ಕರ್ನಾಟಕಕ್ಕೆ ತ್ರಿಪುರ ಶಾಕ್​; ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಮಯಾಂಕ್​ ಪಡೆ

ಕರ್ನಾಟಕಕ್ಕೆ ತ್ರಿಪುರ ಶಾಕ್​; ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಮಯಾಂಕ್​ ಪಡೆ
ಕರ್ನಾಟಕಕ್ಕೆ ತ್ರಿಪುರ ಶಾಕ್​; ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಮಯಾಂಕ್​ ಪಡೆ
Published on
ಅಹಮದಾಬಾದ್​: ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ (t20 cricket) ನಿರಾಶಾದಾಯಕ ನಿರ್ವಹಣೆ ಮುಂದುವರಿಸಿರುವ ಕರ್ನಾಟಕ ತಂಡ ತನ್ನ 7ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ತ್ರಿಪುರ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ. ತ್ರಿಪುರ ನಾಯಕ ಮುರಾ ಸಿಂಗ್​ (69 ರನ್​, 35 ಎಸೆತ, 2 ಬೌಂಡರಿ, 6 ಸಿಕ್ಸರ್​, 30ಕ್ಕೆ 2) ಆಲ್ರೌಂಡ್​ ನಿರ್ವಹಣೆ ಎದುರು ಮುಗ್ಗರಿಸಿದ ಕರ್ನಾಟಕ ತಂಡ ಸೂಪರ್​ ಓವರ್​ನಲ್ಲಿ ಪರಾಭವಗೊಂಡಿತು. ಈಗಾಗಲೆ ಸೂಪರ್​ ಲೀಗ್​ ಹಂತಕ್ಕೇರುವ ಆಸೆ ಕೈಚೆಲ್ಲಿದ್ದ ಮಯಾಂಕ್​ ಅಗರ್ವಾಲ್ (mayank agarwal)​ ಪಡೆ, ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು, 5 ಸೋಲಿನೊಂದಿಗೆ ಡಿ ಗುಂಪಿನ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ನಮೋ ಸ್ಟೇಡಿಯಂನ ಬಿ ಗ್ರೌಂಡ್​ನಲ್ಲಿ ಸೋಮವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಕರ್ನಾಟಕ, ಸಂಟಿತ ಆಟದೊಂದಿಗೆ 6 ವಿಕೆಟ್​ಗೆ 197 ರನ್​ ಕಲೆಹಾಕಿತು. ಪ್ರತಿಯಾಗಿ ತ್ರಿಪುರ ಉತ್ತಮ ಆರಂಭ ಕಂಡರೂ, ನಡುವೆ ಕುಸಿತ ಅನುಭವಿಸಿ 106 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿತು. ಆಗ ಮುರಾ ಸಿಂಗ್​ ಏಕಾಂಗಿ ಹೋರಾಟ ತೋರಿದರು. ಕೊನೇ ಎಸೆತದಲ್ಲಿ 2 ರನ್​ ಬೇಕಿದ್ದಾಗ ಅವರು, 2ನೇ ರನ್​ ಕಸಿಯುವ ಯತ್ನದಲ್ಲಿ ರನೌಟಾದರು. ಇದರಿಂದ ತ್ರಿಪುರ 8 ವಿಕೆಟ್​ಗೆ 197 ರನ್​ ಗಳಿಸಿ ಟೈ ಸಾಧಿಸಿತು. ನಂತರ ಸೂಪರ್​ ಓವರ್​ನಲ್ಲಿ ತ್ರಿಪುರ ವಿಕೆಟ್​ ನಷ್ಟವಿಲ್ಲದೆ 22 ರನ್​ ಗಳಿಸಿದರೆ, ಕರ್ನಾಟಕ 1 ವಿಕೆಟ್​ಗೆ 18 ರನ್​ ಗಳಿಸಲಷ್ಟೇ ಶಕ್ತಗೊಂಡಿತು.

ಕರ್ನಾಟಕ: 6 ವಿಕೆಟ್​ಗೆ 197 (ಬಿಆರ್​ ಶರತ್​ 44, ಮಯಾಂಕ್​ 29, ಪಡಿಕ್ಕಲ್​ 32, ಮ್ಯಾಕ್ನೀಲ್​ 34, ಅಭಿನವ್​ 8, ಸ್ಮರಣ್​ 24, ಮನ್ವಂತ್​ 10*, ಪ್ರವಿಣ್​ ದುಬೆ 10*, ಮುರಾ 30ಕ್ಕೆ 2, ಹೊಸೈನ್​ 35ಕ್ಕೆ 2), ತ್ರಿಪುರ: 8 ವಿಕೆಟ್​ಗೆ 197 (ವಿಹಾರಿ 36, ಶ್ರೀದಮ್​ 28, ತೇಜಸ್ವಿ ಜೈಸ್ವಾಲ್​ 11, ವಿಜಯ್​ ಶಂಕರ್​ 9, ಮುರಾ ಸಿಂಗ್​ 69, ಸರ್ಕಾರ್​ 14, ಸೌರಭ್​ ದಾಸ್​ 13*, ಪ್ರವಿಣ್​ ದುಬೆ 6ಕ್ಕೆ 2, ಶುಭಾಂಗ್​ 31ಕ್ಕೆ 2, ವಿದ್ಯಾಧರ್​ 54ಕ್ಕೆ 1). ಸೂಪರ್​ ಓವರ್​: ತ್ರಿಪುರ: 22/0; ಕರ್ನಾಟಕ: 18/1.
ಮಯಾಂಕ್​ ದಾಖಲೆ
ಮಯಾಂಕ್​ ಅಗರ್ವಾಲ್​(2,153) ಪಂದ್ಯದಲ್ಲಿ 29 ರನ್​ ಗಳಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಕರ್ನಾಟಕ ಪರ ಸರ್ವಾಧಿಕ ರನ್​ ಸ್ಕೋರರ್​ ಎನಿಸಿದರು. ಮನೀಷ್​ ಪಾಂಡೆ (2,125) ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಮುರಿದರು.
ಕರ್ನಾಟಕಕ್ಕೆ ಮುಂದಿನ ದೇಶೀಯ ಕ್ರಿಕೆಟ್​ ಟೂರ್ನಿ
*ವಿಜಯ್​ ಹಜಾರೆ ಟ್ರೋಫಿ ಏಕದಿನ
ಆರಂಭ: ಡಿಸೆಂಬರ್​ 24
ಮೊದಲ ಎದುರಾಳಿ: ಜಾರ್ಖಂಡ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net