ಪ್ಲೇಆಫ್​ ರೇಸ್​ನಲ್ಲಿರುವ ಸಿಎಸ್​ಕೆಗೆ ಬಿಗ್ ಶಾಕ್​! ಸ್ಟಾರ್​ ಆಟಗಾರ ತವರಿಗೆ; ಎಲ್​ಎಸ್​ಜಿ ವಿರುದ್ಧ ಧೋನಿ ಕಣಕ್ಕೆ?​

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರರು
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರರು
Published on
CSK: ಐದು ಬಾರಿಯ ಚಾಂಪಿಯನ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ಸದ್ಯ 19ನೇ ಆವೃತ್ತಿಯ ಐಪಿಎಲ್​ನ ಆರಂಭದಲ್ಲಿ ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದರೆ, ದ್ವಿತೀಯಾರ್ಧದಲ್ಲಿ ಗೆಲುವು ನೋಡುವ ಮೂಲಕ ಪ್ಲೇಆಫ್​ ಆಸೆಯನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ.
ಪ್ರಸ್ತುತ 12 ಅಂಕಗಳನ್ನು ಹೊಂದಿರುವ ಸಿಎಸ್​ಕೆ, ಉಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಲೇಬೇಕು. ತಂಡದ ನಿವ್ವಳ ರನ್ ರೇಟ್​ (+0.185) ಕಡಿಮೆ ಇರುವುದರಿಂದ ಎರಡು ಪಂದ್ಯದಲ್ಲಿ ಹೆಚ್ಚಿನ ರನ್​ನಿಂದ ಗೆದ್ದರೆ ಉತ್ತಮ. ಇಲ್ಲವೇ ಮೂರಕ್ಕೆ ಮೂರು ಪಂದ್ಯಗಳನ್ನು ಗೆದ್ದು ಪ್ಲೇಆಫ್​ ಸ್ಥಾನ ಖಚಿತಪಡಿಸಿಕೊಳ್ಳಬಹುದು. ಹೇಗಾದರೂ ಮಾಡಿ ಮುಂದಿನ ಎಲ್​ಎಸ್​ಜಿ ವಿರುದ್ಧದ ಎರಡೂ ಪಂದ್ಯಗಳನ್ನು ಗೆಲ್ಲುವ ತವಕದಲ್ಲಿರುವ ಚೆನ್ನೈ ಪಡೆಗೆ ಇದೀಗ ಸ್ಟಾರ್ ಆಲ್​ರೌಂಡರ್​​ನ ಅಲಭ್ಯತೆ ಎದುರಾಗಿದೆ.
ಈ ವರ್ಷ ಸಿಎಸ್‌ಕೆ ಪರ ಮ್ಯಾಚ್​ ವಿನ್ನಿಂಗ್​ ಇನ್ನಿಂಗ್ಸ್ ಆಡಿರುವ ಜೇಮೀ ಓವರ್ಟನ್, ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಕೈಕೊಟ್ಟಾಗ ತಂಡವನ್ನು ಗೆಲುವಿನಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿರುವ ಜೇಮೀ, ಒಟ್ಟು 136 ರನ್‌ಗಳನ್ನು ಗಳಿಸಿದ್ದಾರೆ. ಆದರೆ, ಬಲ ತೊಡೆಯ ಗಾಯದಿಂದ ಬಳಲುತ್ತಿದ್ದ ಅವರು, ವಿಶ್ರಾಂತಿಗಾಗಿ ಯುನೈಟೆಡ್​ ಕಿಂಗ್​ಡಮ್​ಗೆ ವಾಪಾಸ್​ ಆಗಿದ್ದಾರೆ. ಈ ಕುರಿತು ಸಿಎಸ್​ಕೆ ಮ್ಯಾನೇಜ್​ಮೆಂಟ್​ ಮಾಹಿತಿ ಹಂಚಿಕೊಂಡಿದೆ.
ಆರಂಭದಿಂದಲೂ ಸಿಎಸ್​ಕೆಗೆ ಆಟಗಾರರ ಇಂಜುರಿ ಸಮಸ್ಯೆ ಗೆಲುವಿಗೆ ದೊಡ್ಡ ಹೊಡೆತ ನೀಡಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಲಭ್ಯತೆ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರೆರಚಿದೆ. ಇನ್ನು ಆರಂಭದ ಕೆಲವು ಪಂದ್ಯಗಳಲ್ಲಿ ತಂಡದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಯುವ ಆಟಗಾರ ಆಯುಷ್ ಮ್ಹಾತ್ರೆ ಮತ್ತು ವೇಗಿ ಖಲೀಲ್ ಅಹ್ಮದ್, ಆಲ್​ರೌಂಡರ್​ ನಾಥನ್ ಎಲ್ಲಿಸ್ ಇಂಜುರಿ ಸಮಸ್ಯೆಗಳಿಂದ ತಂಡದಿಂದ ಹೊರಗುಳಿದರು. ಈಗ ಜೇಮೀ ಕೂಡ ಈ ಸಾಲಿಗೆ ಸೇರಿದ್ದಾರೆ.
ಮತ್ತೊಂದೆಡೆ, ಮಹೇಂದ್ರ ಸಿಂಗ್ ಧೋನಿ ಅವರು ಮೇ.15ರಂದು ನಡೆಯಲಿರುವ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಎಲ್ಲ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಮೊದಲು ಗುಜರಾತ್ ಟೈಟನ್ಸ್ ಎದುರು ಧೋನಿ ಆಡುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ, ಈಗ ಎಲ್​ಎಸ್​ಜಿ ವಿರುದ್ಧ ಪಂದ್ಯಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿವೆ. ಈ ಕುರಿತಂತೆ ಕೋಚ್​ ಏನು ಹೇಳಲಿದ್ದಾರೆ? ಮುಂದಿನ ಪಂದ್ಯದಲ್ಲಿ ಮಾಹಿ ಆಡುವುದು ಖಚಿತವೇ ಅಥವಾ ಈಗಲೂ ಬರದೆ ಅಪಾರ ಸಂಖ್ಯೆಯ ಅಭಿಮಾನಿಗಳ ಬೇಸರಕ್ಕೆ ಕಾರಣರಾಗುತ್ತಾರಾ? ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net