IPL 2026ರ ಸೂಪರ್ ಸ್ಟಾರ್ ಸೂರ್ಯವಂಶಿ ಬ್ರ್ಯಾಂಡ್ ಮೌಲ್ಯ ಜಂಪ್: ವಾರ್ಷಿಕ ಜಾಹೀರಾತು ಸಂಭಾವನೆ 2 ಕೋಟಿಗೆ ಏರಿಕೆ!

IPL
IPL
Published on
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸರಣಿಯಲ್ಲಿ ತನ್ನ ಬ್ಯಾಟಿಂಗ್ ಅಬ್ಬರದ ಮೂಲಕ ಭಾರತೀಯ ಕ್ರಿಕೆಟ್‌ನ ಹೊಸ ಪೋಸ್ಟರ್ ಬಾಯ್ ಆಗಿ ಹೊರಹೊಮ್ಮಿರುವ ಯುವ ವಿಸ್ಮಯ ವೈಭವ್ ಸೂರ್ಯವಂಶಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಮೈದಾನದಲ್ಲಿ ರನ್ ಮಳೆ ಹರಿಸುತ್ತಿರುವ ಈ ರನ್ ಮಷಿನ್, ಮೈದಾನದ ಹೊರಗೂ ಜಾಹೀರಾತು ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಸೃಷ್ಟಿಸಿದ್ದಾರೆ. ಸದ್ಯ ಅವರ ವಾರ್ಷಿಕ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ (ಜಾಹೀರಾತು ಸಂಭಾವನೆ) ಬೇಡಿಕೆ ಬರೋಬ್ಬರಿ 2 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುವ ವೈಭವ್ ಸೂರ್ಯವಂಶಿ ಅವರಿಗೆ ಸದ್ಯ ವಾರ್ಷಿಕ 2 ಕೋಟಿ ರೂಪಾಯಿ ಸಂಭಾವನೆ ನೀಡುವಂತೆ ಫ್ರಾಂಚೈಸಿ ಕಡೆಯಿಂದ ಬೇಡಿಕೆ ಇಡಲಾಗುತ್ತಿದೆ ಎಂದು ಉದ್ಯಮದ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಅವರು ಕಾಂಪ್ಲಾನ್ (Complan) ಮತ್ತು ರೆಡ್ ಬುಲ್ (Red Bull) ನಂತಹ ಪ್ರಮುಖ ಕಂಪನಿಗಳೊಂದಿಗೆ ಸುಮಾರು 1 ಕೋಟಿ ರೂಪಾಯಿ ಆಸುಪಾಸಿನಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಇತ್ತೀಚಿನ ಐಪಿಎಲ್ ವೇಳೆ ಅವರು ಗೂಗಲ್ ಜಾಹೀರಾತುಗಳಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ದಾಖಲೆಗಳ ಸರದಾರ, ಆರೆಂಜ್ ಕ್ಯಾಪ್ ಒಡೆಯ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಮೌಲ್ಯಯುತ ಆಟಗಾರ (MVP) ಪ್ರಶಸ್ತಿ ಪಡೆದ ವೈಭವ್ ಸೂರ್ಯವಂಶಿ, 2026ರ ಆವೃತ್ತಿಯಲ್ಲಿ 750ಕ್ಕೂ ಹೆಚ್ಚು ರನ್ ಬಾರಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟು 16 ಇನ್ನಿಂಗ್ಸ್‌ಗಳಿಂದ 48.50 ರ ಸರಾಸರಿಯಲ್ಲಿ, 237.30 ರ ಅತ್ಯದ್ಭುತ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಅಷ್ಟೇ ಅಲ್ಲದೆ, ಒಂದೇ ಸೀಸನ್‌ನಲ್ಲಿ ಕ್ರಿಸ್ ಗೇಲ್ ಅವರ 59 ಸಿಕ್ಸರ್‌ಗಳ ದಾಖಲೆಯನ್ನು ಮುರಿದಿರುವ ಸೂರ್ಯವಂಶಿ, ಬರೋಬ್ಬರಿ 72 ಸಿಕ್ಸರ್ ಸಿಡಿಸಿ ಜಾಗತಿಕ ದಾಖಲೆ ಬರೆದಿದ್ದಾರೆ.

ತಂಡಕ್ಕೆ ಲಗ್ಗೆ, ಸಚಿನ್-ಕೊಹ್ಲಿಗೆ ಹೋಲಿಕೆ

ಅವರ ಈ ಅಸಾಧಾರಣ ಪ್ರದರ್ಶನವನ್ನು ಕಂಡು 1983ರ ವಿಶ್ವಕಪ್ ವಿಜೇತ ಆಟಗಾರ ಮದನ್ ಲಾಲ್ ಶ್ಲಾಘಿಸಿದ್ದಾರೆ. "ವೈಭವ್ ಸೂರ್ಯವಂಶಿ ದೇವರಿಂದಲೇ ಕೊಡುಗೆಯಾಗಿ ಬಂದ ಅದ್ಭುತ ಪ್ರತಿಭೆ. ಅವರ ಆಟದ ಶೈಲಿ ಮತ್ತು ಮನಸ್ಥಿತಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಅವರನ್ನು ನೆನಪಿಸುತ್ತದೆ. ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿರುವ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಷ್ಟೇ ಸೂರ್ಯವಂಶಿ ಕೂಡ ಸಮರ್ಥರಾಗಿದ್ದಾರೆ" ಎಂದು ಹೇಳಿದ್ದಾರೆ.
ಪ್ರಸ್ತುತ ವೈಭವ್ ಸೂರ್ಯವಂಶಿ ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಯ ಭಾರತ 'ಎ' ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಇದೇ ತಿಂಗಳ ಕೊನೆಯಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಭಾರತದ ಹಿರಿಯರ (ಸೀನಿಯರ್) ತಂಡಕ್ಕೂ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net