ವಾರಿಯರ್ಸ್‌ ಎದುರು ಗರ್ಜಿಸಿದ ಟೈಗರ್ಸ್‌: ಅನೀಶ್ವರ್, ತಾಹ ಅರ್ಧಶತಕ

 ಅನೀಶ್ವರ್
ಅನೀಶ್ವರ್
Published on
ಮೈಸೂರು: ನಾಯಕ ಅನೀಶ್ವರ್ ಗೌತಮ್(60*ರನ್, 41ಎಸೆತ, 2ಬೌಂಡರಿ, 4ಸಿಕ್ಸರ್) ಹಾಗೂ ಮೊಹಮದ್ ತಾಹ (57 ರನ್, 38 ಎಸೆತ, 5 ಬೌಂಡರಿ, 3 ಸಿಕ್ಸರ್) ಭರ್ಜರಿ ಅರ್ಧಶತಕ ಜತೆಗೆ ಎಲ್.ಆರ್.ಕುಮಾರ್ (14ಕ್ಕೆ 3), ಹಾರ್ದಿಕ್ ರಾಜ್ (25ಕ್ಕೆ 3) ಸಹಿತ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ 5ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಜಯದ ಖಾತೆ ತೆರೆಯಿತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಸೋಮವಾರ ಮೊದಲ ಪಂದ್ಯದಲ್ಲಿ ವೈಶಾಖ್ ವಿಜಯಕುಮಾರ್ ನಾಯಕತ್ವದ ಮೈಸೂರು ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಮಾಜಿ ಚಾಂಪಿಯನ್ ವಾರಿಯರ್ಸ್‌ ತನ್ನ ತವರು ಚರಣದಲ್ಲಿ ಸತತ 2ನೇ ಸೋಲು ಅನುಭವಿಸಿತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಮೈಸೂರು ತಂಡಕ್ಕೆ ರಿತೇಶ್ ಭಟ್ಕಳ್(44) ಹಾಗೂ ಎಸ್.ಯು.ಕಾರ್ತಿಕ್(35) 2ನೇ ವಿಕೆಟ್‌ಗೆ 47 ಎಸೆತದಲ್ಲಿ 72 ಪೇರಿಸಿ ಚೇತರಿಕೆ ನೀಡಿದರೂ, ಬಳಿಕ ಬಂದ ಎಲ್ಲರೂ ವೈಲ್ಯ ಅನುಭವಿಸಿದರಿಂದ 19.2 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಹುಬ್ಬಳ್ಳಿ 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 162 ರನ್‌ಗಳಿಸಿ ವಿಜಯ ಸಾಧಿಸಿತು.
ಮೈಸೂರು ವಾರಿಯರ್ಸ್‌: 19.2 ಓವರ್‌ಗಳಲ್ಲಿ 161 (ಎಲ್.ಆರ್.ಚೇತನ್ 18, ಎಸ್.ಯು.ಕಾರ್ತಿಕ್ 35, ರಿತೇಶ್ 46, ಕಾರ್ತಿಕೇಯ 27, ಲಂಕೇಶ್ 16, ಎಲ್‌ಆರ್ ಕುಮಾರ್ 14ಕ್ಕೆ 3, ಹಾರ್ದಿಕ್ ರಾಜ್ 25ಕ್ಕೆ 3, ವಿಕಾಸ್ ಗೌಡ 38ಕ್ಕೆ 2, ಶಿಖರ್ 27ಕ್ಕೆ1, ಮನ್ವಂತ್ ಕುಮಾರ್ 46ಕ್ಕೆ1), ಹುಬ್ಬಳ್ಳಿ ಟೈಗರ್ಸ್‌: 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 162 (ತಾಹ 57, ಮಯಾಂಕ್ 18, ಅನೀಶ್ವರ್ 60*, ಅಭಿನವ್ 16*, ಮಾಧವ್ 27ಕ್ಕೆ2, ರಿತೇಶ್ 24ಕ್ಕೆ1), ಪಂದ್ಯಶೇಷ್ಠ: ಹಾರ್ದಿಕ್ ರಾಜ್.
ಗೆಲುವಿನ ದಡ ಸೇರಿಸಿದ ನಾಯಕ
ಸವಾಲಿನ ಮೊತ್ತದ ಚೇಸಿಂಗ್ ಆರಂಭಿಸಿದ ಹುಬ್ಬಳ್ಳಿ ಎರಡನೇ ಎಸೆತದಲ್ಲೇ ಪ್ರೀತೇಶ್ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಬಳಿಕ ತೆಗೂಡಿದ ಮೊಹಮದ್ ತಾಹ ಹಾಗೂ ಮಯಾಂಕ್ ಅಗರ್ವಾಲ್(18) 2ನೇ ವಿಕೆಟ್‌ಗೆ 26 ಎಸೆತದಲ್ಲಿ 49 ರನ್ ಪೇರಿಸಿ ಚೇತರಿಕೆ ನೀಡಿದರು. ಮಯಾಂಕ್ ನಿರ್ಗಮನದ ಬಳಿಕ ನಾಯಕ ಅನೀಶ್ವರ್ ಗೌತಮ್ - ತಾಹ 3ನೇ ವಿಕೆಟ್‌ಗೆ 44 ಎಸೆತಗಳಲ್ಲಿ 72 ರನ್ ಕಲೆಹಾಕಿ ಗೆಲುವಿನ ಹಾದಿ ಸುಲಭಗೊಳಿಸಿದರು.
ತಾಹ ನಿರ್ಗಮದ ಬಳಿಕ ಅನೀಶ್ವರ್ ಹಾಗೂ ಅಭಿನವ್ ಮನೋಹರ್(16*) 4ನೇ ವಿಕೆಟ್‌ಗೆ 35 ಎಸೆತದಲ್ಲಿ 41 ರನ್ ಪೇರಿಸಿ ಇನ್ನೂ 15 ಎಸೆತ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net