ಇನ್ನೇನಿದ್ದರೂ ಸೆಮಿಫೈನಲ್​ ಕದನ! ಫೈನಲ್​ ಮೇಲೆ ಟಾಪ್​ 4 ತಂಡಗಳ ಕಣ್ಣು; ಯಾವ ದಿನ ಪಂದ್ಯಗಳು? ಇಲ್ಲಿದೆ ವಿವರ | T20 WC SemiFinals

ಟಿ20 ವಿಶ್ವಕಪ್​ 2026 ಸೆಮಿಫೈನಲ್​
ಟಿ20 ವಿಶ್ವಕಪ್​ 2026 ಸೆಮಿಫೈನಲ್​
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್‌ನ ಸೂಪರ್-8 ಹಂತ ಮುಕ್ತಾಯ
  • ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ ಅಖಾಡಕ್ಕೆ
  • ಎರಡು ಸೆಮಿಫೈನಲ್​ ಪಂದ್ಯಗಳ ದಿನಾಂಕಗಳು ಹೀಗಿವೆ
ನವದೆಹಲಿ: ನಿನ್ನೆ (ಮಾ.01)  ಕೋಲ್ಕತದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್​ ನಡುವಿನ ಟಿ20 ವಿಶ್ವಕಪ್​ ಟೂರ್ನಿಯ ಕೊನೆಯ ಸೂಪರ್​-8 ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಸೆಮೀಸ್​ಗೆ ಪ್ರವೇಶ ಪಡೆಯಿತು. 
ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್​, ಕಡೆಗೂ ತಮ್ಮ ತಂಡದ ಸೆಮೀಸ್​ ಕನಸನ್ನು ಏಕಾಂಗಿಯಾಗಿ ಈಡೇರಿಸುವಲ್ಲಿ ಯಶಸ್ವಿಯಾದರು. ಒಟ್ಟು 20 ತಂಡಗಳು ಈ ಟೂರ್ನಿ ಪ್ರವೇಶಿಸಿದ್ದರೆ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಭಾರತ ಮತ್ತು ಇಂಗ್ಲೆಂಡ್ ಮಾತ್ರ ತಮ್ಮ ಸೆಮಿಫೈನಲ್ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾದವು.
ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದ ಬೆನ್ನಲ್ಲೇ ಸೆಮಿಫೈನಲ್ ಮತ್ತು ಫೈನಲ್​ ಮ್ಯಾಚ್​ಗಳು ಭಾರತದಲ್ಲಿ ನಡೆಯಲಿವೆ. ಸೆಮೀಸ್​ ಕದನದಲ್ಲಿ ನಾಲ್ಕು ತಂಡಗಳಿದ್ದು, ಸ್ಥಳಗಳು ಮತ್ತು ಪರಸ್ಪರ ಯಾವ ತಂಡಗಳು ಎದುರಾಳಿಗಳಾಗಿ ಅಖಾಡಕ್ಕಿಳಿಯುತ್ತಾರೆ ಎಂಬುದರ ಸಂಪೂರ್ಣ ವಿವರ ಈ ಕೆಳಕಂಡಂತಿದೆ ಗಮನಿಸಿ. 

ಭಾರತಕ್ಕೆ ಯಾರು ಪೈಪೋಟಿ?

ಮೊದಲ ಸೆಮಿಫೈನಲ್ ಪಂದ್ಯ ಇದೇ ಬುಧವಾರ (ಮಾ.04) ನಡೆಯಲಿದೆ. ಈ ಪಂದ್ಯದಲ್ಲಿ, ಗ್ರೂಪ್ 1ರಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಆಫ್ರಿಕಾ, ಗ್ರೂಪ್ 2ರಲ್ಲಿ ಎರಡನೇ ಸ್ಥಾನ ಅಲಂಕರಿಸಿದ ನ್ಯೂಜಿಲೆಂಡ್‌ನೊಂದಿಗೆ ಸೆಣಸಲಿದೆ. ಇನ್ನು ಈ ಮ್ಯಾಚ್​ ಕೋಲ್ಕತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. 

ಈ ಸ್ಟೇಡಿಯಂನಲ್ಲಿ ಫೈನಲ್​ ಕಾಳಗ 

ಇನ್ನು ಗ್ರೂಪ್ 1ರಲ್ಲಿ ಎರಡನೇ ಸ್ಥಾನ ಪಡೆದ ಭಾರತ, ಗುರುವಾರ (ಮಾ.05) ಗ್ರೂಪ್ 2ರಲ್ಲಿ ಅಗ್ರಸ್ಥಾನ ಪಡೆದ ಇಂಗ್ಲೆಂಡ್ ತಂಡದೊಂದಿಗೆ ಫೈನಲ್​ಗೇರಲು ಸೆಣಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎರಡೂ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭಗೊಳ್ಳಲಿವೆ. ಯಾವ ಎರಡು ತಂಡಗಳು ಫೈನಲ್​ಗೆ ಲಗ್ಗೆಯಿಡಲಿದೆಯೋ, ಆ ಟೀಮ್​ಗಳ ಅಂತಿಮ ಹಣಾಹಣಿಯು ಮಾರ್ಚ್ 8ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net