ಸಾಕಷ್ಟು ವದಂತಿಗಳ ನಡುವೆಯೇ ಇನ್​​ಸ್ಟಾ ಬಯೋ ಅಪ್​ಡೇಟ್​ ಮಾಡಿ ಮಹತ್ವದ ಸುಳಿವು ಕೊಟ್ಟ ಸ್ಮೃತಿ-ಪಲಾಶ್! Smriti Mandhana ​

ಟೀಮ್​ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ
ಟೀಮ್​ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
  • ಮದುವೆ ನಡೆಯುತ್ತೋ? ಅಥವಾ ನಡೆಯುವುದಿಲ್ಲವೋ? ಎಂಬ ಅನುಮಾನ ಇನ್ನೂ ಜೀವಂತ
  • ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾದ ಸ್ಮೃತಿ ಮತ್ತು ಪಲಾಶ್​
  • ತಮ್ಮ ಇನ್​ಸ್ಟಾಗ್ರಾಂ ಬಯೋ ಅಪ್​ಡೇಟ್​ ಮಾಡಿ ಸುಳಿವು ಕೊಟ್ಟ ತಾರಾಜೋಡಿ
ಮುಂಬೈ: ಭಾರತದ ಮಹಿಳಾ ಕ್ರಿಕೆಟ್​ ತಂಡದ ಉಪನಾಯಕಿ ಹಾಗೂ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಮತ್ತು ಸಂಗೀತ ನಿರ್ದೇಶಕ ಹಾಗೂ ನಿರ್ಮಾಪಕ ಪಲಾಶ್ ಮುಚ್ಚಲ್ ಅವರ ವಿವಾಹವನ್ನು ಮುಂದೂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ನ. 23ರಂದು ಸ್ಮೃತಿ ಮತ್ತು ಪಲಾಶ್​ ವಿವಾಹ ನಡೆಯಬೇಕಿತ್ತು. ಆದರೆ, ಸ್ಮೃತಿ ತಂದೆ ಶ್ರೀನಿವಾಸ್​ ಮಂಧಾನ ಅವರಿಗೆ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿದೆ ಎಂದು ಘೋಷಿಸಲಾಯಿತು.
ಇಷ್ಟೇ ಆಗಿದ್ದರೆ ಯಾವುದೇ ಸಂದೇಹಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ತಂದೆ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಸ್ಮೃತಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಿಂದ ನಿಶ್ಚಿತಾರ್ಥ ಮತ್ತು ಕ್ರಿಕೆಟ್​ ಮೈದಾನದಲ್ಲಿ ಪಲಾಶ್​ ಪ್ರಪೋಸ್​ ಮಾಡಿದ ವಿಡಿಯೋಗಳು ಸೇರಿದಂತೆ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್​ ಮಾಡಿದರು. ಇದು ಸಾಲದು ಎಂಬಂತೆ ಸ್ಮೃತಿಯ ಸಹ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್​ ಮತ್ತು ಶ್ರೇಯಾಂಕ ಪಾಟೀಲ್​ ಕೂಡ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದರು. ಮತ್ತೊರ್ವ ಆಟಗಾರ್ತಿ ರಾಧಾ ಯಾದವ್​ ಅವರು ಪಲಾಶ್​ ಅವರನ್ನು ಅನ್​ಫಾಲೋ ಮಾಡಿದರು. ಈ ಎಲ್ಲ ನಡೆಗಳನ್ನು ನೋಡಿದಾಗ ಅನುಮಾನ ದಟ್ಟವಾಯಿತು. ವಿವಾಹವನ್ನು ಮುಂದೂಡಿರುವುದರ ಹಿಂದೆ ಏನೋ ಒಂದು ದೊಡ್ಡ ಸಮಸ್ಯೆ ಇದೆ ಎಂಬ ಊಹಾಪೋಹಕ್ಕೆ ಕಾರಣವಾಯಿತು.
ಸ್ಮೃತಿ ಆಗಲಿ ಅಥವಾ ಪಲಾಶ್​ ಆಗಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಇನ್ನಷ್ಟು ಗೊಂದಲವನ್ನು ಸೃಷ್ಟಿ ಮಾಡಿದೆ. ಇದರ ನಡುವೆ ಪಲಾಶ್​ ಅವರ ತಾಯಿ, ವದಂತಿಗಳೆಲ್ಲ ಸುಳ್ಳು, ಸ್ಮೃತಿ ತಂದೆಗೆ ಅನಾರೋಗ್ಯ ಕಾಡಿದಕ್ಕೆ ಮಾತ್ರ ಮದುವೆ ಮುಂದೂಡಲಾಗಿದೆ. ಮತ್ತೆ ವಿವಾಹ ಸಮಾರಂಭ ನಡೆಯಲಿದೆ ಎಂದಿದ್ದಾರೆ. ಆದರೆ, ಸ್ಮೃತಿ ಕುಟುಂಬದಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಹೀಗಾಗಿ ಅನುಮಾನ ಹಾಗೇ ಮುಂದುವರಿದಿದೆ. ಇದರ ನಡುವೆ ಸ್ಮೃತಿ ಮತ್ತು ಪಲಾಶ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.
ಹೌದು, ಸ್ಮೃತಿ ಮತ್ತು ಪಲಾಶ್​ ತಮ್ಮ ಇನ್​ಸ್ಟಾಗ್ರಾಂ ಬಯೋವನ್ನು ಅಪ್​ಡೇಟ್​ ಮಾಡಿದ್ದು, ಇಬ್ಬರು ನಜರ್​ ಎಮೊಟಿಕಾನ್​ ಅಥವಾ ದೃಷ್ಟಿ ಎಮೋಜಿಯನ್ನು ಹಾಕಿದ್ದಾರೆ. ಇಬ್ಬರು ಒಂದೇ ರೀತಿಯ ಎಮೋಜಿಯನ್ನು ಅಪ್​ಡೇಟ್​ ಮಾಡಿರುವುದರಿಂದ ಅವರಿಬ್ಬರ ನಡುವೆ ಏನೂ ಸಮಸ್ಯೆ ಇಲ್ಲ. ಇತ್ತೀಚೆಗೆ ಹರಿದಾಡಿದ್ದೆಲ್ಲ ಕೇವಲ ವದಂತಿಯಷ್ಟೇ ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದಾರೆ. ಬಹುಶಃ ಇಬ್ಬರು ಮಾತನಾಡಿಕೊಂಡೇ ಈ ಎಮೋಜಿಯನ್ನು ಹಾಕಿದ್ದಾರೆಂದು ಚರ್ಚಿಸುತ್ತಿದ್ದಾರೆ. ಆದರೆ, ಕೆಲವರು ಇದು ಕಾಕತಾಳಿಯ ಇರಬಹುದು. ಏನೂ ಇಲ್ಲದಿದ್ದರೆ ಇಬ್ಬರು ಏಕೆ ಮೌನವಾಗಿದ್ದಾರೆ? ಇಬ್ಬರಲ್ಲಿ ಯಾರಾದರೂ ಒಬ್ಬರು ವದಂತಿಗಳಿಗೆ ಸ್ಪಷ್ಟನೆ ನೀಡಬಹುದಿತ್ತು. ಕೇವಲ ಪಲಾಶ್​ ಕುಟುಂಬದವರು ಮಾತ್ರ ಹೇಳಿಕೆ ನೀಡುತ್ತಿದ್ದಾರೆ ಹೊರತು, ಸ್ಮೃತಿ ಕುಟುಂಬದಿಂದ ಯಾರೊಬ್ಬರು ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ. ಕೆಲವೊಂದು ನಡೆಗಳನ್ನು ನೋಡಿದರೆ ಎರಡೂ ಕುಟುಂಬದಲ್ಲಿ ಏನೂ ಸರಿಯಿಲ್ಲ ಎಂಬ ಸಂಶಯ ಇಂದಿಗೂ ಜೀವಂತವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಪಲಾಶ್​ ತಾಯಿ ಹೇಳಿದ್ದೇನು?

ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ವಿವಾಹದ ಬಗ್ಗೆ ಎದ್ದಿರುವ ಸಂಶಯವನ್ನು ಪಲಾಶ್​ ಅವರ ತಾಯಿ ಅಮಿತಾ ಮುಚ್ಚಲ್​ ತೆಗೆದುಹಾಕಿದ್ದಾರೆ. ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಅಮಿತಾ, ಸ್ಮೃತಿ ಮತ್ತು ಪಲಾಶ್​ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಮತ್ತು ಸ್ಮೃತಿಯನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಬ್ಬರ ವಿವಾಹ ಶೀಘ್ರದಲ್ಲೇ ನಡೆಯಲಿದೆ. ಸ್ಮೃತಿಯನ್ನು ತನ್ನ ಅರ್ಧಾಂಗಿಯಾಗಿ ಮನೆಗೆ ಕರೆತರುವ ಕನಸನ್ನು ಪಲಾಶ್​ ಕಂಡಿದ್ದರು. ಅಷ್ಟರಲ್ಲಿ ಅವರ ತಂದೆ ಅನಾರೋಗ್ಯಕ್ಕೀಡಾದರು. ಇದರಿಂದ ಎಲ್ಲವು ಬದಲಾಯಿತು. ಇದೀಗ ನಾವು ಸ್ಮೃತಿಯನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಲು ವ್ಯವಸ್ಥೆ ಮಾಡಿದ್ದೇವೆ. ಈಗ ಎಲ್ಲವೂ ಚೆನ್ನಾಗಿದೆ. ಅವರ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ಅಮಿತಾ ಅವರು ಹೇಳಿದ್ದಾರೆ. ಆದಾಗ್ಯೂ, ಸ್ಮೃತಿ ಮಂಧಾನ ಮತ್ತು ಅವರ ಕುಟುಂಬದಿಂದ ವಿವಾಹದ ಬಗ್ಗೆ ಇನ್ನೂ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ಅನುಮಾನ ಇನ್ನೂ ಜೀವಂತವಾಗಿಯೇ ಇದೆ.
ಅಂದಹಾಗೆ, ಸ್ಮೃತಿ ಅವರ ತಂದೆಯನ್ನು ಈಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಅವರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ, ಪಲಾಶ್ ಮುಚ್ಚಲ್ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವುದು ಕೂಡ ಚರ್ಚೆಯ ವಿಷಯವಾಗಿದೆ. ಆದಾಗ್ಯೂ, ಸರಣಿ ಸಂಗೀತ ಕಚೇರಿಗಳು ಮತ್ತು ಮದುವೆ ಕಾರ್ಯಗಳ ಒತ್ತಡದಿಂದಾಗಿ ಪಲಾಶ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ಅವರ ಆಪ್ತರು ಹೇಳಿದ್ದಾರೆ. ಚಿಕಿತ್ಸೆ ಪಡೆದು ಪಲಾಶ್​ ಕೂಡ ಬಿಡುಗಡೆಯಾಗಿದ್ದಾರೆ.
ಸ್ಮೃತಿ ಮತ್ತು ಪಲಾಶ್ ಕುಟುಂಬಗಳ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಅವರ ಮದುವೆ ರದ್ದಾಗಿದೆ ಎಂಬ ವದಂತಿಗಳು ಹರಡಿವೆ. ಅಲ್ಲದೆ, ಪಲಾಶ್​ಗೆ ಬೇರೊಂದು ಯುವತಿಯ ಜತೆ ಸಂಬಂಧ ಇದೆ ಅನ್ನೋ ವದಂತಿ ಕೂಡ ಹರಡಿದೆ. ಇದೆಲ್ಲದರ ನಡುವೆ ಪಲಾಶ್ ಅವರ ತಾಯಿ ಅಮಿತಾ ಮುಚ್ಚಲ್ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು. ಪಲಾಶ್ ಅವರು ಸ್ಮೃತಿಗಿಂತಲೂ ಅವರ ತಂದೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಹೃದಯಾಘಾತವಾಗಿದೆ ಎಂಬ ಸುದ್ದಿ ತಿಳಿದಾಗ ಸ್ಮೃತಿಗಿಂತ ಪಲಾಶ್​ ತುಂಬಾ ಅತ್ತರು. ಅಲ್ಲದೆ, ಮದುವೆ ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದೇ ಪಲಾಶ್​ ಎಂದು ಅಮಿತಾ ಅವರು ಹೇಳಿದರು. ಸದ್ಯ ಅಮಿತಾ ಅವರು ನೀಡಿರುವ ಹೇಳಿಕೆ ಪ್ರಕಾರ ಸ್ಮೃತಿ ಮತ್ತು ಪಲಾಶ್​ ಮದುವೆ ನಡಯಲಿದೆ. ಆದರೆ, ಯಾವಾಗ ಅನ್ನೋ ಪ್ರಶ್ನೆ ಮಾತ್ರ ಇನ್ನೂ ಜೀವಂತವಾಗಿಯೇ ಉಳಿಯಲಿದೆ. ಆ ಪ್ರಶ್ನೆಗೆ ಯಾವಾಗ ಉತ್ತರ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net