ಐಪಿಎಲ್​ ಬೆನ್ನಲ್ಲೇ ನಡೆಯಲಿರುವ ಆಫ್ಘನ್​​ ವಿರುದ್ಧ ಸರಣಿಗೆ ನಾಳೆ ಭಾರತ ತಂಡ ಆಯ್ಕೆ

ಆಫ್ಘನ್​​ ವಿರುದ್ಧ ಸರಣಿಗೆ ನಾಳೆ ಭಾರತ ತಂಡ ಆಯ್ಕೆ
ಆಫ್ಘನ್​​ ವಿರುದ್ಧ ಸರಣಿಗೆ ನಾಳೆ ಭಾರತ ತಂಡ ಆಯ್ಕೆ
Published on
ಗುವಾಹಟಿ: ಐಪಿಎಲ್​ ಬೆನ್ನಲ್ಲೇ ನಡೆಯಲಿರುವ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ (Afghanistan series) ಏಕೈಕ ಟೆಸ್ಟ್​ ಮತ್ತು 3 ಪಂದ್ಯಗಳ ಏಕದಿನ ಸರಣಿಗೆ ಮಂಗಳವಾರ ಗುವಾಹಟಿಯಲ್ಲಿ ಭಾರತ ತಂಡದ ಆಯ್ಕೆ ನಡೆಯಲಿದೆ. ವೇಗಿ ಜಸ್​ಪ್ರೀತ್​ ಬುಮ್ರಾ ಮೇಲಿನ ಕಾರ್ಯದೊತ್ತಡ ಮತ್ತು ಮಾಜಿ ನಾಯಕ ರೋಹಿತ್​ ಶರ್ಮ ಅವರ ಮ್ಯಾಚ್​ ಫಿಟ್ನೆಸ್​ ಬಗ್ಗೆ ಅಜಿತ್​ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಮೇ 31ರಂದು ಅಹಮದಾಬಾದ್​ನಲ್ಲಿ ಐಪಿಎಲ್​ ಫೈನಲ್​ ನಡೆದರೆ, ಜೂನ್​ 6ರಂದು ಮುಲ್ಲನ್​ಪುರದಲ್ಲಿ ಏಕೈಕ ಟೆಸ್ಟ್​ ಶುರುವಾಗಲಿದೆ. ಅಂದರೆ ಐಪಿಎಲ್​ ಮುಗಿದು ಒಂದು ವಾರಕ್ಕೂ ಕಡಿಮೆ ಸಮಯದಲ್ಲಿ ಟೆಸ್ಟ್​ ಆರಂಭವಾಗಲಿದೆ. ಬಳಿಕ ಜೂನ್​ 14, 17 ಮತ್ತು 20ರಂದು ಕ್ರಮವಾಗಿ ಧರ್ಮಶಾಲಾ, ಲಖನೌ ಮತ್ತು ಚೆನ್ನೈನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ. ಹೀಗಾಗಿ ಬುಮ್ರಾ ಎರಡೂ ಸರಣಿಯಲ್ಲಿ ಆಡುವ ಸಾಧ್ಯತೆ ಇಲ್ಲ. ಅಲ್ಲದೆ 50 ಓವರ್​ಗಳ ವಿಶ್ವಕಪ್​ಗೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯ ಬಾಕಿ ಇರುವುದರಿಂದ, ಏಕದಿನ ತಂಡದಲ್ಲಿ ಅವರು ಸದ್ಯಕ್ಕೆ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ.

ಮತ್ತೊಂದೆಡೆ 39 ವರ್ಷದ ರೋಹಿತ್​ ಶರ್ಮ ಐಪಿಎಲ್​ ವೇಳೆ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲಿದ್ದು, 3 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ನಂತರವೂ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟಿಂಗ್​ಗೆ ಮಾತ್ರ ಮರಳಿದ್ದಾರೆ. ಹೀಗಾಗಿ ಏಕದಿನ ಕ್ರಿಕೆಟ್​ನಲ್ಲಿ 100 ಓವರ್​ಗಳ ಆಡಲು ಅವರು ಸಂಪೂರ್ಣ ಫಿಟ್​ ಆಗಿರುವರೇ ಎಂದು ಆಯ್ಕೆಗಾರರು ಪರಿಶೀಲಿಸಲಿದ್ದಾರೆ.

ಇದೇ ವೇಳೆ 37 ವರ್ಷದ ವಿರಾಟ್​ ಕೊಹ್ಲಿ ಸದ್ಯ ಏಕ ಮಾದರಿಯ ಕ್ರಿಕೆಟಿಗ ಆಗಿದ್ದರೂ, ಅವರ ಫಿಟ್ನೆಸ್​ ಬಗ್ಗೆ ಯಾವುದೇ ಅನುಮಾನವಿಲ್ಲ. ಹೀಗಾಗಿ ಆಫ್ಘನ್​​ ವಿರುದ್ಧದ ಎಲ್ಲ 3 ಏಕದಿನಗಳಿಗೂ ಅವರು ಆಡುವ ನಿರೀಕ್ಷೆ ಇದೆ. ಇನ್ನು ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನಗಳಿವೆ.
ನಬಿ, ಪ್ರಿನ್ಸ್​ಗೆ ಚಾನ್ಸ್​?
ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ 60 ವಿಕೆಟ್​ ಕಬಳಿಸಿದ್ದಲ್ಲದೆ, ಜಮ್ಮು&ಕಾಶ್ಮೀರದ ಐತಿಹಾಸಿಕ ರಣಜಿ ಟ್ರೋಫಿ ಗೆಲುವಿಗೂ ನೆರವಾಗಿದ್ದ ವೇಗಿ ಅಕಿಬ್​ ನಬಿ ಆಫ್ಘನ್​​ ವಿರುದ್ಧ ಟೆಸ್ಟ್​ನಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಜತೆಗೆ ಐಪಿಎಲ್​ನಲ್ಲಿ ಲಖನೌ ಪರ ತನ್ನ ವೇಗ ಮತ್ತು ನಿಖರತೆಯಿಂದ ಗಮನಸೆಳೆದಿರುವ ಯುವ ವೇಗಿ ಪ್ರಿನ್ಸ್​ ಯಾದವ್​ ಏಕದಿನ ಸರಣಿಯಲ್ಲಿ ಅವಕಾಶ ಪಡೆಯುವ ನಿರೀಕ್ಷೆ ಇದೆ.
ಪಡಿಕ್ಕಲ್​ ಹೊಸ ನಂ. 3?
ಭಾರತ ತಂಡದ ಬ್ಯಾಟರ್​ಗಳು ಇತ್ತೀಚೆಗೆ ತವರಿನ ಟೆಸ್ಟ್​ ಸರಣಿಗಳಲ್ಲಿ ಸ್ಪಿನ್​ ಬೌಲಿಂಗ್​ ಎದುರು ಪರದಾಡಿದ್ದಾರೆ. ಕಳೆದ ನವೆಂಬರ್​ನಲ್ಲಿ ದ. ಆಫ್ರಿಕಾ ಎದುರು ಕಂಡ ಸರಣಿ ಸೋಲು ಇದಕ್ಕೆ ತಾಜಾ ಉದಾಹರಣೆ. ಅಲ್ಲದೆ ಚೇತೇಶ್ವರ ಪೂಜಾರ ನಿರ್ಗಮನದ ಬಳಿಕ ಭಾರತ ಟೆಸ್ಟ್​ ತಂಡದ 3ನೇ ಕ್ರಮಾಂಕದಲ್ಲಿ ಯಾರೂ ಸ್ಥಿರ ನಿರ್ವಹಣೆ ತೋರಿಲ್ಲ. ಸಾಯಿ ಸುದರ್ಶನ್​ ಇತ್ತೀಚೆಗೆ ಈ ಸ್ಥಾನದಲ್ಲಿ ಹಲವು ಅವಕಾಶ ಪಡೆದರೂ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಈ ಬಾರಿ ಕನ್ನಡಿಗ ದೇವದತ್​ ಪಡಿಕ್ಕಲ್​ಗೆ ಈ ಸ್ಥಾನ ಒಲಿಯುವ ನಿರೀಕ್ಷೆ ಇದೆ. ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಉತ್ತಮ ನಿರ್ವಹಣೆ ತೋರಿರುವುದು ಕೂಡ ಅವರಿಗೆ ಬಲ ತುಂಬಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net