ಕ್ರಿಕೆಟ್​ಗೋಸ್ಕರ! ಟಿ20 ವಿಶ್ವಕಪ್​ ಫೈನಲ್​ ಇವರೇ ಗೆಲ್ಲಲಿ... ಶೋಯೆಬ್​ ಅಖ್ತರ್​ ನೀಡಿದ ಹೇಳಿಕೆ ವೈರಲ್​ | IND vs NZ Final

ಪಾಕ್​ ಮಾಜಿ ಆಟಗಾರ ಶೋಯೆಬ್ ಅಖ್ತರ್​
ಪಾಕ್​ ಮಾಜಿ ಆಟಗಾರ ಶೋಯೆಬ್ ಅಖ್ತರ್​
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಮಾ.08ರಂದು ಟಿ20 ವಿಶ್ವಕಪ್​ ಫೈನಲ್ ಪಂದ್ಯ
  • ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ಅಂತಿಮ ಹಣಾಹಣಿ
  • ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಚ್ಚರಿ ಹೇಳಿಕೆ
IND vs NZ Final: ಇದೇ ಭಾನುವಾರ (ಮಾ.08) ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು ಸಿದ್ಧವಾಗಿವೆ. ಈ ಕಾತರದ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದ್ದು, ಯಾರು 2026ರ ಟಿ20 ಚಾಂಪಿಯನ್ಸ್ ಆಗಿ ಹೊರಹೊಮ್ಮಲಿದ್ದಾರೆ ಎಂಬ ಕುತೂಹಲ ಸದ್ಯ ಕ್ರಿಕೆಟ್​ ಪ್ರಿಯರನ್ನು ಬೆಂಬಿಡದೆ ಕಾಡುತ್ತಿದೆ.
ಈ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿರುವ ಕಿವೀಸ್​ ಪಡೆ ಹಾಗೂ ಭಾರತ, ಯಾವ ರೀತಿ ಪೈಪೋಟಿ ನೀಡಬಹುದು ಎಂಬ ಚರ್ಚೆಗಳು ಜೋರಾಗಿವೆ. ಮತ್ತೊಂದೆಡೆ, 2007 ಮತ್ತು 2024ರಲ್ಲಿ ಟಿ20 ವಿಶ್ವಕಪ್​ ವಿಜೇತರಾಗಿರುವ ಟೀಮ್ ಇಂಡಿಯಾ, ನ್ಯೂಜಿಲೆಂಡ್​ ತಂಡವನ್ನು ಮಣಿಸಿ, ಮೂರನೇ ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಲಿ ಎಂದು ಭಾರತೀಯ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
2021ರಲ್ಲಿ ರನ್ನರ್​ಅಪ್ ಸ್ಥಾನ ಪಡೆದು ತೃಪ್ತಿ ಪಟ್ಟಿದ್ದ ಕಿವೀಸ್​ ಆಟಗಾರರು, ಈ ವರ್ಷ ತಮ್ಮ ಚೊಚ್ಚಲ ಟಿ20 ವಿಶ್ವಕಪ್​ ಟ್ರೋಫಿಗೆ ಮುತ್ತಿಡುವ ತವಕದಲ್ಲಿದೆ. ಕಳೆದ ಬಾರಿ ಮಾಡಿದ ಮಿಸ್ಟೇಕ್​ಗಳನ್ನು ಈ ವಿಶ್ವಕಪ್​ನಲ್ಲಿ ಮಾಡಬಾರದು ಎಂದು ಪಣತೊಟ್ಟಿದೆ. ಇನ್ನು ಅಹಮದಾಬಾದ್​ ಪಿಚ್​ನಲ್ಲಿ 200 ರನ್​ ಸುರಕ್ಷಿತ ಸ್ಕೋರ್ ಎನ್ನಲಾಗಿದ್ದು, ಯಾವ ತಂಡ ಮೊದಲು ಬ್ಯಾಟ್​ ಮಾಡುತ್ತೋ, ಆ ತಂಡವು 200 ಅಥವಾ ಅದಕ್ಕಿಂತ ಹೆಚ್ಚಿನ ರನ್​ ಕಲೆಹಾಕಿದರೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ.
ಈ ಬಗ್ಗೆ 'ಟ್ಯಾಪ್​ಮ್ಯಾಡ್​ ಶೋ ಗೇಮ್​ ಆನ್​ ಹೈ' ಎಂಬ ಕಾರ್ಯಕ್ರಮದಲ್ಲಿ ಕುಳಿತು ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್​, ಅಹಮದಾಬಾದ್​ ಪಿಚ್​ ಖಂಡಿತ ಸ್ಪಿನ್ನರ್​ಗಳಿಗೆ ವರವಾಗಲಿದೆ. ಈ ಮೈದಾನದಲ್ಲಿ 175 ಅಥವಾ 200 ರನ್​ ಗಳಿಸಿದರೆ ಮಾತ್ರ ಸೇಫ್​. ನನ್ನ ಪ್ರಕಾರ, 200 ರನ್ ಉತ್ತಮ. ನ್ಯೂಜಿಲೆಂಡ್​ ಏನಾದರೂ 200ರಿಂದ 225 ಸ್ಕೋರ್​ ದಾಖಲಿಸಿದರೆ, ಟೀಮ್ ಇಂಡಿಯಾ ಮೇಲೆ ಭಾರೀ ಒತ್ತಡ ಇರಲಿದೆ. ಇದಕ್ಕೆಲ್ಲ, ಭಾರತ ಮೊದಲೇ ಫುಲ್​ ತಯಾರಿ ಮಾಡಿಕೊಂಡಿದೆ ಎಂದರು.
ನ್ಯೂಜಿಲೆಂಡ್​ ಬೌಲಿಂಗ್​ ಅಟ್ಯಾಕ್​ ತುಂಬ ಬಲಿಷ್ಠವಾಗಿರುವಂತೆ ಕಾಣಿಸುತ್ತದೆ. ಹೆಚ್ಚಿನ ಜನಸಂಖ್ಯೆಯಿಂದ ಟೀಮ್ ಇಂಡಿಯಾ ಬಹುಶಃ ಒತ್ತಡಕ್ಕೆ ಸಿಲುಕಬಹುದು. ಭಾರತದಲ್ಲೇ ಒಂದು ಸರಣಿಯನ್ನು ನ್ಯೂಜಿಲೆಂಡ್ ಗೆದ್ದಿದೆ. ಅವರಿಗೆ ಸ್ಪಿನ್​ ಟ್ರ್ಯಾಕ್​ ಅನುಭವ ಚೆನ್ನಾಗಿದೆ. ಸ್ಯಾಟ್ನರ್​ ಪಡೆಗೆ ಆತ್ಮವಿಶ್ವಾಸ ತುಂಬಿದೆ. ಭಾರತ ಈಗಾಗಲೇ ಗೆದ್ದಿದೆ. ಆದರೆ, ಕ್ರಿಕೆಟ್​ಗೋಸ್ಕರ ನ್ಯೂಜಿಲೆಂಡ್​ ಈ ವಿಶ್ವಕಪ್​ ಗೆದ್ದು ಬರಲಿ ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net