

ಮೆಕಾಯ್: ಎಡಗೈ ವೇಗಿ (
Mitchell Starc
) ಮಿಚೆಲ್ ಸ್ಟಾರ್ಕ್ (39ಕ್ಕೆ 4) ದಾಳಿಗೆ ಬಾಂಗ್ಲಾದೇಶ ತಂಡ ಎರಡನೇ ಇನಿಂಗ್ಸ್ನಲ್ಲೂ ಕುಸಿತ ಕಾಣುವುದರೊಂದಿಗೆ ಆತಿಥೇಯ ಆಸ್ಟ್ರೆಲಿಯಾ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 51 ರನ್ ಗಳಿಂದ ಗೆಲುವು ದಾಖಲಿಸಿದೆ. ಮೊದಲ ಟೆಸ್ಟ್ ಆಘಾತಕ್ಕೆ ಎರಡೇ ದಿನಗಳಲ್ಲಿ ಗೆದ್ದು ತಿರುಗೇಟು ನೀಡಿದ ಆಸೀಸ್, ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಪಂದ್ಯದಲ್ಲಿ 10 ಮತ್ತು ಸರಣಿಯಲ್ಲಿ 12 ವಿಕೆಟ್ ಕಬಳಿಸಿದ ಸ್ಟಾರ್ಕ್ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
ಗ್ರೇಟ್ ಬ್ಯಾರಿಯರ್ ಅರೇನಾದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 8 ವಿಕೆಟ್ಗೆ 165 ರನ್ಗಳಿಂದ 2ನೇ ದಿನದಾಟ ಆರಂಭಿಸಿದ ಆಸೀಸ್, ಮತ್ತೆ 45 ರನ್ ಸೇರಿಸಿ 210 ರನ್ಗಳಿಗೆ ಆಲೌಟ್ ಆಯಿತು. 146 ರನ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ, ಚಹಾ ವಿರಾಮದ ಬಳಿಕ 95 ರನ್ಗಳಿಗೆ ಸರ್ವಪತನ ಕಂಡು ಶರಣಾಯಿತು. 23 ವರ್ಷಗಳ ಬಳಿಕ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಆಡಿದ ಬಾಂಗ್ಲಾ, ಸೋಲಿನ ನಡುವೆ ಸರಣಿ ಸಮಬಲದ ಸಂತಸ ಕಂಡಿತು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲಿ ಆಸೀಸ್ ಶೇ. 80 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಬಾಂಗ್ಲಾ ಸದ್ಯ 4ನೇ ಸ್ಥಾನದಲ್ಲಿದ್ದರೂ, ಭಾರತ ಕೊಲಂಬೊ ಟೆಸ್ಟ್ ಗೆದ್ದರೆ 5ನೇ ಸ್ಥಾನಕ್ಕೆ ಕುಸಿಯಲಿದೆ.