ರೋಹಿತ್ ಶರ್ಮ, ವಿರಾಟ್​ ಕೊಹ್ಲಿ ಹಾದಿ ಹಿಡಿದ ಗಿಲ್​! ಇಂಜುರಿ ಬಳಿಕ ಆಡಲಿರುವ ಟೂರ್ನಿ ಇದು

ಶುಭಮನ್ ಗಿಲ್​
ಶುಭಮನ್ ಗಿಲ್​
Published on

ಪ್ರಮುಖ ಮುಖ್ಯಾಂಶಗಳು

  • ದಿಗ್ಗಜ ಕ್ರಿಕೆಟಿಗರಾದ 'ರೋಕೊ' ಫಾಲೋ ಮಾಡಿದ ಗಿಲ್
  • ಇಂಜುರಿ ಬಳಿಕ ದೇಶಿಯ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜು
  • ನ್ಯೂಜಿಲೆಂಡ್​ ವಿರುದ್ಧ ಸರಣಿಗೂ ಮುನ್ನ ದೇಶಿಯ ಕ್ರಿಕೆಟ್​ಗೆ ರೆಡಿ
ನವದೆಹಲಿ: ಟೀಮ್ ಇಂಡಿಯಾದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್, ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಇಂಜುರಿಯಿಂದ ಹೊರಗುಳಿದರು. ಗಾಯದ ಸಮಸ್ಯೆಯಿಂದ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಅವರು ಆಡಲಿಲ್ಲ. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಬೇಕಿದ್ದ ಗಿಲ್​, ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಹಾದಿಯನ್ನು ಅನುಸರಿಸಿದ್ದಾರೆ. 
ಕಳೆದ ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಗಿಲ್​, ಕಳಪೆ ಫಾರ್ಮ್​ನಿಂದ ಹಲವರ ಟೀಕೆಗೆ ಗುರಿಯಾಗಿದ್ದರು. ಇದೇ ಕಾರಣಕ್ಕೋ ಏನೋ, ಅವರಿಗೆ 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಬಹುಮುಖ್ಯ ಹಾಗೂ ಸ್ಟಾರ್​ ಆಟಗಾರನನ್ನೇ ವಿಶ್ವಕಪ್ ತಂಡದಿಂದ ಬಿಸಿಸಿಐ ಕೈಬಿಟ್ಟಿದ್ದು, ಕ್ರಿಕೆಟ್​ ಪ್ರಿಯರ ಅಚ್ಚರಿ ಹಾಗೂ ಬೇಸರಕ್ಕೆ ಕಾರಣವಾಯಿತು. 
ಜನವರಿ 11ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ದೇಶಿಯ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂಜಾಬ್ ತಂಡದ ಪರ ಶುಭಮನ್ ಆಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಶುರುವಾಗಿರುವ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ತಮ್ಮ ತಮ್ಮ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಂತೆಯೇ, ಗಿಲ್ ಕೂಡ ಪಂಜಾಬ್ ಪರ ಮುಂದಿನ ಎರಡು ಪಂದ್ಯಗಳನ್ನಾಡಲು ಮೈದಾನದಲ್ಲಿ ತಯಾರಿ ನಡೆಸುತ್ತಿದ್ದಾರೆ. 
ಜ.3 ಸಿಕ್ಕಿಂ ವಿರುದ್ಧ ಮತ್ತು ಜ.6ರಂದು ಗೋವಾ ವಿರುದ್ಧ ಪಂದ್ಯಗಳಲ್ಲಿ ಗಿಲ್ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಬಹಿರಂಗಪಡಿಸಿವೆ. ಪ್ರಸ್ತುತ, ಮೊಹಾಲಿಯಲ್ಲಿರುವ ಶುಭಮನ್​, ಜನವರಿ 1ರಂದು ಜೈಪುರದಲ್ಲಿ ಪಂಜಾಬ್ ತಂಡವನ್ನು ಸೇರಲಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net