ಸಂಜು ಸ್ಯಾಮ್ಸನ್​ಗೆ ಐಸಿಸಿ ಮಾಸಿಕ ಪ್ರಶಸ್ತಿ ಗೌರವ

ಸಂಜು ಸ್ಯಾಮ್ಸನ್​ಗೆ ಐಸಿಸಿ ಮಾಸಿಕ ಪ್ರಶಸ್ತಿ ಗೌರವ
ಸಂಜು ಸ್ಯಾಮ್ಸನ್​ಗೆ ಐಸಿಸಿ ಮಾಸಿಕ ಪ್ರಶಸ್ತಿ ಗೌರವ
Published on
ದುಬೈ: ಭಾರತದ ಟಿ20 ವಿಶ್ವಕಪ್​ ಗೆಲುವಿನಲ್ಲಿ ಮಿಂಚಿದ್ದ ವಿಕೆಟ್​ ಕೀಪರ್​-ಆರಂಭಿಕ ಸಂಜು ಸ್ಯಾಮ್ಸನ್​ (Sanju Samson) ಐಸಿಸಿಯ ಮಾರ್ಚ್​ ತಿಂಗಳ ಆಟಗಾರ ಪ್ರಶಸ್ತಿಗೆ (ICC Men''s Player of the Month for March) ಭಾಜನರಾಗಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿಯ ಬಳಿಕ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಮೊದಲಿಗೆ ಆಡುವ 11ರ ಬಳಗದ ಮೊದಲ ಆಯ್ಕೆ ಆಗಿರದ ಸ್ಯಾಮ್ಸನ್​ ಬಳಿಕ ಆಡಿದ ಕೊನೇ 3 ಪಂದ್ಯಗಳಲ್ಲೂ ಅಮೋಘ ನಿರ್ವಹಣೆ ತೋರುವ ಮೂಲಕ ಭಾರತದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದರು. ಭಾರತ ಗೆಲ್ಲಲೇಬೇಕಾಗಿದ್ದ ಸೂಪರ್​-8 ಹಂತದ ಕೊನೇ ಪಂದ್ಯದಲ್ಲಿ ವಿಂಡೀಸ್​ ಎದುರು ಅಜೇಯ 97 ರನ್​ ಸಿಡಿಸಿದ್ದ ಸ್ಯಾಮ್ಸನ್​ ಬಳಿಕ ಸೆಮೀಸ್​ ಮತ್ತು ಫೈನಲ್​ನಲ್ಲಿ ಕ್ರಮವಾಗಿ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ಎದುರು ತಲಾ 89 ರನ್​ ಸಿಡಿಸಿ ಗೆಲುವಿಗೆ ನೆರವಾಗಿದ್ದರು.

ಮಾರ್ಚ್​ನಲ್ಲಿ ಆಡಿದ 3 ಪಂದ್ಯಗಳಲ್ಲಿ ಅವರು 137.50ರ ಸರಾಸರಿ ಮತ್ತು 199.27ರ ಸ್ಟ್ರೈಕ್​ರೇಟ್​ನಲ್ಲಿ ಒಟ್ಟು 275 ರನ್​ ಬಾರಿಸಿದ್ದರು. ಅವರು ಪ್ರಶಸ್ತಿ ರೇಸ್​ನಲ್ಲಿ ಭಾರತದವರೇ ಆದ ಜಸ್​ಪ್ರೀತ್​ ಬುಮ್ರಾ ಮತ್ತು ದಣ ಆಫ್ರಿಕಾದ ಕಾನರ್​ ಈಸ್ಟರ್​ಹುಯಿಜೆನ್​ರನ್ನು ಹಿಂದಿಕ್ಕಿದ್ದಾರೆ. ಮಹಿಳಾ ವಿಭಾಗದಲ್ಲಿ ನ್ಯೂಜಿಲೆಂಡ್​ ನಾಯಕಿ ಅಮೆಲಿಯಾ ಕೆರ್​ ಮಾರ್ಚ್​ ತಿಂಗಳ ಆಟಗಾರ್ತಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅವರು ಮೂರನೇ ಬಾರಿಗೆ ಐಸಿಸಿಯ ಮಾಸಿಕ ಪ್ರಶಸ್ತಿ ಜಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net