ದೇಶಿ ಕ್ರೀಡಾ ಭವಿಷ್ಯಕ್ಕೆ ಹೊಸ ದಿಕ್ಕು: ತಳಮಟ್ಟದಲ್ಲಿ ಕ್ರೀಡೆಗೆ ಉತ್ತೇಜನ ಹಾಗೂ ಬಾಲಕಿಯರ ಪಾಲ್ಗೊಳ್ಳುವಿಕೆಗೆ ಜಾಗತಿಕ ಸಹಯೋಗ

ದೇಶಿ ಕ್ರೀಡಾ ಭವಿಷ್ಯಕ್ಕೆ ಹೊಸ ದಿಕ್ಕು: ತಳಮಟ್ಟದಲ್ಲಿ ಕ್ರೀಡೆಗೆ ಉತ್ತೇಜನ ಹಾಗೂ ಬಾಲಕಿಯರ ಪಾಲ್ಗೊಳ್ಳುವಿಕೆಗೆ ಜಾಗತಿಕ ಸಹಯೋಗ
ದೇಶಿ ಕ್ರೀಡಾ ಭವಿಷ್ಯಕ್ಕೆ ಹೊಸ ದಿಕ್ಕು: ತಳಮಟ್ಟದಲ್ಲಿ ಕ್ರೀಡೆಗೆ ಉತ್ತೇಜನ ಹಾಗೂ ಬಾಲಕಿಯರ ಪಾಲ್ಗೊಳ್ಳುವಿಕೆಗೆ ಜಾಗತಿಕ ಸಹಯೋಗ
Published on

ಬೆಂಗಳೂರು: ಕ್ರೀಡೆಯನ್ನು ಕೇವಲ ಪದಕ ಗೆಲ್ಲುವ ಸ್ಪರ್ಧೆಯನ್ನಾಗಿ ಪರಿಗಣಿಸದೆ, ಮಕ್ಕಳ ಆರೋಗ್ಯ, ಶಿಕ್ಷಣ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗೆ ದಾರಿ ಮಾಡಿಕೊಡುವ  ಕ್ರೀಡಾ ಉದ್ದೇಶವನ್ನು ಮತ್ತಷ್ಟು ಬಲಪಡಿಸಲು, ಬೆಂಗಳೂರಿನಲ್ಲಿ ದುಂಡುಮೇಜಿನ ಸಭೆ ಆಯೋಜಿಸಲಾಗಿತ್ತು.


ಸ್ಪೋರ್ಟ್ಜ್‌ ವಿಲೇಜ್‌ (Sportz Village) ಸಂಸ್ಥೆಯ ಲಾಭರಹಿತ ಅಂಗ ಸಂಸ್ಥೆಯಾಗಿರುವ ಸ್ಪೋರ್ಟ್ಜ್‌ ವಿಲೇಜ್‌ ಫೌಂಡೇಷನ್‌  (Sportz Village Foundation)   #ಬದಲಾವಣೆಗಾಗಿಕ್ರೀಡೆ (#SportForChange) ಉದ್ದೇಶ ಕಾರ್ಯಗತಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಈ ದುಂಡುಮೇಜಿನ ಸಭೆ  ಏರ್ಪಡಿಸಿತ್ತು. ಅಂತರರಾಷ್ಟ್ರೀಯ ಕ್ರೀಡೆ ಹಾಗೂ ಸಂಸ್ಕೃತಿ ಸಂಘ (ಐಎಸ್‌ಸಿಎ) ಸಹಯೋಗದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.
ದೇಶದಲ್ಲಿ ತಳಮಟ್ಟದ ಕ್ರೀಡಾ ಚಟುವಟಿಕೆಗಳನ್ನು ವಿಸ್ತರಿಸುವುದು ಮತ್ತು ಕ್ರೀಡೆಗಳಲ್ಲಿ ಬಾಲಕಿಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವ ಕುರಿತು ಜಾಗತಿಕ ಹಾಗೂ ಭಾರತದ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಾಯಿತು. ಮುಂದಿನ ಐದು ವರ್ಷಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಬಾಲಕಿಯರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಗುರಿ ಹೊಂದಿರುವ ‘ಕ್ರೀಡೆಯಲ್ಲಿ ಬಾಲಕಿಯರು’ (Girls in Sport) ಅಭಿಯಾನಕ್ಕೂ ಈ ಸಭೆ ಹೊಸ ವೇಗ ನೀಡಿದೆ.
ದೇಶದಲ್ಲಿ ತಳಮಟ್ಟದ ಕ್ರೀಡಾ ಚಳವಳಿಗೆ ಜಾಗತಿಕ ಅನುಭವಗಳನ್ನು ಪರಿಚಯಿಸುವ ಉದ್ದೇಶದಿಂದ   #ಬದಲಾವಣೆಗಾಗಿಕ್ರೀಡೆ   ಪ್ರಚಾರ ಅಭಿಯಾನಕ್ಕೆ ಜಾಗತಿಕ ಮೈತ್ರಿ ರೂಪಿಸುವ ಉದ್ದೇಶದಿಂದ  ಈ ಸಭೆ ಆಯೋಜಿಸಲಾಗಿತ್ತು.   ‘ನಿಜವಾದ ತಳಮಟ್ಟದ ಜಾಗತಿಕ ಚಳವಳಿ – ಭಾರತದ #ಬದಲಾವಣೆಗಾಗಿಕ್ರೀಡೆ ಅಭಿಯಾನಕ್ಕೆ ಜಾಗತಿಕ ಸಹಭಾಗಿತ್ವ ನಿರ್ಮಾಣ’- ಇದು ಈ ಸಭೆಯ  ಆಶಯವಾಗಿತ್ತು.
ದೇಶದ ಪ್ರಮುಖ ಕ್ರೀಡಾ ಶಿಕ್ಷಣ ಸಂಸ್ಥೆಯಾಗಿರುವ ಸ್ಪೋರ್ಟ್ಜ್‌ ವಿಲೇಜ್‌ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ‘ಐಎಸ್‌ಸಿಎ’ ಜ್ಞಾನದ ಪಾಲುದಾರರಾಗಿ ಮತ್ತು  ಕ್ರೀಡೆ ಹಾಗೂ ಅಭಿವೃದ್ಧಿಗೆ ಅಂತರರಾಷ್ಟ್ರೀಯ ವೇದಿಕೆಯು ಜಾಗತಿಕ ಸಂವಹನ ಪಾಲುದಾರರಾಗಿ ಭಾಗವಹಿಸಿದ್ದವು.
ಯುವಜನರಲ್ಲಿ ಹೆಚ್ಚುತ್ತಿರುವ ದೈಹಿಕ ನಿಷ್ಕ್ರಿಯತೆ ಕಡಿಮೆ ಮಾಡುವುದು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಕ್ರೀಡೆಯನ್ನು ಬಳಸಿಕೊಳ್ಳುವುದು ಹೇಗೆ ಎಂಬ ಕುರಿತು ಈ ಸಭೆಯಲ್ಲಿ ಭಾರತ ಹಾಗೂ ವಿವಿಧ ದೇಶಗಳ ತಜ್ಞರು ಮತ್ತು ಪ್ರತಿನಿಧಿಗಳು  ವಿಸ್ತೃತವಾಗಿ ಚರ್ಚಿಸಿದರು. 

ಸಭೆಯಲ್ಲಿ ‘ಐಎಸ್‌ಸಿಎ’ ಅಧ್ಯಕ್ಷ ಮೊಗೆನ್ಸ್ ಕಿರ್ಕೆಬಿ, ಸ್ಪೋರ್ಟ್ಜ್‌ ವಿಲೇಜ್‌ನ  ಸಹ-ಸಂಸ್ಥಾಪಕ ಹಾಗೂ ಫೌಂಡೇಷನ್ ಮುಖ್ಯಸ್ಥ ಪರ್ಮಿಂದರ್ ಗಿಲ್ ಸೇರಿದಂತೆ ಹಲವು ಗಣ್ಯರು ಹಾಗೂ   ಕಾರ್ಪೊರೇಟ್, ರಾಜ್ಯ ಸರ್ಕಾರ ಮತ್ತು ಅಭಿವೃದ್ಧಿ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಳಮಟ್ಟದಲ್ಲಿ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ಮತ್ತು ದೀರ್ಘಕಾಲೀನ ಕ್ರೀಡಾ ವ್ಯವಸ್ಥೆ  ನಿರ್ಮಿಸಲು ರಾಜ್ಯ ಸರ್ಕಾರಗಳು, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಗತಗೊಳಿಸುವ ಅಧಿಕಾರಿಗಳು, ಪ್ರತಿಷ್ಠಾನಗಳು ಮತ್ತು ಕ್ರೀಡಾ ಸಂಘಟನೆಗಳು ಸಮನ್ವಯತೆಯಿಂದ  ಕಾರ್ಯನಿರ್ವಹಿಸುವ ಮಾರ್ಗೊಪಾಯಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ಕ್ರೀಡಾ ಸಾಧನೆಯನ್ನು ಕೇವಲ ಪದಕಗಳ ಸಂಖ್ಯೆಯಿಂದ ಅಳೆಯುವುದನ್ನು ಮೀರಿ ನೋಡಬೇಕಾದ ಅಗತ್ಯವನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಪದಕ ಗೆಲ್ಲುವ ಗುರಿಯ ಕಾರ್ಯಕ್ರಮಗಳು ತಮ್ಮದೇ ಆದ ಮಹತ್ವ ಹೊಂದಿದ್ದರೂ, ತಳಮಟ್ಟದ ಕ್ರೀಡೆಯ ನಿಜವಾದ ಪರಿಣಾಮವು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ತಲುಪುವ ಮೂಲಕ ಅವರ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ವಿಶ್ವದಾದ್ಯಂತ ಯುವಜನರಲ್ಲಿ ಹೆಚ್ಚುತ್ತಿರುವ ದೈಹಿಕ ನಿಷ್ಕ್ರಿಯತೆಯ ಹಿನ್ನೆಲೆಯಲ್ಲಿ ಈ ಪ್ರಯತ್ನಕ್ಕೆ ಹೆಚ್ಚಿನ ಮಹತ್ವವಿದೆ. ಕ್ರೀಡೆಯ ಮೂಲಕ ದೈಹಿಕ ಚಟುವಟಿಕೆ  ಹೆಚ್ಚಿಸುವುದು ಎಲ್ಲ ಸಮುದಾಯಗಳಿಗೂ ಅನ್ವಯಿಸಬಹುದಾದ ಜಾಗತಿಕ ಪರಿಹಾರವಾಗಿದ್ದು, ಭಾರತದ ದೊಡ್ಡ ಯುವಜನಸಂಖ್ಯೆ ಈ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಮತ್ತು ಪರಿಣಾಮ ಮೂಡಿಸಲು ಉತ್ತಮ ಅವಕಾಶವನ್ನು ಒದಗಿಸುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಕ್ರೀಡೆಯಲ್ಲಿ ಬಾಲಕಿಯರು- ಪ್ರಚಾರ ಅಭಿಯಾನಕ್ಕೆ ಚಾಲನೆ
ಈ ಸಭೆಯ ಪ್ರಮುಖ ಭಾಗವಾಗಿ ‘ಕ್ರೀಡೆಯಲ್ಲಿ ಬಾಲಕಿಯರು’ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ದೇಶದಲ್ಲಿ ಲಿಂಗ ಸಮಾನತೆ  ಉತ್ತೇಜಿಸುವುದು ಮತ್ತು ಬಾಲಕಿಯರು ಕ್ರೀಡೆಯಲ್ಲಿ ಭಾಗವಹಿಸಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು - ಸ್ಪೋರ್ಟಜ್‌ ವಿಲೇಜ್‌ ಫೌಂಡೇಷನ್‌ ಮತ್ತು ‘ಐಎಸ್‌ಸಿಎ’ ಜಂಟಿಯಾಗಿ ಆರಂಭಿಸಿರುವ ಈ ಅಭಿಯಾನದ ಉದ್ದೇಶವಾಗಿದೆ. ಮುಂದಿನ ಐದು ವರ್ಷಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಬಾಲಕಿಯರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಈ ಅಭಿಯಾನವು ನಿಗದಿಪಡಿಸಿದೆ.
ತಳಮಟ್ಟದ ಹಾಗೂ ಸಮುದಾಯ ಆಧಾರಿತ ಕ್ರೀಡೆಗಳಲ್ಲಿ ಜಾಗತಿಕ ಅನುಭವಗಳು ಮತ್ತು ಉತ್ತಮ ಕಾರ್ಯವಿಧಾನಗಳನ್ನು ಪರಸ್ಪರ ಹಂಚಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು. ವಿವಿಧ ದೇಶಗಳಲ್ಲಿ ಯಶಸ್ವಿಯಾಗಿರುವ ವಿಧಾನಗಳನ್ನು ಭಾರತದ ಸ್ಥಳೀಯ ಪರಿಸ್ಥಿತಿಗೆ ಹೇಗೆ ಹೊಂದಿಸಿಕೊಳ್ಳಬಹುದು ಎಂಬುದರ ಬಗ್ಗೆಯೂ ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು.
ಸ್ಪೋರ್ಟ್ಜ್‌ ವಿಲೇಜ್‌-ನ ಸಹ-ಸಂಸ್ಥಾಪಕ ಹಾಗೂ ಫೌಂಡೇಷನ್ ಮುಖ್ಯಸ್ಥ ಪರ್ಮಿಂದರ್ ಗಿಲ್ ಅವರು ಮಾತನಾಡಿ,  ‘ಕ್ರೀಡಾ ಕ್ಷೇತ್ರದಲ್ಲಿನ ಶ್ರೇಷ್ಠತೆ ಅಳೆಯಲು ಪದಕಗಳು ಪ್ರಮುಖ ಮಾನದಂಡವಾಗಿವೆ. ಆದರೆ, ಆ ಸಾಧನೆಗೆ ಅಗತ್ಯವಾದ ಅಡಿಪಾಯ ಬಹಳ ಹಿಂದೆಯೇ, ತಳಮಟ್ಟದಲ್ಲಿ ನಿರ್ಮಾಣವಾಗಿರುತ್ತದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ದೈಹಿಕ ಶಿಕ್ಷಣ, ವಿವಿಧ ಕ್ರೀಡೆಗಳ ಪರಿಚಯ ಮತ್ತು ತಮ್ಮ ಸಾಮರ್ಥ್ಯ  ಬೆಳೆಸಿಕೊಳ್ಳಲು ಸೂಕ್ತ ಅವಕಾಶಗಳನ್ನು ಒದಗಿಸುವ ಮೂಲಕ, ಉತ್ತಮ ಕ್ರೀಡಾಪಟುಗಳನ್ನು ರೂಪಿಸುವ ಬಲಿಷ್ಠ ವ್ಯವಸ್ಥೆಯನ್ನು ನಿರ್ಮಿಸಬಹುದು. ಅದೇ ಸಮಯದಲ್ಲಿ ಕ್ರೀಡೆಯು ಮಕ್ಕಳ ಸಮಗ್ರ ಅಭಿವೃದ್ಧಿಗೂ ನೆರವಾಗುತ್ತದೆ. ಭಾರತದ ಯುವಜನಸಂಖ್ಯೆಯ ಗಾತ್ರ ಗಮನಿಸಿದರೆ, ವಿಶೇಷವಾಗಿ ಬಾಲಕಿಯರಿಗೆ ಇಂತಹ ಅವಕಾಶಗಳನ್ನು ವಿಸ್ತರಿಸುವುದರಿಂದ ಹೆಚ್ಚು ಸಮಾನತೆ ಹೊಂದಿರುವ ಮತ್ತು ದೀರ್ಘಕಾಲೀನ ಕ್ರೀಡಾ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
‘ಐಎಸ್‌ಸಿಎ’ ಅಧ್ಯಕ್ಷ ಮೊಗೆನ್ಸ್ ಕಿರ್ಕೆಬಿ ಅವರು ಮಾತನಾಡಿ, ‘ಯುವಜನರಲ್ಲಿ ಹೆಚ್ಚುತ್ತಿರುವ ದೈಹಿಕ ನಿಷ್ಕ್ರಿಯತೆ ಜಾಗತಿಕ ಸವಾಲಾಗಿದೆ. ಕ್ರೀಡೆಯ ಮೂಲಕ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು ನಮ್ಮ ಮುಂದಿರುವ ಅತ್ಯಂತ ಸುಲಭವಾಗಿ ಅನುಸರಿಸಬಹುದಾದ ಪರಿಹಾರಗಳಲ್ಲಿ ಒಂದಾಗಿದೆ. ದೊಡ್ಡ ಯುವಜನಸಂಖ್ಯೆ ಹೊಂದಿರುವ ಭಾರತವು ಇದನ್ನು ದೊಡ್ಡ ಪ್ರಮಾಣದಲ್ಲಿ ಹೇಗೆ ಅನುಷ್ಠಾನಗೊಳಿಸಬಹುದು ಎಂಬುದನ್ನು ತೋರಿಸಬಲ್ಲದು. ವಿವಿಧ ದೇಶಗಳಲ್ಲಿ ಯಶಸ್ವಿಯಾಗಿರುವ ಅನುಭವಗಳನ್ನು ಈ ಚರ್ಚೆಯ ವ್ಯಾಪ್ತಿಗೆ ತರುವುದರಿಂದ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿಧಾನಗಳನ್ನು ಪರಸ್ಪರ ಹಂಚಿಕೊಳ್ಳಲು ಮತ್ತು ಅವುಗಳನ್ನು ಭಾರತದ ಪರಿಸ್ಥಿತಿಗೆ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಸಹಯೋಗದ ಮೂಲಕವೇ ತಳಮಟ್ಟದ ಕ್ರೀಡಾ ಪ್ರಯತ್ನಗಳನ್ನು ಪ್ರತ್ಯೇಕ ಕಾರ್ಯಕ್ರಮಗಳ ಹಂತದಿಂದ ದೀರ್ಘಕಾಲೀನ ಮತ್ತು ಪರಿಣಾಮಕಾರಿ ಬದಲಾವಣೆಯತ್ತ ಕೊಂಡೊಯ್ಯಬಹುದು’ ಎಂದು ಹೇಳಿದರು.
ಭಾರತವು ಜಾಗತಿಕ ‘ಬದಲಾವಣೆಗಾಗಿ ಕ್ರೀಡೆ’ ಅಭಿಯಾನದಲ್ಲಿ ತನ್ನ ಪಾತ್ರವನ್ನು ಮತ್ತಷ್ಟು ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ‘ಬದಲಾವಣೆಗಾಗಿ ಕ್ರೀಡೆ’   ಮತ್ತು ‘ಕ್ರೀಡೆಯಲ್ಲಿ ಬಾಲಕಿಯರು’ ಪ್ರಚಾರ ಅಭಿಯಾನಗಳು ಮಕ್ಕಳ ಜೀವನದಲ್ಲಿ ಶಾಶ್ವತ ಬದಲಾವಣೆ ತರಲು ಕ್ರೀಡೆಯನ್ನು ಪರಿಣಾಮಕಾರಿ ಸಾಧನವಾಗಿ ಬಳಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net