ಬಾಲ್ ಟ್ಯಾಂಪರಿಂಗ್ ವಿವಾದಕ್ಕೆ ಹೊಸ ಟ್ವಿಸ್ಟ್: ಸ್ಮಿತ್ 'ನ್ಯಾಷನಲ್ ಹೀರೋ' ಎಂದ ಎಸ್​​ಆರ್​ಎಚ್​​ ಮಾಜಿ ಆಟಗಾರ; ಕ್ಲಾರ್ಕ್ ಹೇಳೋದೇ ಬೇರೆ! | Sandpapergate Scandal

ಬಾಲ್ ಟ್ಯಾಂಪರಿಂಗ್ ವಿವಾದಕ್ಕೆ ಹೊಸ ಟ್ವಿಸ್ಟ್: ಸ್ಮಿತ್ 'ನ್ಯಾಷನಲ್ ಹೀರೋ' ಎಂದ ಎಸ್​​ಆರ್​ಎಚ್​​ ಮಾಜಿ ಆಟಗಾರ; ಕ್ಲಾರ್ಕ್ ಹೇಳೋದೇ ಬೇರೆ! | Sandpapergate Scandal
Published on: 

Sandpapergate Scandal: 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ನಡೆದ ಬಾಲ್ ಟ್ಯಾಂಪರಿಂಗ್ ಪ್ರಕರಣವು ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆ ಘಟನೆಯಲ್ಲಿ ಸಿಕ್ಕಿಬಿದ್ದಿದ್ದ ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಬುಧವಾರ ಬಿಡುಗಡೆ ಮಾಡಿದ ತಮ್ಮ ಸುದೀರ್ಘ ಬರಹದ ಬೆನ್ನಲ್ಲೇ, ಮಾಜಿ ಆಲ್‌ರೌಂಡರ್ ಮೊಯಿಸೆಸ್ ಹೆನ್ರಿಕ್ಸ್ ಮತ್ತು ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರು ಅಂದಿನ ನಾಯಕ ಸ್ಟೀವ್ ಸ್ಮಿತ್ ಅವರ ಪಾತ್ರದ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಬ್ಯಾನ್‌ಕ್ರಾಫ್ಟ್ ತಮ್ಮ ಬರಹದಲ್ಲಿ, ಚೆಂಡನ್ನು ವಿರೂಪಗೊಳಿಸುವ ಯೋಜನೆಯ ಬಗ್ಗೆ ಚರ್ಚೆ ನಡೆದಾಗ ಸ್ಮಿತ್ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ ಮತ್ತು ಆ ವಿಚಾರದಿಂದ ದೂರ ಉಳಿಯಲು ಬಯಸಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಫೆನಾಟಿಕ್ಸ್ ಪಾಡ್‌ಕ್ಯಾಸ್ಟ್‌ನಲ್ಲಿ ಸ್ಟುವರ್ಟ್ ಮ್ಯಾಕ್‌ಗಿಲ್ ಮತ್ತು ಸ್ಟೀವ್ ಓ'ಕೀಫ್ ಅವರೊಂದಿಗೆ ಮಾತನಾಡಿದ ಹೆನ್ರಿಕ್ಸ್, ಸ್ಮಿತ್​​​​ರನ್ನು ನ್ಯಾಷನಲ್ ಹೀರೋ ಎಂದು ಬಣ್ಣಿಸಿದ್ದಾರೆ.

ಅಂದು ತಂಡದ ಕೋಚ್, ಸಹಾಯಕ ಕೋಚ್ ಹಾಗೂ ಉಪನಾಯಕನ ಸಮ್ಮುಖದಲ್ಲೇ ಆಸ್ಟ್ರೇಲಿಯಾ ತಂಡದ ನಾಯಕ ನಾನು ಇದನ್ನು ಒಪ್ಪುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದರು. ಪ್ರಕರಣ ಬೆಳಕಿಗೆ ಬಂದಾಗ ಅವರು ಬಯಸಿದ್ದರೆ ಇತರ ಆಟಗಾರರ ಹೆಸರನ್ನು ಬಹಿರಂಗಪಡಿಸಿ ತಾವು ಬಚಾವಾಗಬಹುದಿತ್ತು. ಆದರೆ ಸ್ಮಿತ್ ಹಾಗೆ ಮಾಡಲಿಲ್ಲ. ಬ್ಯಾನ್‌ಕ್ರಾಫ್ಟ್ ಜೊತೆ ಪತ್ರಿಕಾಗೋಷ್ಠಿಗೆ ಬಂದು ಇಡೀ ತಂಡದ ಪರವಾಗಿ ತಾವೇ ಹೊಣೆ ಹೊತ್ತುಕೊಂಡರು. ಬೌಲರ್‌ಗಳಿಗೆ ಅಥವಾ ತಂಡದ ಬೇರೆ ಯಾರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅವರು ಯಾರ ಮೇಲೂ ಕೆಸರೆರಚಲಿಲ್ಲ. ಅವರಿಗೆ ಇನ್ನೂ ಅನೇಕ ವಿಷಯಗಳು ತಿಳಿದಿವೆ ಎಂಬುದು ನನಗೆ ಖಚಿತವಿದೆ. ಈ ಎಲ್ಲಾ ಕಾರಣಗಳಿಂದ ನನ್ನ ದೃಷ್ಟಿಯಲ್ಲಿ ಅವರು ರಾಷ್ಟ್ರೀಯ ನಾಯಕ ಎಂದು ಹೆನ್ರಿಕ್ಸ್ ಶ್ಲಾಘಿಸಿದ್ದಾರೆ.

Also Read
ಚೆಂಡು ವಿರೂಪದಲ್ಲಿ ಇಡೀ ತಂಡವೇ ಶಾಮೀಲಾದರೂ, ನನ್ನನ್ನು ಮಾತ್ರ ಹರಕೆಯ ಕುರಿ ಮಾಡಿದರು: ಆಸೀಸ್ ಕ್ರಿಕೆಟಿಗರ ಮುಖವಾಡ ಕಳಚಿದ ಬ್ಯಾನ್‌ಕ್ರಾಫ್ಟ್! | Sandpapergate Scandal
ಬಾಲ್ ಟ್ಯಾಂಪರಿಂಗ್ ವಿವಾದಕ್ಕೆ ಹೊಸ ಟ್ವಿಸ್ಟ್: ಸ್ಮಿತ್ 'ನ್ಯಾಷನಲ್ ಹೀರೋ' ಎಂದ ಎಸ್​​ಆರ್​ಎಚ್​​ ಮಾಜಿ ಆಟಗಾರ; ಕ್ಲಾರ್ಕ್ ಹೇಳೋದೇ ಬೇರೆ! | Sandpapergate Scandal

ನಾಯಕನಾಗಿ ಸ್ಮಿತ್‌ಗೆ ಜವಾಬ್ದಾರಿ ಇತ್ತು: ಮೈಕೆಲ್ ಕ್ಲಾರ್ಕ್

ಮತ್ತೊಂದೆಡೆ, ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರು ಸ್ಮಿತ್ ಅವರ ನಾಯಕತ್ವದ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದು, ಬಿಯಾಂಡ್ 23 ಕ್ರಿಕೆಟ್ ಪಾಡ್‌ಕ್ಯಾಸ್ಟ್'ನಲ್ಲಿ ಮಾತನಾಡಿದ ಕ್ಲಾರ್ಕ್, ಸ್ಮಿತ್ ಶಿಕ್ಷೆ ಅನುಭವಿಸಿ ತಂಡಕ್ಕೆ ಮರಳಿರುವುದನ್ನು ಒಪ್ಪಿಕೊಂಡರೂ, ನಾಯಕನಾದವನು ತನ್ನ ತಂಡದಲ್ಲಿ ನಡೆಯುವ ತಪ್ಪುಗಳನ್ನು ತಡೆಯುವ ಜವಾಬ್ದಾರಿ ಹೊಂದಿರುತ್ತಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಯಕನಾದವನು ಸದಾ ಎದೆ ಸೆಟೆದು ನಿಲ್ಲಬೇಕು, ಅದು ಅವನ ಜವಾಬ್ದಾರಿ. ಒತ್ತಡದ ಸಂದರ್ಭದಲ್ಲಿ ನಾಯಕತ್ವ ವಹಿಸುವುದು ಜಗತ್ತಿನ ಅತ್ಯಂತ ಕಠಿಣ ಕೆಲಸ. ಬ್ಯಾನ್‌ಕ್ರಾಫ್ಟ್ ಮತ್ತು ಉಸ್ಮಾನ್ ಖವಾಜಾ ಬರೆದಿರುವುದನ್ನು ನಂಬುವುದಾದರೆ, ಸ್ಮಿತ್‌ಗೆ ಈ ಯೋಜನೆಯಲ್ಲಿ ಭಾಗಿಯಾಗಲು ಇಷ್ಟವಿರಲಿಲ್ಲ ನಿಜ, ಆದರೆ ಅವರಿಗೆ ಆ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ನಾಯಕನಾಗಿ ಅದನ್ನು ತಡೆಯುವ ಜವಾಬ್ದಾರಿ ಅವರ ಮೇಲಿತ್ತು ಎಂದು ಕ್ಲಾರ್ಕ್ ಹೇಳಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ವಿವಾದ

ಇತ್ತೀಚೆಗಷ್ಟೇ ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ತಮ್ಮ ಆತ್ಮಕಥೆ ಸಬ್ರ್​​​ನಲ್ಲಿ, ಬಾಲ್ ಟ್ಯಾಂಪರಿಂಗ್ ಯೋಜನೆಯ ಬಗ್ಗೆ ಶಿಕ್ಷೆಗೊಳಗಾದ ಮೂವರು ಆಟಗಾರರಷ್ಟೆ ಅಲ್ಲ, ತಂಡದ ಎಲ್ಲರಿಗೂ ತಿಳಿದಿತ್ತು ಎಂದು ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹಾಲಿ ನಾಯಕ ಪ್ಯಾಟ್ ಕಮಿನ್ಸ್, ಈ ಹೇಳಿಕೆಯನ್ನು ತಳ್ಳಿಹಾಕಿದ್ದರು.

2018ರ ಈ ವಿವಾದದ ನಂತರ ಸ್ಟೀವ್ ಸ್ಮಿತ್ ಅವರಿಗೆ 12 ತಿಂಗಳ ನಿಷೇಧ ಹೇರಿ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಬ್ಯಾನ್‌ಕ್ರಾಫ್ಟ್ ಅವರ ಇತ್ತೀಚಿನ ಹೇಳಿಕೆಯ ನಂತರ ಸ್ಮಿತ್ ಇನ್ನೂ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯೆ, ಪ್ರಕರಣದ ಕುರಿತು ಮರುತನಿಖೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿರುವ ಕ್ರಿಕೆಟ್ ಆಸ್ಟ್ರೇಲಿಯಾ, 2018ರ ಪ್ರವಾಸದಲ್ಲಿದ್ದ ಆಟಗಾರರು ಮತ್ತು ಸಿಬ್ಬಂದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಕಲ್ಪಿಸುವುದಾಗಿ ಘೋಷಿಸಿದೆ. ಒಟ್ಟಿನಲ್ಲಿ, ಸಹ ಆಟಗಾರರನ್ನು ರಕ್ಷಿಸಿದ್ದಕ್ಕಾಗಿ ಹೆನ್ರಿಕ್ಸ್ ಅವರಿಂದ ಪ್ರಶಂಸೆ ಹಾಗೂ ನಾಯಕತ್ವದ ಹೊಣೆಗಾರಿಕೆ ನಿಭಾಯಿಸದ ಬಗ್ಗೆ ಕ್ಲಾರ್ಕ್ ಅವರಿಂದ ಟೀಕೆ ವ್ಯಕ್ತವಾಗುವುದರೊಂದಿಗೆ ಕೇಪ್‌ಟೌನ್ ಪ್ರಕರಣ ಹೊಸ ಚರ್ಚೆಗೆ ನಾಂದಿ ಹಾಡಿದೆ(ಏಜೆನ್ಸೀಸ್​).

Related Stories

ಇಡೀ ತಂಡವೇ ಶಾಮೀಲಾದರೂ, ನನ್ನನ್ನು ಮಾತ್ರ ಹರಕೆಯ ಕುರಿ ಮಾಡಿದರು: ಬ್ಯಾನ್‌ಕ್ರಾಫ್ಟ್
ಹಿರಿಯ ಪತ್ರಕರ್ತೆ ಚಿತ್ರಾ ಸುಬ್ರಮಣಿಯಂ ಆಕ್ಷೇಪ!
ಧೋನಿಯನ್ನು ನಾಯಕತ್ವದಿಂದ ಕೆಳಕ್ಕಿಳಿಸಿದ್ದು ನಮ್ಮೆಲ್ಲರಿಗೂ ದೊಡ್ಡ ಆಘಾತ ತಂದಿತ್ತು: ಐಪಿಎಲ್‌ನ ರಹಸ್ಯ ಬಿಚ್ಚಿಟ್ಟ ಮಾಜಿ ಆಟಗಾರ! | MS Dhoni
A remarkable incident aboard a Flydubai flight: Brave Captain Smith Macchar saved passengers' lives despite being in a bloodied state.