ್ದು, ಪಾಕಿಸ್ತಾನಕ್ಕೆ ಖಡಕ್​ ಸಂದೇಶವನ್ನು ರವಾನಿಸಿದೆ.
ಟಿ20 ವಿಶ್ವಕಪ್​ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ತೆಗೆದುಕೊಂಡ ನಿರ್ಧಾರ ನಮ್ಮ ಗಮನಕ್ಕೆ ಬಂದಿದೆ. ಆದಾಗ್ಯೂ, ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (ಪಿಸಿಬಿ) ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ನಾವು ಇದಕ್ಕಾಗಿ ಕಾಯುತ್ತಿದ್ದೇವೆ. ಇಂತಹ ಮೆಗಾ ಟೂರ್ನಮೆಂಟ್‌ಗಳಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವ ಪಾಕ್​ ತಂಡದ ವರ್ತನೆಯು ಸ್ವೀಕಾರಾರ್ಹವಲ್ಲ. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ವೇಳಾಪಟ್ಟಿಯ ಪ್ರಕಾರವೇ ಸ್ಪರ್ಧಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಅಂತ ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ನೀತಿಯಂತಹ ವಿಚಾರಗಳಲ್ಲಿ ಸರ್ಕಾರಗಳ ಪಾತ್ರವನ್ನು ಐಸಿಸಿ ಬಹಳ ಗೌರವಿಸುತ್ತದೆ. ಆದರೆ, ಪಾಕ್​ ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರ, ಕ್ರೀಡೆ ಅಥವಾ ಪಾಕಿಸ್ತಾನದ ಲಕ್ಷಾಂತರ ಜನರು ಸೇರಿದಂತೆ ಪ್ರಪಂಚದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಹಿತಾಸಕ್ತಿಗೆ ಒಳ್ಳೆಯದಲ್ಲ. ಈಗ ತೆಗೆದುಕೊಂಡ ನಿರ್ಧಾರವು ಆ ದೇಶದಲ್ಲಿ ಕ್ರಿಕೆಟ್ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ತಮ್ಮ ನಿರ್ಧಾರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿದೆ ಎಂದು ಐಸಿಸಿ, ಪಾಕಿಸ್ತಾನಕ್ಕೆ ಮಹತ್ವದ ಸಲಹೆಯನ್ನು ನೀಡಿದೆ.
ಮಾತು ಮುಂದುವರಿಸಿರುವ ಐಸಿಸಿ, ಪುರುಷರ ಟಿ20 ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸುವುದು ಐಸಿಸಿಯ ಜವಾಬ್ದಾರಿ ಮಾತ್ರವಲ್ಲದೆ, ಎಲ್ಲ ಸದಸ್ಯರ ಜವಾಬ್ದಾರಿಯಾಗಿದೆ. ಪಿಸಿಬಿ ಎಲ್ಲರ ಹಿತಾಸಕ್ತಿಯನ್ನು ಗೌರವಿಸಿ, ವೇಳಾಪಟ್ಟಿಯಂತೆ ತಮ್ಮ ಪಂದ್ಯಗಳನ್ನು ಮುಂದುವರಿಸುತ್ತದೆ ಎಂಬ ಭರವಸೆ ಇದೆ ಎಂದು ಐಸಿಸಿ ಹೇಳಿದೆ.
ಅಂದಹಾಗೆ, ಪಾಕಿಸ್ತಾನದ ಈ ಒಂದು ನಿರ್ಧಾರವು ಗ್ರೂಪ್ ಎ ಅರ್ಹತಾ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆಯಿದೆ. ಒಂದೆಡೆ ಇದು ಭಾರತಕ್ಕೆ ಪ್ಲಸ್​ ಆದರೆ, ಪಾಕಿಸ್ತಾನಕ್ಕೆ ಗಂಭೀರ ಹೊಡೆತ ಬೀಳಲಿದೆ. ಫೆಬ್ರವರಿ 15 ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮೈದಾನಕ್ಕೆ ಇಳಿಯದಿದ್ದರೆ, ಐಸಿಸಿ ನಿಯಮಗಳ ಪ್ರಕಾರ ಭಾರತವು ವಾಕ್‌ಓವರ್ ಮೂಲಕ ಪೂರ್ಣ ಎರಡು ಅಂಕಗಳನ್ನು ಪಡೆಯುತ್ತದೆ. ಅದೇ ರೀತಿ ಪಾಕಿಸ್ತಾನಕ್ಕೆ ಶೂನ್ಯ ಅಂಕಗಳು ಸಿಗುತ್ತದೆ. ಇದು ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಆದರೆ, ಪಾಕಿಸ್ತಾನದ ಪರಿಸ್ಥಿತಿ ತುಂಬಾ ಕಠಿಣವಾಗುತ್ತದೆ. ಈ ನಿರ್ಧಾರದಿಂದ ಪಾಕಿಸ್ತಾನ ಯೂಟರ್ನ್​ ತೆಗೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net