ಯಾರ ಕಣ್ಣಿಗೂ ಬೀಳದೆ ಮನೆ ಸೇರಿದ ಶಿವಂ! ಪತ್ನಿ ಜೊತೆ ಸೇರಿ ಫ್ಯಾನ್ಸ್​ಗೆ ಚಳ್ಳೆ ಹಣ್ಣು ತಿನ್ನಿಸಿದ ದುಬೆ​

ಕ್ರಿಕೆಟಿಗ ಶಿವಂ ದುಬೆ ಮತ್ತು ಅವರ ಪತ್ನಿ ಅಜುಂಮ್​ (ಎಡ)
ಕ್ರಿಕೆಟಿಗ ಶಿವಂ ದುಬೆ ಮತ್ತು ಅವರ ಪತ್ನಿ ಅಜುಂಮ್​ (ಎಡ)
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್​ ವಿರುದ್ಧ ಟೀಮ್ ಇಂಡಿಯಾಗೆ 96 ರನ್​ಗಳ ಭರ್ಜರಿ ಗೆಲುವು
  • ಪಂದ್ಯ ಮುಗಿದ ಬೆನ್ನಲ್ಲೇ ಪತ್ನಿ ಜೊತೆ ಮನೆಗೆ ಹೋಗಲು ದುಬೆ ಪರದಾಟ
  • ಕಡೆಗೂ ಫ್ಯಾನ್ಸ್​ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಶಿವಂ ದುಬೆ
ಮುಂಬೈ: ಕೋಟ್ಯಂತರ ಭಾರತೀಯರ ಆಸೆಯನ್ನು ಕಡೆಗೂ ಈಡೇರಿಸಿದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ವಿರುದ್ಧ 96 ರನ್​ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟಿ20 ವಿಶ್ವಕಪ್​ ಟೂರ್ನಿಯ ವಿಜಯಶಾಲಿಯಾಗಿ ಹೊರಹೊಮ್ಮಿತು. ಈ ಮೂಲಕ ಸತತ ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಮತ್ತು ತವರಿನಲ್ಲಿ ಚುಟುಕು ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಕಿವೀಸ್​ ಬೌಲರ್​ಗಳಿಗೆ ಬೆವರಿಳಿಸಿದ ಟೀಮ್ ಇಂಡಿಯಾ ಬ್ಯಾಟರ್​ಗಳ ಪೈಕಿ ಶಿವಂ ದುಬೆ ಕೂಡ ಒಬ್ಬರು. ಟೀಮ್​ನ ಒಟ್ಟು ಮೊತ್ತವನ್ನು 250ರ ಗಡಿದಾಟಿಸಲು ದೊಡ್ಡ ಕೊಡುಗೆ ನೀಡಿದ್ದೇ ದುಬೆ ಸ್ಫೋಟಕ ಬ್ಯಾಟಿಂಗ್​.

ವಿಮಾನ ಬದಲು ಎಸಿ ಕೋಚ್ ರೈಲು

ಗುಜರಾತ್​ನ ಅಹಮದಾಬಾದ್​ನಲ್ಲಿ ಫೈನಲ್​ ಗೆದ್ದ ಬಳಿಕ ಪ್ರಶಸ್ತಿ ಮತ್ತು ಮೆಡಲ್​ಗಳನ್ನು ಸ್ವೀಕರಿಸಿದ ಶಿವಂ ದುಬೆ, ಪತ್ನಿ ಅಂಜುಮ್​ ಅವರೊಂದಿಗೆ ಗೆಲುವನ್ನು ಸಂಭ್ರಮಿಸಿದರು. ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡು, ತಮ್ಮ ಮನೆಗೆ ಹಿಂತಿರುಗಲು ಮುಂದಾದ ಆಲ್​ರೌಂಡರ್ ಆಟಗಾರನಿಗೆ ಮುಂಬೈಗೆ ಹೋಗಲು ಫ್ಲೈಟ್​ ಟಿಕೆಟ್​ಗಳು ಸಿಗಲಿಲ್ಲ. ಇದರಿಂದ ತಲೆಬಿಸಿ ಮಾಡಿಕೊಂಡ ದುಬೆ, ತನ್ನ ಪತ್ನಿ ಮತ್ತು ಅವರ ಸ್ನೇಹಿತೆಯನ್ನು ಕರೆದುಕೊಂಡು ಹೋಗಲು ತೀರ ಪರದಾಡಿದರು.   
ಮುಂಬೈಗೆ ಯಾವುದೇ ವಿಮಾನಗಳ ಟಿಕೆಟ್​ಗಳು ಆ ಸಮಯಕ್ಕೆ ಬುಕ್ಕಿಂಗ್​ಗೆ ಲಭ್ಯವಿರಲಿಲ್ಲ. ಇನ್ನೇನು ಮಾಡೋದು ಎಂದು ಚಿಂತಿಸಿದ ದುಬೆ, ಮೂರನೇ ಎಸಿ ಕೋಚ್​ ರೈಲು ಪ್ರಯಾಣವೇ ಬೆಸ್ಟ್ ಎಂದು ರೈಲಿನಲ್ಲೇ ಮುಂಬೈ ತಲುಪಿದ್ದಾರೆ. ಅಸಲಿಗೆ, ರೈಲ್ವೆ ಸ್ಟೇಷನ್​ಗೆ ಹೋದರೆ ಮತ್ತು ರೈಲಿನಲ್ಲಿ ಫ್ಯಾನ್ಸ್​ಗಳು ತುಂಬಿಕೊಂಡರೆ ಏನು ಮಾಡೋದು ಎಂಬ ತಲೆಬಿಸಿ ಕಾಡುತ್ತಿದ್ದಂತೆ, ತಲೆಗೆ ಕ್ಯಾಪ್​, ಮುಖಕ್ಕೆ ಮಾಸ್ಕ್ ಮತ್ತು ಕೈತುಂಬುವಂತ ಶರ್ಟ್​​ ಧರಿಸಿ, ರೈಲಿನಲ್ಲಿ ಕೊಟ್ಟ ಬೆಡ್​ಶೀಟ್​ಗಳನ್ನು ಮುಚ್ಚಿಕೊಂಡು ಯಾರಿಗೆ ಸುಳಿವು ಸಿಗದಂತೆ ಮನೆ ಸೇರಿರುವುದು ಹಾಸ್ಯಸ್ಪದ.

ಹೊರಡುವ 5 ನಿಮಿಷ ಮುಂಚೆ...

ಮಾ.09ರ ಬೆಳಗ್ಗೆ 5:10 ಗಂಟೆಗೆ ರೈಲು ಬಿಡುವ ಸಮಯ ನೋಡಿಕೊಂಡು, ಮೊದಲು ಪತ್ನಿ ಮತ್ತು ಅವರ ಸ್ನೇಹಿತೆಯನ್ನು ಕೋಚ್​ನೊಳಗೆ ಕೂರಲು ಹೇಳಿ, ತಾನು ಕಾರಿನಲ್ಲಿಯೇ ದುಬೆ ಕಾದು ಕುಳಿತಿದ್ದರು. ಕಾರಣ, ಎಲ್ಲಿ ಅಭಿಮಾನಿಗಳು ತನ್ನನ್ನು ಗಮನಿಸಿ, ಮುಗಿಬೀಳುತ್ತಾರೋ ಎಂದು, ರೈಲು ಹೊರಡುವ 5 ನಿಮಿಷ ಇರುವಂತೆ ಹೇಳು, ನಾನು ರೈಲು ಹತ್ತುವೆ ಎಂದು ಪತ್ನಿಗೆ ಶಿವಂ ತಿಳಿಸಿದ್ದಾಗಿ 'ಎನ್​ಡಿಟಿವಿ' ವರದಿ ಉಲ್ಲೇಖಿಸಿದೆ.

ಪ್ರಯಾಣದ ಮಧ್ಯೆ ಮತ್ತೊಂದು ಮಜಾ!

ಎಲ್ಲರ ಕಣ್ತಪ್ಪಿಸಿ ಬಂದು ಕುಳಿತಿದ್ದೀವಿ ಎಂದು ನಿಟ್ಟುಸಿರು ಬಿಟ್ಟು ದುಬೆ ದಂಪತಿಗೆ ಮತ್ತೊಂದು ಶಾಕ್​ ಎದುರಾಗಿದ್ದೇ ಟಿಕೆಟ್​ ಕಲೆಕ್ಟರ್​. ಬೋಗಿಯೊಳಗೆ ಪ್ರಯಾಣಿಸುತ್ತಿದ್ದವರ ಟಿಕೆಟ್​ ಚೆಕ್ ಮಾಡುತ್ತಿದ್ದ ಅಧಿಕಾರಿಯ ಆಗಮನ ಕಂಡು, ದುಬೆ ಕೂಡಲೇ ವಾಶ್​ರೂಮ್​ಗೆ ಹೋಗಿದ್ದಾರೆ. ಈ ವೇಳೆ, "ಶಿವಂ ದುಬೆ? ಟೀಮ್​ ಇಂಡಿಯಾ ಕ್ರಿಕೆಟಿಗನಾ?" ಎಂದು ಶಿವಂ ಪತ್ನಿ ಅಂಜುಮ್​ಗೆ ಕಲೆಕ್ಟರ್​ ಪ್ರಶ್ನಿಸಿದ್ದಾರೆ. ತಬ್ಬಿಬ್ಬಾದ ಅಂಜುಮ್​, "ಇಲ್ಲ, ಇಲ್ಲ. ಅವರು ಇಲ್ಲಿಗೆ ಏಕೆ ಬರ್ತಾರೆ ಎಂದೇಳುವ ಮೂಲಕ ಟಿಸಿಯಿಂದ ಬಚಾವ್ ಆಗಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net