ಆಕ್ರೋಶದ ನಡುವೆ ಇದೆಂಥಾ ಮಾತು? ಪಾಕ್​ ಆಟಗಾರನ ಖರೀದಿ ಸಮರ್ಥಿಸಿಕೊಂಡ ಸನ್​ ರೈಸರ್ಸ್​​ ಲೀಡ್ಸ್​ ಕೋಚ್​

ಸನ್​ರೈಸರ್ಸ್​ ಲೀಡ್ಸ್​ ಕೋಚ್​ ಡೆನಿಯಲ್​ ವೆಟೋರಿ
ಸನ್​ರೈಸರ್ಸ್​ ಲೀಡ್ಸ್​ ಕೋಚ್​ ಡೆನಿಯಲ್​ ವೆಟೋರಿ
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಆರ್​ಎಚ್ ಸಹ​ ಮಾಲೀಕರಾದ ಕಾವ್ಯಾ ಮಾರನ್ ನಿರ್ಧಾರಕ್ಕೆ ಛೀಮಾರಿ
  • ಸನ್​ರೈಸರ್ಸ್​ ಲೀಡ್ಸ್​ ತಂಡಕ್ಕೆ ಪಾಕ್​ ಆಟಗಾರನ ಖರೀದಿ ವಿರುದ್ಧ ಆಕ್ರೋಶ
  • ಕ್ರಿಕೆಟ್​ ಪ್ರಿಯರ ಛೀಮಾರಿ ನಡುವೆ ಕೋಚ್​ ಸಮರ್ಥನೆ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿಯ ಸಹ ಒಡತಿ ಕಾವ್ಯ ಮಾರನ್​ ವಿರುದ್ಧ ಸದ್ಯ ಭಾರತೀಯ ಕ್ರಿಕೆಟ್​ ಪ್ರಿಯರು ತೀವ್ರ ಕಿಡಿಕಾರುತ್ತಿದ್ದಾರೆ. ಇದೇ ಮಾರ್ಚ್​ 28ರಿಂದ ಆರಂಭವಾಗಲಿರುವ ಐಪಿಎಲ್​ 19ನೇ ಆವೃತ್ತಿಯಿಂದ ಅವರ ತಂಡವನ್ನು ಕಿತ್ತುಬಿಸಾಡಿ ಎಂದು ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ. ಆ ಮಟ್ಟಿಗಿನ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ, ಇಷ್ಟೊಂದು ಆಕ್ರೋಶವೇಕೆ ಎಂಬುದರ ಕಾರಣ ಹೀಗಿದೆ ನೋಡಿ.
ನಿನ್ನೆ (ಮಾ.12) ಇಂಗ್ಲೆಂಡ್​ನಲ್ಲಿ ನಡೆಯಲಿರುವ ಈ ಬಾರಿಯ ದಿ ಹಂಡ್ರೆಡ್​ 2026ರ ಟಿ20 ಲೀಗ್​ನ ಹರಾಜು ಪ್ರಕ್ರಿಯೆ ನಡೆಯಿತು. ಈ ಆಕ್ಷನ್​ನಲ್ಲಿ ಸನ್​ರೈಸರ್ಸ್​ ಲೀಡ್ಸ್​ ಫ್ರಾಂಚೈಸಿಯು ಪಾಕ್​ ಆಟಗಾರರ ಮೇಲೆ ಕಣ್ಣಿಟ್ಟಿದ್ದಲ್ಲದೇ, ಸ್ಪಿನ್ನರ್ ಅಬ್ರಾರ್​ ಅಹ್ಮದ್​ನನ್ನು 2.34 ಕೋಟಿ (190,000 ಪೌಂಡ್‌ಗಳು) ರೂ.ಗೆ ಖರೀದಿಸಿತು. ಈ ಒಂದು ನಡೆಯಿಂದ ತೀವ್ರ ಕೆಂಡಮಂಡಲಗೊಂಡಿರುವ ಭಾರತೀಯ ಕ್ರಿಕೆಟ್​ ಫ್ಯಾನ್ಸ್​, ಮೊದಲು ಐಪಿಎಲ್​ನಿಂದ ಕಾವ್ಯ ತಂಡವನ್ನು ತೆಗೆದುಹಾಕಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಎಕ್ಸ್​ (ಹಿಂದಿನ ಟ್ವಿಟರ್​) ಖಾತೆಯಲ್ಲಿ ನೆಟ್ಟಿಗರ ವಿಪರೀತ ವಿರೋಧ ಮತ್ತು ಟೀಕೆಗಳ ಬೆನ್ನಲ್ಲೇ ಸನ್​ರೈಸರ್ಸ್​ ಲೀಡ್ಸ್​ ತಂಡದ ಅಧಿಕೃತ ಖಾತೆ ಬ್ಲಾಕ್ ಆಗಿದೆ. ಭಾರತೀಯ ಫ್ರಾಂಚೈಸಿಯಾಗಿ ಗುರುತಿಸಿಕೊಂಡಿರುವ ಎಸ್​ಆರ್​ಎಚ್​, ಅದೇಗೆ ನಮ್ಮ ವೈರಿ ರಾಷ್ಟ್ರದ ಕ್ರಿಕೆಟಿಗರನ್ನು ಖರೀದಿ ಮಾಡಿತು ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿಯವರೆಗೆ ಕಾವ್ಯ ಮಾರನ್​ ಈ ಕುರಿತಂತೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಫ್ರಾಂಚೈಸಿ ಕೋಚ್​, ನ್ಯೂಜಿಲೆಂಡ್​ ತಂಡದ ಮಾಜಿ ನಾಯಕ ಡೆನಿಯಲ್​ ವೆಟೋರಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬಿಬಿಸಿ ಸ್ಫೋರ್ಟ್​ ಪ್ರಶ್ನೆಗೆ ಉತ್ತರಿಸಿದ ಕೋಚ್​, ಸ್ಪಿನ್​ನಲ್ಲಿ ಹಲವು ವೇರಿಯಷನ್​ ಮಾಡುವ ಕಲೆ ಅಬ್ರಾರ್​ನಲ್ಲಿದೆ. ಅದರಲ್ಲೂ ಒಬ್ಬ ದೇಶಿಯ ಆಟಗಾರನಾಗಿ. ಪಾಕ್​ ಆಟಗಾರರ ಖರೀದಿಯಿಂದ ಏನಾದರೂ ಸಮಸ್ಯೆ ಆಗುತ್ತೆ ನಮಗೆ ಮುಂಚೆಯೇ ಒಂದು ಕಲ್ಪನೆ ಇತ್ತು. ಆದರೆ, ನಮ್ಮ ಮುಂದೆ ಬೇರೆ ದಾರಿ ಇರಲಿಲ್ಲ. ಮುಖ್ಯವಾಗಿ, ಅಬ್ರಾರ್​ ಮೇಲೆ ಫ್ರಾಂಚೈಸಿ ಮೊದಲೇ ಖರೀದಿಸಲು ಕಣ್ಣಿಟ್ಟಿತ್ತು. ಅಷ್ಟಕ್ಕೂ, ತಂಡಕ್ಕೆ ಪಾಕ್​ ಆಟಗಾರರನ್ನು ಖರೀದಿ ಮಾಡಬಾರದು ಎಂಬ ಯಾವುದೇ ಮಾಹಿತಿಯೂ ನಮಗೆ ಸಿಕ್ಕಿಲ್ಲ ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net