ಶತಶತಕ ಎಷ್ಟೊಂದು ಹತ್ತಿರ? ಎಷ್ಟೊಂದು ದೂರ..!

ಸಚಿನ್​ ತೆಂಡೂಲ್ಕರ್-ವಿರಾಟ್ ಕೊಹ್ಲಿ
ಸಚಿನ್​ ತೆಂಡೂಲ್ಕರ್-ವಿರಾಟ್ ಕೊಹ್ಲಿ
Published on

  (ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ಮುಂಬೈ: ಕಳೆದ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಲ್ಲಿ ಸತತ 2 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಸತತ 2 ಪಂದ್ಯಗಳಲ್ಲಿ ಶತಕ ಸಿಡಿಸಿದ್ದಾರೆ. ಅದರೊಂದಿಗೆ ಅಂತಾರಾಷ್ಟ್ರೀಯ ಶತಕ ಗಳಿಕೆ ಓಟದಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದಾರೆ.

ಕ್ರಿಕೆಟ್ ಇರಲಿ, ಯಾವುದೇ ಆಟವಿರಲಿ, ದಾಖಲೆಗಳಿರುವುದೇ ಮುರಿಯುವುದಕ್ಕೆ. ಯಾವ ದಾಖಲೆಯೂ ಶಾಶ್ವತ ಅಥವಾ ಚಿರಂಜೀವಿ ಎಂದು ಭಾವಿಸಲು ಸಾಧ್ಯವಿಲ್ಲ. ಸವ್ಯಸಾಚಿ ಸಚಿನ್ ತೆಂಡುಲ್ಕರ್ 664 ಪಂದ್ಯಗಳ ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ‘ಪ್ರಥಮ’ಗಳನ್ನು ತಮ್ಮ ಹೆಸರಿಗೆ ಬರೆದುಕೊಂಡವರು. ದಾಖಲೆಗಳ ವಿಚಾರದಲ್ಲಿ ಅವರು ತಮ್ಮ ಸಮಕಾಲೀನರು, ತಮಗಿಂತ ಮೊದಲೇ ಆಡಿಹೋದವರು ಹಾಗೂ ವರ್ತಮಾನದಲ್ಲಿ ಆಡುತ್ತಿರುವವರಿಗಿಂತ ಬಹುದೊಡ್ಡ ಅಂತರ ಕಾಪಾಡಿಕೊಂಡಿದ್ದಾರೆ.

ತೆಂಡುಲ್ಕರ್ ವೃತ್ತಿಜೀವನದ ಮೇರುದಾಖಲೆ ಶತಕಗಳ ಮಹಾಶತಕ. ಇದೊಂದು ರೀತಿಯಲ್ಲಿ ಹಿಮಾಲಯದೆತ್ತರದ ಸಾಧನೆ. 49 ಬಾರಿ ಏಕದಿನ ಕ್ರಿಕೆಟ್​ನಲ್ಲಿ, 51 ಬಾರಿ ಟೆಸ್ಟ್ ಕ್ರಿಕೆಟ್​ನಲ್ಲಿ ಮೂರಂಕಿ ಗಡಿ ದಾಟಿದ ತ್ರಿವಿಕ್ರಮ ಅವರು. ಬಹುಶಃ ತೆಂಡುಲ್ಕರ್ ಉತ್ತುಂಗದ ದಿನಗಳಲ್ಲೇ ಟಿ20 ಕ್ರಿಕೆಟ್ ಜನಪ್ರಿಯವಾಗಿದ್ದಿದ್ದರೆ, ಆ ಮಾದರಿಯಲ್ಲೂ ಅವರು ಒಂದಷ್ಟು ಶತಕ ದಾಖಲಿಸುವ ಸಾಧ್ಯತೆಗಳಿದ್ದವು.

ಅಂತಾರಾಷ್ಟ್ರೀಯ ಶತಕಗಳ ಸ್ಪರ್ಧೆಯಲ್ಲಿ ವಿರಾಟ್ ಕೊಹ್ಲಿ ಪ್ರವರ್ಧಮಾನಕ್ಕೆ ಬರುವವರೆಗೆ, ತೆಂಡುಲ್ಕರ್ ನಂತರದ ಶ್ರೇಷ್ಠ ಸಾಧನೆಯೆಂದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್​ರ 71 ಶತಕಗಳ ಗಳಿಕೆಯಾಗಿತ್ತು. ಅಂದರೆ, ಮೊದಲ ಹಾಗೂ 2ನೇ ಸ್ಥಾನದ ನಡುವೆ 29 ಶತಕಗಳ ಅಂತರವಿತ್ತು. ಸಚಿನ್, ಪಾಂಟಿಂಗ್ ಸಮಕಾಲೀನರಾದ ಕುಮಾರ ಸಂಗಕ್ಕರ 63 ಮತ್ತು ಆಫ್ರಿಕಾದ ಜಾಕ್ಸ್ ಕಾಲಿಸ್ 62 ಶತಕಗಳಿಗೆ ಸುಸ್ತಾಗಿದ್ದರು. ಹಾಗಾಗಿ ತೆಂಡುಲ್ಕರ್ ಶತಶತಕ ದಾಖಲೆ ಮುರಿಯುವವರು ಯಾರಾದರೂ ಇದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ ಎಂಬ ಭಾವನೆ ಇತ್ತು. ಈಗಲೂ ಅಂಥ ಭಾವನೆ ಇದ್ದೇ ಇದೆ.

ಮೊನ್ನೆ ರಾಂಚಿ ಮತ್ತು ರಾಯ್ಪುರದಲ್ಲಿ ಸತತ ಶತಕಗಳ ಮೂಲಕ 84 ಅಂತಾರಾಷ್ಟ್ರೀಯ ಶತಕದ ಗಡಿ ದಾಟಿರುವ ಕೊಹ್ಲಿ ತಮ್ಮ ಶತ-ಶತಕಗಳ ಕನಸಿನಿಂದ 16 ಮೆಟ್ಟಿಲಷ್ಟೇ ದೂರದಲ್ಲಿದ್ದಾರೆ. 37 ವರ್ಷದ ಕೊಹ್ಲಿಗೆ ಇನ್ನೊಂದೆರಡು ವರ್ಷಗಳ ಈ ಆಟದಲ್ಲಿ ಈ ಮಹಾನ್ ಸಾಧನೆ ಎಟುಕೀತೇ?

ಏಕದಿನ ಕ್ರಿಕೆಟ್​ನಲ್ಲಿ ವಿಶ್ವದಾಖಲೆಯ 53, ಟೆಸ್ಟ್​ಗಳಲ್ಲಿ 30 ಹಾಗೂ ಟಿ20 ಮಾದರಿಯಲ್ಲಿ ಒಮ್ಮೆ ಸೆಂಚುರಿ ಬಾರಿಸಿರುವ ಕೊಹ್ಲಿಯ ಸಮಕಾಲೀನರಲ್ಲಿ ಯಾರಿಗೂ ಶತಶತಕದ ಯೋಗ ಇದ್ದಂತಿಲ್ಲ. ಇದಕ್ಕೂ ಕಾರಣವಿದೆ. ಸದ್ಯ ಕೊಹ್ಲಿಗೆ ಸಮೀಪದಲ್ಲಿರುವವರು ಇಂಗ್ಲೆಂಡ್​ನ ಜೋ ರೂಟ್. ಗುರುವಾರ ಆಶಸ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಶತಕವೂ ಸೇರಿದಂತೆ ಅವರು ಗಳಿಸಿರುವುದು 59 ಶತಕ ಮಾತ್ರ. 

ಇನ್ನೂ 41 ಶತಕ ಬಾರಿಸುವ ಕೌಶಲ, ಸಾಮರ್ಥ್ಯ ಅವರಿಗಿದ್ದರೂ, ವಯಸ್ಸು ಇದ್ದಂತಿಲ್ಲ. ಈಗಾಗಲೇ 35ನೇ ವರ್ಷದ ಹೊಸ್ತಿಲಲ್ಲಿರುವ ಅವರು ಜೇಮ್ಸ್​ ಆಂಡರ್​ಸನ್​ರಂತೆ 41-42ನೇ ವಯಸ್ಸಿನವರೆಗೂ ಆಡಿದರೆ ಮಾತ್ರ ಶತಶತಕ ಅವರಿಗೊಲಿದೀತು. ಆದರೆ, ಇಂಗ್ಲೆಂಡ್ ವಾತಾವರಣದಲ್ಲಿ ಅವರು ಅಷ್ಟು ಕಾಲ ವೃತ್ತಿಜೀವನ ವಿಳಂಬಿಸುವುದು ಅನುಮಾನ. ಆದರೆ, ಗುರುವಾರ ಆಶಸ್ ಟೆಸ್ಟ್​ನಲ್ಲಿ ಗಳಿಸಿದ ಅಜೇಯ 135 ರನ್​ಗಳೂ ಸೇರಿ ಟೆಸ್ಟ್ ಕ್ರಿಕೆಟ್​ನಲ್ಲಿ 13,686 ರನ್ ಗಳಿಸಿರುವ ರೂಟ್​ಗೆ ಇನ್ನೊಂದೆರಡು ವರ್ಷ ಆಡಿದರೆ, ತೆಂಡುಲ್ಕರ್ ಹೆಸರಲ್ಲಿರುವ 15921 ಟೆಸ್ಟ್ ರನ್​ಗಳ ದಾಖಲೆ ಮುರಿಯುವ ಅವಕಾಶ ಸಿಗಬಹುದು.

ಉಳಿದಂತೆ ಆಸೀಸ್​ನ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ ಇಬ್ಬರೂ 48 ಶತಕಗಳಷ್ಟೇ ಗಳಿಸಿರುವ ಕಾರಣ, ಅವರಿಬ್ಬರಿಗೆ ಶತಶತಕ ಯೋಗವಿಲ್ಲ. ರೂಟ್ (39), ಸ್ಮಿತ್ (36), ವಿಲಿಯಮ್ಸನ್ (33) ಮೂವರೂ ಟೆಸ್ಟ್ ಶತಕಗಳ ಗಳಿಕೆಯಲ್ಲಿ ಕೊಹ್ಲಿಯನ್ನು (30) ಹಿಂದಿಕ್ಕಿದ್ದರೂ, ಶತಶತಕ ಸ್ಪರ್ಧೆಯಲ್ಲಿ ಅವರ್ಯಾರೂ ಕೊಹ್ಲಿಗೆ ಹತ್ತಿರದಲ್ಲೂ ಇಲ್ಲ. ಹಾಗಾದರೆ, ಕೊಹ್ಲಿಯಿಂದ ಶತಶತಕ ಸಾಧ್ಯವೇ? ಸಾಧ್ಯವಿದೆ. ಆದರೆ, ವಯಸ್ಸು ಮತ್ತು ಸನ್ನಿವೇಶಗಳು ಅವರಿಗೆ ತುಸು ವಿರುದ್ಧವಾಗಿರುವ ಕಾರಣಕ್ಕೆ ಆಶಾವಾದ, ಅನುಮಾನ ಎರಡೂ ಸಮಪ್ರಮಾಣದಲ್ಲಿವೆ.

ಕೆಲವೊಮ್ಮೆ ಕ್ರಿಕೆಟ್ ಮಂಡಳಿಗಳು, ಆಯ್ಕೆಗಾರರು ಹಾಗೂ ತರಬೇತುದಾರರ ವಿಚಿತ್ರ ನಿಲುವು- ನಿರ್ಧಾರಗಳು ಅಪೂರ್ವ ಸಾಧನೆಯ ಅವಕಾಶಗಳಿಗೆ ಕಲ್ಲುಹಾಕಿಬಿಡುತ್ತವೆ. ಕೊಹ್ಲಿ ವಿಚಾರದಲ್ಲಿ ಆಗಿರುವುದೂ ಅದೇ. ರವಿಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಸತತವಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್ ತಲುಪಿದ್ದ ಭಾರತ, ಗೌತಮ್ ಗಂಭೀರ್ ತರಬೇತುದಾರರಾದ ಮೇಲೆ ‘ಐತಿಹಾಸಿಕ ಕುಸಿತ’ ಕಾಣುತ್ತಿದೆ. ತವರಿನಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್ ವಾಷ್ ಅನುಭವಿಸಿದ್ದು ಹಿಂದೆಂದೂ ಕೇಳರಿಯದ ಮುಖಭಂಗಗಳು.

ಈ ಎರಡು ವೈಟ್​ವಾಷ್​ಗಳ ನಡುವೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಟೆಸ್ಟ್ ವೈಫಲ್ಯ ‘ಸ್ಥಿತ್ಯಂತರ’ವೆಂಬ ಕೆಟ್ಟ ಪ್ರಯೋಗಕ್ಕೆ ದಾರಿಮಾಡಿಕೊಟ್ಟಿತು.

ಒಂದು ರಾಜ್ಯ ಸಿಂಹಾಸನವೇ ಇರಲಿ, ಕ್ರಿಕೆಟ್ ತಂಡದಲ್ಲಿ ಬದಲಾವಣೆಗಳೇ ಇರಲಿ. ಎಲ್ಲದಕ್ಕೂ ಕಾಲ ಪಕ್ವವಾಗಿದ್ದರಷ್ಟೇ ಯಶಸ್ವಿಯಾಗುತ್ತದೆ. ಹೊಣೆಗಾರಿಕೆಯನ್ನು ಸಮರ್ಥವಾಗಿ ಹೊರಬಲ್ಲ ಉತ್ತರಾಧಿಕಾರಿಗಳು ಸಿದ್ಧರಾಗುವ ಮೊದಲೇ ಸ್ಥಿತ್ಯಂತರ ಪ್ರಕ್ರಿಯೆ ಆರಂಭಿಸಿಬಿಟ್ಟರೆ ಭಾರತ ಟೆಸ್ಟ್ ತಂಡದ ಅವಸ್ಥೆಯೇ ಆಗುತ್ತದೆ. ಟೀಮ್ ಇಂಡಿಯಾದಲ್ಲಿ ತೆಂಡುಲ್ಕರ್ ನಿವೃತ್ತಿ ಬಳಿಕ ಅವರ ಸ್ಥಾನವನ್ನು ವಿರಾಟ್ ಕೊಹ್ಲಿ ಸಮರ್ಥವಾಗಿ ತುಂಬಿದರು. ಆದರೆ, ಕೊಹ್ಲಿ ಸ್ಥಾನ ತುಂಬಬಲ್ಲ ಯೋಗ್ಯ ಆಟಗಾರ ಪ್ರವರ್ಧಮಾನಕ್ಕೆ ಬರುವ ಮುನ್ನವೇ ಅವರಿಗೆ ಬಲವಂತ ಟೆಸ್ಟ್ ನಿವೃತ್ತಿ ಕೊಡಿಸಲಾಯಿತು. ಅದರಿಂದ ನಷ್ಟವಾಗಿದ್ದು ಭಾರತ ತಂಡಕ್ಕೆ. 

ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಆಡುತ್ತಿರುವ ಪರಿ ನೋಡಿದರೆ, ಇನ್ನೂ ಎರಡು ಮೂರು ವರ್ಷ ಅವರು ಇದೇ ಫಿಟ್​ನೆಸ್, ಇದೇ ಲಹರಿಯಲ್ಲಿ ಆಡಬಲ್ಲರು. ಫಿಟ್​ನೆಸ್ ವಿಚಾರದಲ್ಲಿ ಹೇಳುವುದಾದರೆ, ಟೀಮ್ ಇಂಡಿಯಾದಲ್ಲಿರುವ ತಮ್ಮ ಅರ್ಧ ವಯಸ್ಸಿನ ಆಟಗಾರರಿಗಿಂತ ಕೊಹ್ಲಿ ಹೆಚ್ಚು ಫಿಟ್ ಆಗಿದ್ದಾರೆ. ಒಂದು ವೇಳೆ ಅವರು ಟೆಸ್ಟ್ ಕ್ರಿಕೆಟ್​ನಲ್ಲೂ ಮುಂದುವರಿದಿದ್ದರೆ, ಗರಿಷ್ಠ 2027ರ ಏಕದಿನ ವಿಶ್ವಕಪ್​ವರೆಗೆ ಆಡಿದ್ದರೂ, ಕೊಹ್ಲಿಗೆ ಕನಿಷ್ಠ 15 ಟೆಸ್ಟ್ ಹಾಗೂ 30 ಏಕದಿನಗಳಲ್ಲಿ ಆಡುವ ಅವಕಾಶ ಲಭಿಸುತ್ತಿತ್ತು. ಅಂದರೆ, 45 ಪಂದ್ಯಗಳ ಸುಮಾರು 60 ಇನಿಂಗ್ಸ್​ಗಳಲ್ಲಿ ಅವರು 16 ಶತಕ ಬಾರಿಸಿ ಸೆಂಚುರಿಗಳ ಸೆಂಚುರಿ ದಾಖಲಿಸುವ ಸಾಧ್ಯತೆ ಹೆಚ್ಚಿನದಾಗಿತ್ತು. ಆದರೆ, ಟೆಸ್ಟ್ ಅವಕಾಶವನ್ನು ಅವರಿಂದ ಕಿತ್ತುಕೊಂಡ ಮೇಲೆ ಅವರಿಗುಳಿದಿರುವುದು, ಆಫ್ರಿಕಾ ವಿರುದ್ಧ ಮುಗಿದಿರುವ 2 ಏಕದಿನ ಕಳೆದು, ಸುಮಾರು 28 ಏಕದಿನ ಪಂದ್ಯಗಳು ಮಾತ್ರ. 

ಈ 28ರಲ್ಲಿ 16 ಶತಕ ಬಾರಿಸುವುದು ಕಷ್ಟಸಾಧ್ಯವೆಂದೇ ಹೇಳಬೇಕು. 28 ಪಂದ್ಯಗಳಲ್ಲಿ 16 ಶತಕ ಸಿಡಿಸುವಂಥ ಸ್ಥಿರತೆಯನ್ನು ಇಲ್ಲಿಯವರೆಗೆ ಕೊಹ್ಲಿ ಸೇರಿ ಯಾವುದೇ ಕ್ರಿಕೆಟಿಗ ಪ್ರದರ್ಶಿಸಿಲ್ಲ. ಹಾಗಾಗಿ ಕೊಹ್ಲಿ ಏನಾದರೂ, ಸಾಧಿಸಿದರೆ ಅದು ದೇವಸದೃಶ, ಪವಾಡವೆಂದೇ ಹೇಳಬೇಕು. ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ತಮ್ಮ ಸ್ವಾರ್ಥ ಬದಿಗಿಟ್ಟು ಯೋಚಿಸಿದ್ದರೆ, ಅದರಿಂದ ಭಾರತೀಯ ಕ್ರಿಕೆಟ್​ಗೆ ಲಾಭವೇ ಆಗುತ್ತಿತ್ತು. ಹಿಂದೆ ಸುನಿಲ್ ಗಾವಸ್ಕರ್ (10122) ಗರಿಷ್ಠ ಟೆಸ್ಟ್ ರನ್​ಗಳ ದಾಖಲೆ, ಕಪಿಲ್ ದೇವ್ (434) ಗರಿಷ್ಠ ಟೆಸ್ಟ್ ವಿಕೆಟ್​ಗಳ ದಾಖಲೆ, ಸಚಿನ್ ತೆಂಡುಲ್ಕರ್ ಶತಶತಕಗಳ ಐತಿಹಾಸಿಕ ದಾಖಲೆಗಳ ಸನಿಹದಲ್ಲಿರುವಾಗ ಅವರ ವಯಸ್ಸನ್ನು ಪರಿಗಣಿಸದೆ, ವೃತ್ತಿಜೀವನ ಲಂಬಿಸಲು ಆಗಿನ ಕ್ರಿಕೆಟ್ ಅಧಿಕಾರಸ್ಥರು, ಆಯ್ಕೆಗಾರರು, 

ಕೋಚ್​ಗಳು, ನಾಯಕರು ಅವಕಾಶ ಮಾಡಿಕೊಟ್ಟಿದ್ದರು. ಅದರಿಂದ ಭಾರತೀಯ ಕ್ರಿಕೆಟ್ ಹೆಸರು ಕೂಡ ಚಿರಸ್ಥಾಯಿಯಾಯಿತು. ಹತ್ತಾರು ವರ್ಷ ದೇಶದ ಪರ ಆಡಿ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಪತಾಕೆ ಮೆರೆಸುವ ದಿಗ್ಗಜ ಆಟಗಾರರಿಗೆ ಕೆಲವು ವ್ಯಕ್ತಿಗತ ಮೈಲಿಗಲ್ಲುಗಳಿಗಾಗಿ ಅವಕಾಶ ಮಾಡಿಕೊಡುವುದು ಅವರಿಗೆ ಸಲ್ಲಿಸುವ ಗೌರವವೂ ಹೌದು. ಅಷ್ಟಕ್ಕೂ ಕ್ರಿಕೆಟ್ ಕೇವಲ ಸೋಲು-ಗೆಲುವಿಗೆ ಸೀಮಿತವಾಗಿರುವ ಆಟವಲ್ಲ. ಆಟಗಾರರ ವೈಯಕ್ತಿಕ ಸಾಧನೆ, ದಾಖಲೆಗಳಿಂದಲೂ ಕ್ರಿಕೆಟ್​ನ ಜನಪ್ರಿಯತೆ, ತಂಡಗಳ ಘನತೆ ಹೆಚ್ಚುತ್ತದೆ. ಹಾಗಿರುವಾಗ ಸ್ಥಿತ್ಯಂತರದ ಹೆಸರಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮರನ್ನು ಟೆಸ್ಟ್ ಕ್ರಿಕೆಟ್​ನಿಂದ ದೂರ ಮಾಡಿದ್ದು ಹಾಗೂ 2027ರ ಏಕದಿನ ವಿಶ್ವಕಪ್ ಆಡುವ ಅಭಿಲಾಷೆಗೂ ಪ್ರಶ್ನಾರ್ಥಕ ಚಿಹ್ನೆಯೊಡ್ಡಿರುವುದು ಭಾರತೀಯ ಕ್ರಿಕೆಟ್​ಗಾಗುತ್ತಿರುವ ನಷ್ಟವೆಂದೇ ಹೇಳಬೇಕು. 

ಏಕದಿನ ಕ್ರಿಕೆಟ್​ನಲ್ಲಿ 14492 ರನ್ ದಾಖಲಿಸಿ, ತೆಂಡುಲ್ಕರ್ ಅವರ 18426 ರನ್ ದಾಖಲೆಯತ್ತ ಹೆಜ್ಜೆ ಹಾಕುತ್ತಿರುವ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ (9230) ಕನಿಷ್ಠ 10 ಸಹಸ್ರ ರನ್ ಮೈಲಿಗಲ್ಲೂ ಎಟುಕದಂತೆ ವೃತ್ತಿಜೀವನ ಮೊಟಕುಗೊಳಿಸಿದ್ದು ದುರಂತ. ಅಷ್ಟಕ್ಕೂ ಮೊದಲೇ ಹೇಳಿದಂತೆ ತೆಂಡುಲ್ಕರ್ ದಾಖಲೆಗಳನ್ನು ಸುಲಭಸಾಧ್ಯವಾಗಿ ಮುರಿಯಲು ಆಗುವುದಿಲ್ಲ. ಇಂಗ್ಲೆಂಡ್​ನ ಅಲಸ್ಟೇರ್ ಕುಕ್ (12472) ಸಚಿನ್​ರ ಟೆಸ್ಟ್ ರನ್ ದಾಖಲೆ ಮುರಿಯುವರೆಂದು ಭಾವಿಸಲಾಗಿತ್ತು. ಆದರೆ, ಅವರು ಅನಿರೀಕ್ಷಿತವಾಗಿ 33ನೇ ವಯಸ್ಸಿಗೆ ನಿವೃತ್ತರಾದರು. 188 ಟೆಸ್ಟ್ ಆಡಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್​ಸನ್ ಸಚಿನ್​ರ 200 ಟೆಸ್ಟ್ ದಾಖಲೆ ಮುರಿಯುವ ತವಕದಲ್ಲಿದ್ದರು. ಆದರೆ, 41ನೇ ವಯಸ್ಸಿನವರೆಗೂ ಆಡಿ 12 ಪಂದ್ಯಗಳ ಕೊರತೆಯೊಂದಿಗೆ ಅವರು ನಿವೃತ್ತರಾದರು. 

ಹಾಲಿ ಭಾರತ ತಂಡದ ನಾಯಕ ಶುಭಮಾನ್ ಗಿಲ್ 2023ರಲ್ಲಿ ಜೀವಮಾನ ಶ್ರೇಷ್ಠ ಫಾರ್ಮ್​​ನಲ್ಲಿದ್ದರು. ಏಕದಿನ ಮಾದರಿಯಲ್ಲಿ 63 ಸರಾಸರಿಯಲ್ಲಿ 1584 ರನ್ ಕಲೆಹಾಕಿದ್ದರು. ಆದರೆ, ತೆಂಡುಲ್ಕರ್ 1998ರಲ್ಲಿ ಒಂದೇ ವರ್ಷದಲ್ಲಿ ಗಳಿಸಿದ್ದ ಗರಿಷ್ಠ 1894 ಏಕದಿನ ರನ್​ಗಳ ದಾಖಲೆ ಮುರಿಯುವುದಕ್ಕೆ ಡೆಂಘ ಜ್ವರ ಅವರಿಗೆ ಅಡ್ಡಿಯಾಯಿತು. ತೆಂಡುಲ್ಕರ್ ದಾಖಲೆ ಅಬಾಧಿತವಾಗುಳಿಯಿತು. ಸದ್ಯ ತೆಂಡುಲ್ಕರ್ ಅವರ ಶತಶತಕಗಳ ಮಹಾನ್ ಗಡಿಯನ್ನು ಕೊಹ್ಲಿ ದಾಟಿಯಾರೇ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net