ಧೋನಿ, ಸುರೇಶ್​ ರೈನಾ... ಜಿಟಿ ಎದುರು 11 ರನ್ ಬಾರಿಸಿದರೂ ದಾಖಲೆ ಬರೆದ ಸಂಜು ಸ್ಯಾಮ್ಸನ್! | Sanju Samson

ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್
Published on

ಪ್ರಮುಖ ಮುಖ್ಯಾಂಶಗಳು

  • ಜಿಟಿ ವಿರುದ್ಧದ ಪಂದ್ಯದಲ್ಲಿ ಕೇವಲ 11 ರನ್​ಗೆ ಔಟ್​
  • 11 ರನ್​ ಗಳಿಸಿದ್ರೂ ಐಪಿಎಲ್​ನಲ್ಲಿ ಅಪರೂಪದ ದಾಖಲೆ
  • 5000 ರನ್​ ಪೂರೈಸಿದ ಅತಿ ವೇಗದ ಬ್ಯಾಟರ್​ ಸಂಜು
Sanju Samson: ಇಂದು (ಏ.26) ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಸಿಎಸ್​ಕೆ ಎಂದಿನಂತೆ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ. ಗುಜರಾತ್​ ಟೈಟನ್ಸ್ ವಿರುದ್ಧ ಉತ್ತಮ ಆಲ್​ರೌಂಡ್​ ಪ್ರದರ್ಶನ ತೋರುವಲ್ಲಿ ಸಿಎಸ್​ಕೆ ಮತ್ತೊಮ್ಮೆ ಮುಗ್ಗರಿಸಿದೆ.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್​, ಚೆನ್ನೈ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ಬ್ಯಾಟಿಂಗ್​ಗಿಳಿದ ಚೆನ್ನೈ ಸೂಪರ್ ಕಿಂಗ್ಸ್​ ಎಂದಿನಂತೆ ಆರಂಭಿಕ ಹಂತದಲ್ಲೇ ವಿಕೆಟ್​ ಕಳೆದುಕೊಳ್ಳುವ ಚಾಳಿಯನ್ನು ಮುಂದುವರಿಸಿತು. ಪವರ್​ಪ್ಲೇ ಹಂತದಲ್ಲೇ 4 ವಿಕೆಟ್​ ಕಳೆದುಕೊಂಡ ಸಿಎಸ್​ಕೆ, 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 158 ರನ್​ ಕಲೆಹಾಕಲಷ್ಟೇ ಶಕ್ತವಾಯಿತು. 
ಈ ಸಾಧಾರಣ ಗುರಿಯನ್ನು ಬೆನ್ನತ್ತಿರುವ ಜಿಟಿಗೆ ಗೆಲುವು ಸನ್ನಿಹಿತವಾಗಿದೆ. ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್, ಇಂದಿನ ಮ್ಯಾಚ್​ನಲ್ಲಿ ಅಂತಹದ್ದೇ ಅದ್ಭುತ ಪ್ರದರ್ಶನ ತೋರಲಿದ್ದಾರೆ ಎಂದೇ ಕ್ರಿಕೆಟ್​ ಪ್ರಿಯರು ನಿರೀಕ್ಷಿಸಿದ್ದರು. ಆದರೆ, ಸಿಎಸ್​ಕೆ ಬ್ಯಾಟರ್​ನಿಂದ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಬಂದಿತು. ಕೇವಲ 11 ರನ್​ಗೆ ಔಟ್​ ಆದ ಸ್ಯಾಮ್ಸನ್​, ಐಪಿಎಲ್​ನಲ್ಲಿ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿರುವುದು ಸದ್ಯ ಕ್ರಿಕೆಟ್​ ಪ್ರಿಯರ ಹುಬ್ಬೇರಿಸಿದೆ. 
11 ರನ್​ ಗಳಿಸುವ ಮೂಲಕ ತಮ್ಮ ಐಪಿಎಲ್ ಕರಿಯರ್​ನಲ್ಲಿ ಸ್ಯಾಮ್ಸನ್​, 5000 ರನ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಸಾಧನೆ ಮಾಡಿದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕೇವಲ 3555 ಎಸೆತಗಳಲ್ಲಿ ಈ ದಾಖಲೆಯಲ್ಲಿ ತಮ್ಮ ಹೆಸರನ್ನು ಸೇರಿಸುವ ಮೂಲಕ, ಸಂಜು ಸ್ಯಾಮ್ಸನ್ ಐಪಿಎಲ್ ಇತಿಹಾಸದಲ್ಲಿ 5000 ರನ್‌ಗಳನ್ನು ಪೂರ್ಣಗೊಳಿಸಿದ ಅತ್ಯಂತ ವೇಗದ ಭಾರತೀಯ ಆಟಗಾರರಾಗಿ ಮಿಂಚಿದ್ದಾರೆ. 
ಈ ಮೂಲಕ ಐಪಿಎಲ್ ಸ್ಟಾರ್​ ಬ್ಯಾಟರ್​ಗಳಾದ ಸುರೇಶ್ ರೈನಾ (3620 ಎಸೆತ), ಕೆ.ಎಲ್. ರಾಹುಲ್ (3688 ಎಸೆತ) ಮತ್ತು ಎಂ.ಎಸ್. ಧೋನಿ (3691 ಎಸೆತ) ಅವರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಒಟ್ಟಾರೆಯಾಗಿ, ಎಬಿ ಡಿವಿಲಿಯರ್ಸ್ (3288 ಎಸೆತ) ಮತ್ತು ಡೇವಿಡ್ ವಾರ್ನರ್ (3554 ಎಸೆತ) ಬಳಿಕ ಈ ಸಾಧನೆಗೈದ ವೇಗದ ಆಟಗಾರರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ,(ಏಜೆನ್ಸೀಸ್). 
.    
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net