ಮಳೆಗೆ ಬಲಿಯಾಯ್ತು ಬಲಿಷ್ಠ ಆಸೀಸ್..: 17 ವರ್ಷಗಳ ನಂತರ ಗ್ರೂಪ್ ಹಂತದಲ್ಲೇ ಹೊರಬಿದ್ದ ಕಾಂಗರೂಗಳು | Australia Out

ಮಳೆಗೆ ಬಲಿಯಾಯ್ತು ಬಲಿಷ್ಠ ಆಸೀಸ್..: 17 ವರ್ಷಗಳ ನಂತರ ಗ್ರೂಪ್ ಹಂತದಲ್ಲೇ ಹೊರಬಿದ್ದ ಕಾಂಗರೂಗಳು
ಮಳೆಗೆ ಬಲಿಯಾಯ್ತು ಬಲಿಷ್ಠ ಆಸೀಸ್..: 17 ವರ್ಷಗಳ ನಂತರ ಗ್ರೂಪ್ ಹಂತದಲ್ಲೇ ಹೊರಬಿದ್ದ ಕಾಂಗರೂಗಳು
Published on
ಪಲ್ಲೆಕೆಲೆ: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇಂದು ಕರಾಳ ದಿನವೊಂದು ದಾಖಲಾಗಿದೆ. ಮಾಜಿ ಚಾಂಪಿಯನ್ ಮತ್ತು ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾ(Australia Out), 2026ರ ಟಿ20 ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.
ಮಂಗಳವಾರ ಪಲ್ಲೆಕೆಲೆಯಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ ಆಸ್ಟ್ರೇಲಿಯಾದ ಸೂಪರ್-8 ಹಂತಕ್ಕೇರುವ ಅಲ್ಪ ಆಸೆ ಕೂಡ ಕಮರಿ ಹೋಗಿದೆ.

ಮಳೆ ತಂದ ಅದೃಷ್ಟ, ಆಸೀಸ್‌ಗೆ ದುರಾದೃಷ್ಟ..!

ಜಿಂಬಾಬ್ವೆ ಮತ್ತು ಐರ್ಲೆಂಡ್ ಪಂದ್ಯದಲ್ಲಿ ಕನಿಷ್ಠ ಟಾಸ್ ಕೂಡ ಮಾಡಲು ಸಾಧ್ಯವಾಗದಂತೆ ಮಳೆ ಅಡ್ಡಿಪಡಿಸಿತು. ನಿಯಮದಂತೆ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು. ಈ ಒಂದು ಅಂಕದೊಂದಿಗೆ ಜಿಂಬಾಬ್ವೆ ಒಟ್ಟು 5 ಅಂಕಗಳನ್ನು ಗಳಿಸಿ ಗ್ರೂಪ್ ಬಿ ನಿಂದ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು. ಇತ್ತ ಆಸ್ಟ್ರೇಲಿಯಾ ತಂಡವು ತನ್ನ ಅಂತಿಮ ಪಂದ್ಯವನ್ನು ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಶ್ರೀಲಂಕಾ ಮತ್ತು ಜಿಂಬಾಬ್ವೆ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರೆ, ಆಸ್ಟ್ರೇಲಿಯಾ ತವರಿಗೆ ಮರಳುವಂತಾಗಿದೆ.

17 ವರ್ಷಗಳ ಬಳಿಕ ಇತಿಹಾಸ ಪುನರಾವರ್ತನೆ

2021ರ ಚಾಂಪಿಯನ್ ಆಸ್ಟ್ರೇಲಿಯಾವು ಗ್ರೂಪ್ ಹಂತದಲ್ಲೇ ಹೊರಬಿದ್ದಿರುವುದು ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದೆ. 2009ರ ನಂತರ ಅಂದರೆ ಬರೋಬ್ಬರಿ 17 ವರ್ಷಗಳ ಬಳಿಕ ಕಾಂಗರೂ ಪಡೆ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸುತ್ತಿದೆ. ಆರಂಭಿಕ ಪಂದ್ಯಗಳಲ್ಲಿ ಜಿಂಬಾಬ್ವೆ ವಿರುದ್ಧ ಅನುಭವಿಸಿದ ಅಚ್ಚರಿಯ ಸೋಲು ಮತ್ತು ಶ್ರೀಲಂಕಾ ವಿರುದ್ಧದ ಹೀನಾಯ ಅಪಜಯವು ಆಸ್ಟ್ರೇಲಿಯಾ ಪತನಕ್ಕೆ ಮುಖ್ಯ ಕಾರಣವಾಯಿತು.

ಜಿಂಬಾಬ್ವೆ ಕೆಚ್ಚೆದೆಯ ಹೋರಾಟ

ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ತಂಡ ಈ ಬಾರಿ ಅದ್ಭುತ ಪ್ರದರ್ಶನ ನೀಡಿದೆ. ಕೇವಲ ಅದೃಷ್ಟದಿಂದ ಮಾತ್ರವಲ್ಲದೆ, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಸೋಲಿಸುವ ಮೂಲಕ ತಾವು ಸೂಪರ್-8 ಗೆ ಅರ್ಹರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ಜಿಂಬಾಬ್ವೆ ತಂಡವು ಫೆಬ್ರವರಿ 19 ರಂದು ಕೊಲೊಂಬೊದಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದ್ದು, ಈ ಪಂದ್ಯವು ಗುಂಪಿನ ಅಗ್ರಸ್ಥಾನಕ್ಕೆ ಯಾರು ಎಂಬುದನ್ನು ನಿರ್ಧರಿಸಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net