ಐಪಿಎಲ್​ ಆಡುವುದನ್ನು ನಿಲ್ಲಿಸಿ... ಟೀಮ್​ ಇಂಡಿಯಾ ಹೆಡ್​ ಕೋಚ್​ ಗೌತಮ್​ ಗಂಭೀರ್​ ಅಚ್ಚರಿ ಹೇಳಿಕೆ! Shubman Gill

ಟೀಮ್​ ಇಂಡಿಯಾ ನಾಯಕ ಶುಭಮಾನ್​ ಗಿಲ್​ ಮತ್ತು ಹೆಡ್​ ಕೋಚ್​ ಗೌತಮ್​ ಗಂಭೀರ್​
ಟೀಮ್​ ಇಂಡಿಯಾ ನಾಯಕ ಶುಭಮಾನ್​ ಗಿಲ್​ ಮತ್ತು ಹೆಡ್​ ಕೋಚ್​ ಗೌತಮ್​ ಗಂಭೀರ್​
Published on

ಪ್ರಮುಖ ಮುಖ್ಯಾಂಶಗಳು

  • ನಿರಂತರ ಪಂದ್ಯಗಳಿಂದ ಗಾಯಾಳುಗಳಾಗುತ್ತಿರುವ ಟೀಮ್​ ಇಂಡಿಯಾ​ ಆಟಗಾರರು
  • ಶ್ರೇಯಸ್​ ಅಯ್ಯರ್​ ಬೆನ್ನಲ್ಲೇ ಇದೀಗ ನಾಯಕ ಶುಭಮಾನ್​ ಗಿಲ್​ ಗಾಯಾಳು
  • ಟೀಮ್ ಇಂಡಿಯಾ ಆಟಗಾರರ ಕೆಲಸದ ಹೊರೆ ನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಪ್ರಾರಂಭ
  • ಆಟಗಾರರ ವಿಚಾರದಲ್ಲಿ ಗೌತಮ್ ಗಂಭೀರ್ ನಿಲುವು ಬಿಚ್ಚಿಟ್ಟ ಆಕಾಶ್​ ಚೋಪ್ರಾ
ನವದೆಹಲಿ: ಟೆಸ್ಟ್​ ಹಾಗೂ ಏಕದಿನ ತಂಡದ ನಾಯಕ ಶುಭಮಾನ್ ಗಿಲ್ ( Shubman Gill ), ಮೂರು ಸ್ವರೂಪಗಳಲ್ಲಿಯೂ ಟೀಮ್ ಇಂಡಿಯಾದ ಪ್ರಮುಖ ಆಟಗಾರ. ಟೆಸ್ಟ್ ನಾಯಕನಾಗಿ ಚೊಚ್ಚಲ ಪಂದ್ಯದಲ್ಲೇ ಇಂಗ್ಲೆಂಡ್ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿದ ಗಿಲ್​, ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಏಕದಿನ ತಂಡದ ನಾಯಕನಾಗಿಯೂ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮೊದಲು, ಏಷ್ಯಾ ಕಪ್-2025ರ ಸಮಯದಲ್ಲಿ ಭಾರತೀಯ ಟಿ20 ತಂಡಕ್ಕೂ ಮರಳಿದರು.
ಸರಣಿ ಪಂದ್ಯಗಳಲ್ಲಿ ಬಿಜಿಯಾಗಿರುವ ಶುಭಮಾನ್​ ಗಿಲ್​, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡರು. ಕುತ್ತಿಗೆ ನೋವಿನಿಂದಾಗಿ ಅವರು ಪಂದ್ಯವನ್ನು ಅರ್ಧದಲ್ಲೇ ತೊರೆದರು ಮತ್ತು ಮೈದಾನಕ್ಕೆ ಮರಳಲು ಸಾಧ್ಯವಾಗಲೇ ಇಲ್ಲ. ಐಸಿಯುನಲ್ಲಿ ಚಿಕಿತ್ಸೆ ಪಡೆದ ನಾಯಕ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ, ಗುವಾಹಟಿಯಲ್ಲಿ ಹರಿಣಗಳ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಗಿಲ್​ ಅವರು ಅಲಭ್ಯರಾಗಿದ್ದಾರೆ.
ನಿದ್ರೆಯ ಕೊರತೆ ಮತ್ತು ವಿಶ್ರಾಂತಿ ಇಲ್ಲದೆ ನಿರಂತರವಾಗಿ ಆಡುತ್ತಿರುವುದರಿಂದ ಗಿಲ್ ಅವರಿಗೆ ಕುತ್ತಿಗೆ ನೋವು ಉಲ್ಬಣಗೊಂಡಿದೆ ಎಂಬ ವರದಿಗಳಿವೆ. ಆದರೆ, ಬಿಸಿಸಿಐ ಅಂತಹ ಯಾವುದೇ ವಿಷಯವನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಇದೇ ಸಮಯದಲ್ಲಿ ವೇಗಿ ಜಸ್​ಪ್ರೀತ್​ ಬುಮ್ರಾ ಕೂಡ ತಮ್ಮ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳಲ್ಲಿ ಎರಡನ್ನು ಮಾತ್ರ ಆಡಿದರು. ಅಲ್ಲದೆ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳಿಗೆ ಬುಮ್ರಾ ಕೂಡ ಗೈರುಹಾಜರಾಗಲಿದ್ದಾರೆ ಎಂಬ ಮಾಹಿತಿ ಇದೆ. ಆಯ್ಕೆದಾರರು ಬುಮ್ರಾ ಜತೆಗೆ ಹಾರ್ದಿಕ್ ಪಾಂಡ್ಯಗೂ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರ ಕೆಲಸದ ಹೊರೆ ನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಪ್ರಾರಂಭವಾಗಿದೆ.
ಈ ವಿಷಯದ ಬಗ್ಗೆ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿಲುವು ಏನಿರಬಹುದು ಎಂಬ ಪ್ರಶ್ನೆಗಳು ಉದ್ಭವಿಸಿದಾಗ, ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಉತ್ತರ ನೀಡಿದರು. ಇತ್ತೀಚೆಗೆ ಗಂಭೀರ್ ಅವರೊಂದಿಗೆ ಇದೇ ವಿಷಯದ ಬಗ್ಗೆ ಆಕಾಶ್​ ಚೋಪ್ರಾ ಚರ್ಚಿಸಿದ್ದು, ಗಂಭೀರ್​ ಅವರು ತಮ್ಮ ಆಟಗಾರರಿಗೆ ಒಂದು ಪ್ರಮುಖ ಸಲಹೆಯನ್ನು ನೀಡಿರುವುದಾಗಿ ಬಹಿರಂಗಪಡಿಸಿದರು ಎಂದು ಆಕಾಶ್​ ಚೋಪ್ರಾ ಹೇಳಿದರು.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಸಮಯದಲ್ಲಿ, ನಾನು ಗೌತಮ್ ಗಂಭೀರ್​ ಅವರನ್ನು ಒಂದು ಪ್ರಶ್ನೆ ಕೇಳಿದೆ. ಆಟಗಾರರ ಕೆಲಸದ ಹೊರೆ ನಿರ್ವಹಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದೆ. ಅದಕ್ಕೆ ಅವರು, ಐಪಿಎಲ್ ಆಡದಿದ್ದರೂ ಪರವಾಗಿಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು ಅಂತ ಜಿಯೋಸ್ಟಾರ್‌ಗೆ ಆಕಾಶ್​ ಚೋಪ್ರಾ ತಿಳಿಸಿದರು.
ಐಪಿಎಲ್‌ನಲ್ಲಿ ನಾಯಕನಾಗಿ ನೀವು ಹೆಚ್ಚುವರಿ ಒತ್ತಡವನ್ನು ಎದುರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ, ನಾಯಕನಾಗುವುದಕ್ಕಿಂತ ಅದನ್ನು ಬಿಡುವುದೇ ಉತ್ತಮ. ನೀವು ಟೀಮ್ ಇಂಡಿಯಾ ಪರ ಆಡಲು ಬಯಸಿದರೆ ನೀವು ಫಿಟ್ ಆಗಿರಬೇಕು ಮತ್ತು ಮಾನಸಿಕವಾಗಿ ಸಿದ್ಧರಾಗಿರಬೇಕು. ಆ ರೀತಿ ಆಗಬೇಕೆಂದರೆ, ಐಪಿಎಲ್‌ನಂತಹ ಪಂದ್ಯಾವಳಿಗಳನ್ನು ಬಿಟ್ಟುಬಿಡುವುದು ಉತ್ತಮ ಎಂದು ಗಂಭೀರ್ ಹೇಳಿದರು ಎಂದು ಚೋಪ್ರಾ ತಿಳಿಸಿದರು.
ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾಗೆ ಪ್ರಮುಖವಾಗಿರುವ ಆಟಗಾರರು ಹೆಚ್ಚುವರಿ ಒತ್ತಡದಿಂದ ಮುಕ್ತರಾದರೆ, ಅವರು ಯಾವುದೇ ಸಮಸ್ಯೆಯಿಲ್ಲದೆ ಸತತ ಸರಣಿಗಳನ್ನು ಆಡಬಹುದು ಎಂದು ಆಕಾಶ್ ಚೋಪ್ರಾ ಕೂಡ ಇದೇ ಸಮಯದಲ್ಲಿ ಹೇಳಿದರು. ಅವರು ಮಾನಸಿಕವಾಗಿ ಬಲಿಷ್ಠರಾಗಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net