ಸ್ನೂಕರ್ 900 ಇಂಡಿಯಾ ಕ್ವಾಲಿಫೈಯರ್: ಭಾರತೀಯ ಸ್ನೂಕರ್ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸಿದ ಹೇಬಾಲ್ ಅಕಾಡೆಮಿ

ಸ್ನೂಕರ್ 900 ಇಂಡಿಯಾ ಕ್ವಾಲಿಫೈಯರ್: ಭಾರತೀಯ ಸ್ನೂಕರ್ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸಿದ ಹೇಬಾಲ್ ಅಕಾಡೆಮಿ
ಸ್ನೂಕರ್ 900 ಇಂಡಿಯಾ ಕ್ವಾಲಿಫೈಯರ್: ಭಾರತೀಯ ಸ್ನೂಕರ್ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸಿದ ಹೇಬಾಲ್ ಅಕಾಡೆಮಿ
Published on

ಪ್ರಮುಖ ಮುಖ್ಯಾಂಶಗಳು

  • ಚೊಚ್ಚಲ ಕ್ವಾಲಿಫೈಯರ್ ಮುಡಿಗೇರಿಸಿಕೊಂಡ ಬೆಂಗಳೂರಿನ ಶೇಖ್ ನಜೀಬ್ ಅಹ್ಮದ್; ಯುಕೆ ಪಂದ್ಯಾವಳಿಯಲ್ಲಿ
ಬೆಂಗಳೂರು: ಬೆಂಗಳೂರಿನ ಅಕಾಡೆಮಿ ಅಂಗಳದಿಂದ ಯುಕೆಯ ಅಂತಾರಾಷ್ಟ್ರೀಯ ರಂಗದವರೆಗೆ, ಹೇಬಾಲ್ ಅಕಾಡೆಮಿಯು ಭಾರತದ ಉದಯೋನ್ಮುಖ ಸ್ನೂಕರ್ ಪ್ರತಿಭೆಗಳಿಗೆ ನೂತನ ಹೆದ್ದಾರಿಯನ್ನು ತೆರೆದಿದೆ. ಸೆಪ್ಟೆಂಬರ್ 15 ರಿಂದ 18 ರವರೆಗೆ ಆಯೋಜಿಸಲಾಗಿದ್ದ ಚೊಚ್ಚಲ ಸ್ನೂಕರ್ 900 ಇಂಡಿಯಾ ಕ್ವಾಲಿಫೈಯರ್ ಪಂದ್ಯಾವಳಿಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಬೆಂಗಳೂರಿನ 30 ವರ್ಷದ ಸ್ಥಳೀಯ ಆಟಗಾರ ಶೇಖ್ ನಜೀಬ್ ಅಹ್ಮದ್ ಅವರು ಯುಕೆಯ ಕ್ರೂಸಿಬಲ್ ರೀಡಿಂಗ್‌ನಲ್ಲಿ ನವೆಂಬರ್ 16 ರಿಂದ 18 ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಸಂಪೂರ್ಣ ಪ್ರಾಯೋಜಿತ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯಗಳು ಯುಕೆಯ ಪ್ಲುಟೋ ಟಿವಿಯಲ್ಲಿ ನೇರಪ್ರಸಾರವಾಗಲಿವೆ.
ಅನುಭವಿ ಆಟಗಾರರು ಹಾಗೂ ಭರವಸೆಯ ಯುವ ಆಟಗಾರರು ಸೇರಿದಂತೆ ದೇಶದ ಒಟ್ಟು 32 ಮಂದಿ ಕ್ರೀಡಾಪಟುಗಳು ನಾಲ್ಕು ದಿನಗಳ ಕಾಲ ಜರುಗಿದ ಈ ರೋಚಕ ಕ್ವಾಲಿಫೈಯರ್‌ನಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಕಾದಾಟದಲ್ಲಿ ಆರವ್ ಸಂಚೇತಿ ಅವರನ್ನು ಮಣಿಸಿದ ಶೇಖ್ ನಜೀಬ್ ಅಹ್ಮದ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡರು. ಯುಕೆ ಪಂದ್ಯಾವಳಿಗಾಗಿ ನಜೀಬ್ ಅವರ ಪ್ರಯಾಣ, ವಾಸ್ತವ್ಯ ಮತ್ತು ಸಂಬಂಧಿತ ಎಲ್ಲ ವ್ಯವಸ್ಥೆಗಳ ವೆಚ್ಚವನ್ನು ಹೇಬಾಲ್ ಅಕಾಡೆಮಿಯೇ ಸಂಪೂರ್ಣವಾಗಿ ಭರಿಸಲಿದೆ.
ಇದರಿಂದಾಗಿ ಅವರು ಯಾವುದೇ ಆರ್ಥಿಕ ಹಾಗೂ ಇತರ ಒತ್ತಡಗಳಿಲ್ಲದೆ ಸಂಪೂರ್ಣವಾಗಿ ಸಿದ್ಧತೆ ಮತ್ತು ಸ್ಪರ್ಧೆಯತ್ತ ಮಾತ್ರ ಗಮನಹರಿಸಬಹುದಾಗಿದೆ. ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಈ ಕ್ವಾಲಿಫೈಯರ್, ಭಾರತದಲ್ಲಿ ಅಧಿಕೃತ ಮಾನ್ಯತೆ ಪಡೆದ ಮೊಟ್ಟಮೊದಲ ಸ್ನೂಕರ್ 900 ಪಂದ್ಯಾವಳಿಯಾಗಿದ್ದು, ಇದನ್ನು ಸ್ನೂಕರ್ 900 ಯುಕೆ ಮತ್ತು ಪ್ಲುಟೋ ಟಿವಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು. ಯುಕೆ ಪ್ರವರ್ತಕ ಜೇಸನ್ ಫ್ರಾನ್ಸಿಸ್ ರೂಪಿಸಿರುವ ಈ ಸ್ನೂಕರ್ 900 ಮಾದರಿಯು ಪ್ರತಿ ಫ್ರೇಮ್‌ಗೆ ಕೇವಲ 15 ನಿಮಿಷಗಳ ಕಾಲಾವಕಾಶ ಹಾಗೂ ಪ್ರತಿ ಶಾರ್ಟ್‌ಗೆ 20 ಸೆಕೆಂಡುಗಳ ಶಾಟ್-ಕ್ಲಾಕ್ ನಿಗದಿಪಡಿಸುವ ಮೂಲಕ ಆಟಗಾರರಿಂದ ಕ್ಷಿಪ್ರ ನಿರ್ಧಾರ ಹಾಗೂ ತ್ವರಿತ ಹೊಂದಾಣಿಕೆಯನ್ನು ಬೇಡುತ್ತದೆ. ಪಂದ್ಯಗಳು ಬೆಸ್ಟ್ ಆಫ್ ಫೈವ್ ಮಾದರಿಯಲ್ಲಿದ್ದು, ಪಂದ್ಯ ಸಮಬಲಗೊಂಡಲ್ಲಿ ಫಲಿತಾಂಶವನ್ನು ಬ್ಲೂ-ಬಾಲ್ ಶೂಟೌಟ್ ಮೂಲಕ ನಿರ್ಧರಿಸಲಾಗುತ್ತದೆ.
ಸ್ನೂಕರ್ 900 ಇಂಡಿಯಾ ಕ್ವಾಲಿಫೈಯರ್‌ನ ಚಾಂಪಿಯನ್‌ಶಿಪ್ ನಿರ್ದೇಶಕರು, ಹೇಬಾಲ್ ಅಕಾಡೆಮಿ ಸಂಸ್ಥಾಪಕರು ಹಾಗೂ ಯುಕೆ ಕ್ರಿಸ್ ಹೆನ್ರಿ ಸ್ಪೋರ್ಟ್ಸ್ ಸಂಸ್ಥೆಯ ಭಾರತದ ಮುಖ್ಯ ತರಬೇತುದಾರರಾದ ಪ್ರಣಿತ್ ರಾಮಚಂದಾನಿ ಮಾತನಾಡಿ, ‘‘ಭಾರತೀಯ ಆಟಗಾರರಿಗೆ ಕೇವಲ ತರಬೇತಿ ಪಡೆಯುವ ಸ್ಥಳ ಒದಗಿಸುವುದಷ್ಟೇ ನಮ್ಮ ಗುರಿಯಲ್ಲ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕು, ಒತ್ತಡವನ್ನು ನಿಭಾಯಿಸುವುದನ್ನು ಕಲಿಯಬೇಕು ಮತ್ತು ಜಾಗತಿಕ ರಂಗದಲ್ಲಿ ತಮ್ಮ ಸ್ಥಾನ ಎಲ್ಲಿದೆ ಎಂಬುದನ್ನು ಕಂಡುಕೊಳ್ಳಲು ನಿರಂತರ ಅವಕಾಶಗಳು ಸಿಗಬೇಕು. ಸ್ನೂಕರ್ 900 ಕ್ವಾಲಿಫೈಯರ್ ಅಂತಹ ಒಂದು ಮಹತ್ವದ ವೇದಿಕೆಯಾಗಿದೆ. ನಜೀಬ್ ತಮ್ಮ ಶ್ರೇಷ್ಠ ಪ್ರದರ್ಶನದ ಬಲದಿಂದ ಈ ಅವಕಾಶವನ್ನು ಗಳಿಸಿಕೊಂಡಿದ್ದು, ಯುಕೆಯಲ್ಲಿ ಮುಂದಿನ ಹೆಜ್ಜೆ ಇಡಲು ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ.
ಭಾರತದಲ್ಲಿ ಅಗಾಧ ಪ್ರಮಾಣದ ಯುವ ಪ್ರತಿಭೆಗಳಿದ್ದಾರೆ, ಆದರೆ ಈ ಪ್ರತಿಭೆಗಳು ಬೆಳೆಯಲು ಸೂಕ್ತ ವೇದಿಕೆ ಮತ್ತು ಜಾಗತಿಕ ಮುಖಾಮುಖಿ ಅತ್ಯಗತ್ಯ. ಅಕಾಡೆಮಿಗಳು ಮತ್ತು ಸ್ಥಳೀಯ ದೇಶೀಯ ಸ್ಪರ್ಧೆಗಳಿಂದ ಅಂತಾರಾಷ್ಟ್ರೀಯ ಕೂಟಗಳವರೆಗೆ ಒಂದು ಭದ್ರ ಸೇತುವೆಯನ್ನು ನಿರ್ಮಿಸುವುದು ಮತ್ತು ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಭಾರತೀಯ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದೇ ನಮ್ಮ ಪ್ರಮುಖ ಧ್ಯೇಯವಾಗಿದೆ’’ಎಂದರು.
ಗೆಲುವಿನ ಕುರಿತು ಮಾತನಾಡಿದ ಶೇಖ್ ನಜೀಬ್ ಅಹ್ಮದ್ ಅವರು, ‘‘ನಾನು ಈ ಪಂದ್ಯಾವಳಿಯನ್ನು ಅತ್ಯಂತ ಸಂತಸದಿಂದ ಆಡಿದೆ. ಈ ವೇಗದ ಮಾದರಿಗೆ ತಕ್ಕಂತೆ ಹೊಂದಿಕೊಂಡು ಆಡುವುದು ನನಗೆ ಅದ್ಭುತ ಅನುಭವ ನೀಡಿತು. ಇಡೀ ಸ್ಪರ್ಧೆಯುದ್ದಕ್ಕೂ ಸೂಕ್ತ ಮಾರ್ಗದರ್ಶನ, ಗುಣಮಟ್ಟದ ತರಬೇತಿ ಮತ್ತು ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಕ್ಕಾಗಿ ಕೋಚ್ ಪ್ರಣಿತ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಯುಕೆ ಚಾಂಪಿಯನ್‌ಶಿಪ್‌ಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಲು ಅಕಾಡೆಮಿಯಲ್ಲಿ ಅವರೊಂದಿಗೆ ತರಬೇತಿ ಮುಂದುವರಿಸಲು ಉತ್ಸುಕನಾಗಿದ್ದೇನೆ.
ಪ್ಲುಟೋ ಟಿವಿಯಲ್ಲಿ ನೇರಪ್ರಸಾರವಾಗುವ ಪಂದ್ಯಗಳಲ್ಲಿ ಭಾಗವಹಿಸುವುದು ನನಗೆ ಸಂಪೂರ್ಣ ಹೊಸ ಅನುಭವ ತರಲಿದೆ. ಇದರೊಂದಿಗೆ, ನನ್ನ ಆರಾಧ್ಯ ದೈವ ರೋನಿ ಒ’ಸುಲ್ಲಿವನ್ ಅವರನ್ನು ಮುಖಾಮುಖಿ ಭೇಟಿಯಾಗುವ ಸಾಧ್ಯತೆ ಇರುವುದು ಈ ಸದವಕಾಶವನ್ನು ಮತ್ತಷ್ಟು ಅವಿಸ್ಮರಣೀಯವಾಗಿಸಿದೆ’’ ಎಂದು ಹರ್ಷ ವ್ಯಕ್ತಪಡಿಸಿದರು.
ಈ ವರ್ಷದ ಆರಂಭದಲ್ಲಿ ನಡೆದ ಚೊಚ್ಚಲ ಗ್ಲೋಬಲ್ ಸ್ನೂಕರ್ 900 ಚಾಂಪಿಯನ್‌ಶಿಪ್ ನಲ್ಲಿ ಖ್ಯಾತ ಆಟಗಾರ ರೋನಿ ಒ’ಸುಲ್ಲಿವನ್ ಪ್ರಶಸ್ತಿ ಗೆಲ್ಲುವ ಮೂಲಕ ಈ ಹೊಸ ಮಾದರಿಯು ವಿಶ್ವಾದ್ಯಂತ ವ್ಯಾಪಕ ಗಮನ ಸೆಳೆದಿತ್ತು. ಈಗ ನಡೆಯಲಿರುವ ಯುಕೆ ಪಂದ್ಯಾವಳಿಯು ಅದರ ಮುಂದುವರಿದ ಹಂತವಾಗಿದೆ.
ಈ ಕ್ವಾಲಿಫೈಯರ್ ಕೇವಲ ಒಂದು ಪಂದ್ಯಾವಳಿಗೆ ಸೀಮಿತವಾಗಿರದೆ, ಹೇಬಾಲ್ ಅಕಾಡೆಮಿಯ ವಿಸ್ತೃತ ಆಟಗಾರರ ಅಭಿವೃದ್ಧಿ ಯೋಜನೆಯ ಪ್ರಮುಖ ಭಾಗವಾಗಿದೆ. ಇದರಲ್ಲಿ ಕ್ರಿಸ್ ಹೆನ್ರಿ ಜತೆಗಿನ ಅಂತಾರಾಷ್ಟ್ರೀಯ ತರಬೇತಿ ಶಿಬಿರಗಳು, ವ್ಯವಸ್ಥಿತ ಅಕಾಡೆಮಿ ತರಬೇತಿ, ಮೀಸಲಾದ ಜೂನಿಯರ್ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಸರ್ಕ್ಯೂಟ್ ರೂಪಿಸುವ ಯೋಜನೆಗಳು ಒಳಗೊಂಡಿವೆ. ನಜೀಬ್ ಅವರು ಯುಕೆಯಲ್ಲಿ ಪ್ಲುಟೋ ಟಿವಿಯಲ್ಲಿ ಕಣಕ್ಕಿಳಿಯಲು ಸಿದ್ಧರಾಗಿರುವ ಬೆನ್ನಲ್ಲೇ, ಈ ಯೋಜನೆಯು ಭಾರತದ ಮುಂದಿನ ತಲೆಮಾರಿನ ಕ್ಯೂಸ್ಪೋರ್ಟ್ಸ್ ಪ್ರತಿಭೆಗಳಿಗಾಗಿ ಬಲಿಷ್ಠ ಹಾಗೂ ಸುಲಭವಾಗಿ ಕೈಗೆಟುಕುವಂತಹ ಸ್ಪರ್ಧಾತ್ಮಕ ಕ್ರೀಡಾ ವಾತಾವರಣವನ್ನು ರೂಪಿಸುವಲ್ಲಿ ಮೊದಲ ಮಹತ್ವದ ಮೈಲಿಗಲ್ಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net