ಶ್ರೀಲಂಕಾ ಆಟಗಾರರೊಂದಿಗೆ ಸೂರ್ಯವಂಶಿ ಜಗಳ: Videoದಲ್ಲಿ ಬಯಲಾಯ್ತು ಅಸಲಿ ಕಾರಣ!

Video
Video
Published on
ದಂಬುಲ್ಲಾ: ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ತ್ರಿಕೋನ ಏಕದಿನ ಸರಣಿಯ ಪಂದ್ಯ ಸೂಪರ್ ಓವರ್ ತನಕ ಸಾಗಿದ ರೋಚಕ ಹೋರಾಟದ ಬಳಿಕ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರರ ನಡುವೆ ನಡೆದ ವಾಗ್ವಾದದ ವಿಡಿಯೋ(Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂದ್ಯ ಟೈ ಆದ ಬಳಿಕ ಸೂಪರ್ ಓವರ್‌ನಲ್ಲಿ ಶ್ರೀಲಂಕಾ 'ಎ' ತಂಡ ಗೆಲುವು ಸಾಧಿಸಿತು. ಸೋಲಿನ ನಿರಾಸೆಯಲ್ಲಿದ್ದ ಭಾರತ ತಂಡದ ಆಟಗಾರರು ಮೈದಾನದಿಂದ ಹೊರಡುತ್ತಿದ್ದ ವೇಳೆ ವೈಭವ್ ಸೂರ್ಯವಂಶಿ ಮತ್ತು ಕೆಲವು ಶ್ರೀಲಂಕಾ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಪಂದ್ಯ ಮುಗಿದ ಬಳಿಕ ಶ್ರೀಲಂಕಾ ಆಟಗಾರರು ವೈಭವ್ ಕಡೆಗೆ ಏನೋ ಹೇಳಿದಂತೆ ಕಾಣುತ್ತದೆ. ಇದರಿಂದ ಅಸಮಾಧಾನಗೊಂಡ ವೈಭವ್ ಪ್ರತಿಕ್ರಿಯೆ ನೀಡಿದ್ದು, ಬಳಿಕ ಎರಡೂ ತಂಡಗಳ ಆಟಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಘಟನೆ ದೊಡ್ಡ ಮಟ್ಟಕ್ಕೆ ಹೋಗದೇ ಅಲ್ಲಿಯೇ ಅಂತ್ಯಗೊಂಡಿದೆ.
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಆರಂಭದಲ್ಲಿ ಕೆಲವು ಆಕರ್ಷಕ ಹೊಡೆತಗಳನ್ನು ಆಡಿದರೂ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಇದರಿಂದ ಈಗಾಗಲೇ ನಿರಾಸೆಯಲ್ಲಿದ್ದ ಯುವ ಆಟಗಾರ, ಪಂದ್ಯದ ಅಂತ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ವೈಭವ್ ಸೂರ್ಯವಂಶಿ ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಚರ್ಚಿತ ಯುವ ಪ್ರತಿಭೆಗಳಲ್ಲಿ ಒಬ್ಬರಾಗಿದ್ದಾರೆ. ಅಂಡರ್-19 ವಿಶ್ವಕಪ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಮಿಂಚಿರುವ ಅವರು, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ಕೆಲ ಅಭಿಮಾನಿಗಳು ವೈಭವ್ ಪರ ನಿಂತಿದ್ದಾರೆ. ಇನ್ನೂ ಕೆಲವರು ಯುವ ಆಟಗಾರರು ಮೈದಾನದಲ್ಲಿ ತಾಳ್ಮೆ ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಘಟನೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ವೈಭವ್ ಸೂರ್ಯವಂಶಿ ಮುಂದಿನ ಪಂದ್ಯಗಳಲ್ಲಿ ತಮ್ಮ ಆಟದ ಮೂಲಕವೇ ಉತ್ತರ ನೀಡಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net