ಸರಣಿ ಸೋಲು ಅಂದ್ರೆ ಅದು... 5ನೇ ಟಿ20 ಪಂದ್ಯ ಸೋತ ಬೆನ್ನಲ್ಲೇ ಕ್ಯಾಪ್ಟನ್​ ಮಾರ್ಕ್ರಾಮ್ ಬೇಸರ ನುಡಿ | IND vs SA T20

ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್
ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಎದುರು 30 ರನ್​ಗಳ ಸೋಲು
  • ಪಂದ್ಯ ಸೋಲಿನ ಬೆನ್ನಲ್ಲೇ ಸರಣಿ ಸೋತ ದಕ್ಷಿಣ ಆಫ್ರಿಕಾ
  • ಈ ಸೋಲನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ ಎಂದ ಕ್ಯಾಪ್ಟನ್ ಐಡೆನ್​
ಅಹಮದಾಬಾದ್​: ನಿನ್ನೆ (ಡಿ.19) ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಎದುರು 30 ರನ್‌ಗಳ ಹೀನಾಯ ಸೋಲು ಅನುಭವಿಸಿತು. ನಿರ್ಣಾಯಕ ಪಂದ್ಯದಲ್ಲಿ ಗೆಲುವನ್ನು ನಿರೀಕ್ಷಿಸಿದ್ದ ದಕ್ಷಿಣ ಆಫ್ರಿಕಾ ಕ್ಯಾಪ್ಟನ್​ ಐಡೆನ್ ಮಾರ್ಕ್ರಾಮ್, ಸರಣಿ ಸೋತ ಬೆನ್ನಲ್ಲೇ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
"ಈ ಸೋಲನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಆದರೆ, 230 ರನ್‌ಗಳ ಗುರಿಯನ್ನು ಬೆನ್ನಟ್ಟಿದಾಗ, ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಬೇಕು. ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಅಗ್ರ 3 ಬ್ಯಾಟರ್​ಗಳು ಉತ್ತಮವಾಗಿ ಆಡಿದರು. ಅದಾದ ಬಳಿಕ ಕ್ರೀಸ್​ಗೆ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅದೇ ವೇಗವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಇದರಿಂದಾಗಿ, ನಾವು ಗುರಿಯನ್ನು ಬೆನ್ನಟ್ಟುವಲ್ಲಿ ತೀರ ಹಿಂದೆ ಬಿದ್ದೆವು" ಎಂದು ಮಾರ್ಕ್ರಾಮ್ ಹೇಳಿದರು.

ಸರಣಿ ಸೋಲು ಸೋತ ಲೆಕ್ಕವೇ

"ಈ ಸೋಲಿನಿಂದ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಟಿ20 ಕ್ರಿಕೆಟ್‌ನಲ್ಲಿ ಎಂದಿಗೂ ಒಂದೇ ಬ್ಯಾಟಿಂಗ್ ಕ್ರಮಾಂಕ ಇರುವುದಿಲ್ಲ. ಪಂದ್ಯದ ಪರಿಸ್ಥಿತಿಗಳಿಗೆ ತಕ್ಕಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಪಂದ್ಯದಲ್ಲಿ ನಾವು ಅದೇ ರೀತಿ ಮಾಡಿದೆವು. 2026ರ ಟಿ20 ವಿಶ್ವಕಪ್‌ಗೆ ಮೊದಲೇ ನಮ್ಮ ತಂಡ ಒಂದಷ್ಟು ಕಠಿಣ ಸವಾಲುಗಳನ್ನು ಎದುರಿಸಿತು. ಟೀಮ್ ಇಂಡಿಯಾ ರೀತಿಯ ಬಲಿಷ್ಠ ತಂಡದ ವಿರುದ್ಧ ಆಡುವುದರಿಂದ ವಿಶ್ವಕಪ್ ಗೆಲ್ಲುವುದು ಹೇಗೆ ಎಂಬುದರ ಬಗ್ಗೆ ತಿಳುವಳಿಕೆ ಮೂಡಿದೆ. ಸರಣಿ ಸೋಲಿನ ಬಗ್ಗೆ ಹೆಚ್ಚು ಚಿಂತಿಸಬಾರದು. ಸದ್ಯ ಟಿ20 ವಿಶ್ವಕಪ್ ಗೆಲ್ಲುವುದು ನಮ್ಮ ಏಕೈಕ ಗುರಿ" ಎಂದರು.

ಪಂದ್ಯದ ವಿವರ

ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 231 ರನ್ ಗಳಿಸಿತು. ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪೈಕಿ ತಿಲಕ್ ವರ್ಮಾ (73 ರನ್​, 10 ಬೌಂಡರಿ, 1 ಸಿಕ್ಸರ್) ಮತ್ತು ಹಾರ್ದಿಕ್ ಪಾಂಡ್ಯ (63 ರನ್​, 5 ಬೌಂಡರಿ, 5 ಸಿಕ್ಸರ್) ಸ್ಫೋಟಕ ಇನ್ನಿಂಗ್ಸ್​ ನೀಡಿದರು. ಹರಿಣರ ಪಡೆ ಪರ ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಒಟ್ನೀಲ್ ಬಾರ್ಟ್‌ಮನ್ ಮತ್ತು ಜಾರ್ಜ್ ಲಿಂಡೆ ತಲಾ ಒಂದು ವಿಕೆಟ್ ಕಬಳಿಸಿದರು.
ಟೀಮ್ ಇಂಡಿಯಾ ನೀಡಿದ 232 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ವಿಫಲಗೊಂಡ ದಕ್ಷಿಣ ಆಫ್ರಿಕಾ, 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 201 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದು ಬೀಗಿತು. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ (65 ರನ್​, 35 ಎಸೆತ, 9 ಬೌಂಡರಿ, 3 ಸಿಕ್ಸರ್) ಅರ್ಧಶತಕ ಗಳಿಸಿದರು. ಇನ್ನು ಟೀಮ್ ಇಂಡಿಯಾ ಪರ ವರುಣ್ ಚಕ್ರವರ್ತಿ 4, ಜಸ್ಪ್ರೀತ್ ಬುಮ್ರಾ 2 ಮತ್ತು ಅರ್ಶ್​ದೀಪ್​ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net