ಅದು ನಿಮ್ಮ ಕೆಲಸವಲ್ಲ... ಹೆಡ್​ ಕೋಚ್​ ಗಂಭೀರ್​ಗೆ ಬುದ್ಧಿಮಾತು ಹೇಳಿದ ಸುನೀಲ್​ ಗವಾಸ್ಕರ್​! Gautam Gambhir

ಟೀಮ್​ ಇಂಡಿಯಾದ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ ಹಾಗೂ ಹೆಡ್​ ಕೋಚ್​ ಗೌತಮ್​ ಗಂಭೀರ್​
ಟೀಮ್​ ಇಂಡಿಯಾದ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ ಹಾಗೂ ಹೆಡ್​ ಕೋಚ್​ ಗೌತಮ್​ ಗಂಭೀರ್​
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಮೊದಲ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲು
  • ಹೆಡ್​ ಕೋಚ್​ ಗೌತಮ್​ ಗಂಭೀರ್​ಗೆ ಬುದ್ಧಿಮಾತು ಹೇಳಿದ ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್​
  • ಪಿಚ್ ಕ್ಯುರೇಟರ್‌ಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದ ಗವಾಸ್ಕರ್​
  • ಶನಿವಾರ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ 2ನೇ ಟೆಸ್ಟ್​ ಆರಂಭ
ನವದೆಹಲಿ: ಆತಿಥೇಯ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಶನಿವಾರ (ನವೆಂಬರ್ 22) ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ. ಇದರ ನಡುವೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಸುನೀಲ್​ ಗವಾಸ್ಕರ್​ ಅವರು ಹೆಡ್​ ಕೋಚ್​ ಗೌತಮ್​ ಗಂಭೀರ್​ ( Gautam Gambhir ) ಅವರ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.
ಅಂದಹಾಗೆ, ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಭಾರತವು 124 ರನ್‌ಗಳ ಸಣ್ಣ ಗುರಿಯನ್ನು ತಲುಪಲು ಸಾಧ್ಯವಾಗದೇ ಕೇವಲ 93 ರನ್​​ಗಳಿಗೆ ಆಲೌಟ್​ ಆಗುವ ಮೂಲಕ ಹರಿಣ ಪಡೆ ಎದುರು ಮಂಡಿಯೂರಿತು.
ಬೌನ್ಸಿ ಪಿಚ್‌ನಲ್ಲಿ ಟೀಮ್​ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ರನ್​ ಗಳಿಸಲು ತುಂಬಾ ಕಷ್ಟಪಟ್ಟರು. ಭಾರತದ ಆಟಗಾರರು ಮಾತ್ರವಲ್ಲ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಸಹ ಈ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ, ಈಡನ್ ಗಾರ್ಡನ್ಸ್ ಪಿಚ್‌ ತೀವ್ರ ಟೀಕೆಗೆ ಗುರಿಯಾಯಿತು. ಇದು ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಾದ ಪಿಚ್ ಅಲ್ಲ ಎಂದು ಅನೇಕ ಮಾಜಿ ಆಟಗಾರರು ಕಿಡಿಕಾರಿದರು.
ಪಿಚ್ ಬಗ್ಗೆ ತೀವ್ರ ಟೀಕೆಗಳಿದ್ದರೂ, ಮುಖ್ಯ ಕೋಚ್ ಗಂಭೀರ್ ಮಾತ್ರ ಪಿಚ್​ ಅನ್ನು ಸಮರ್ಥಿಸಿಕೊಂಡರು. ಈ ಪಿಚ್ ಬ್ಯಾಟಿಂಗ್‌ಗೆ ಅಷ್ಟೊಂದು ಕಷ್ಟಕರವೇನಲ್ಲ ಮತ್ತು ಸರಿಯಾದ ರಕ್ಷಣಾತ್ಮಕ ತಂತ್ರವಿದ್ದರೆ ಸುಲಭವಾಗಿ ರನ್ ಗಳಿಸಬಹುದು ಎಂದು ಗಂಭೀರ್ ಹೇಳಿದರು. ಆದರೆ, ಗಂಭೀರ್​ ಹೇಳಿಕೆಗೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಕಿಡಿಕಾರಿದರು. ಇಂತಹ ಪಿಚ್ ಅನ್ನು ಹಿಂದೆಂದೂ ನಾನು ನೋಡಿಯೇ ಇಲ್ಲ ಎಂದರು.
ಇನ್ನು ಇದೇ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಗಂಭೀರ್‌ಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಗಂಭೀರ್ ಅವರು ಪಿಚ್ ಕ್ಯುರೇಟರ್‌ಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದಿದ್ದಾರೆ.
ಗಂಭೀರ್ ಅವರು ಐಪಿಎಲ್‌ನಲ್ಲಿ ಆಟಗಾರನಾಗಿ ಮತ್ತು ಮುಖ್ಯ ತರಬೇತುದಾರನಾಗಿ ಅನುಭವ ಹೊಂದಿದ್ದಾರೆ. ಅಲ್ಲಿ ಪಿಚ್ ಆಯ್ಕೆಯ ವಿಷಯಕ್ಕೆ ಬಂದಾಗ ಏನಾಗುತ್ತದೆ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಯಾವುದೇ ಐಪಿಎಲ್ ಫ್ರಾಂಚೈಸಿ ಕ್ಯುರೇಟರ್‌ಗೆ ನಿರ್ದಿಷ್ಟ ಪಿಚ್ ಆಯ್ಕೆ ಮಾಡಲು ಕೇಳುವುದಿಲ್ಲ. ಕ್ಯುರೇಟರ್ ಸ್ವತಂತ್ರವಾಗಿ ಪಿಚ್ ಅನ್ನು ಸಿದ್ಧಪಡಿಸುತ್ತಾರೆ ಎಂದರು.
ಮಾತು ಮುಂದುವರಿಸಿದ ಗವಾಸ್ಕರ್​, ಪಿಚ್ ತಯಾರಿಯನ್ನು ಕ್ಯುರೇಟರ್‌ಗೆ ಬಿಡಬೇಕು. ಯಾರೂ ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು. ಅದನ್ನು ಹೇಗೆ ತಯಾರಿಸಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ನೀವು ಮಧ್ಯದಲ್ಲಿ ಹೋಗಿ ಪಿಚ್ ಬದಲಾಯಿಸಲು ಆದೇಶ ನೀಡುವುದು ಸರಿಯಾದ ಕ್ರಮವಲ್ಲ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net