ವಾಂಖೆಡೆಯಲ್ಲಿ ಆರ್​ಸಿಬಿ ಬ್ಯಾಟರ್‌ಗಳ ಅಬ್ಬರ; ಸಾಲ್ಟ್-ಕೊಹ್ಲಿ ಬಿರುಗಾಳಿಗೆ ಮುಂಬೈ ಇಂಡಿಯನ್ಸ್ ಧೂಳೀಪಟ! | RCBvsMI

RCBvsMI
RCBvsMI
Published on
RCBvsMI: ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟರ್‌ಗಳು ರನ್ ಮಳೆ ಹರಿಸಿದ್ದು, ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ. ಈ ಮೂಲಕ ಮುಂಬೈ ಅಂಗಳದಲ್ಲಿ ಐಪಿಎಲ್ ಇತಿಹಾಸದ ದಾಖಲೆಯ ಮೊತ್ತವನ್ನು ದಾಖಲಿಸಿದೆ.

ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಸಿಡಿಲಬ್ಬರದ ಆರಂಭ

ಪಂದ್ಯದ ಆರಂಭದಿಂದಲೇ ಆರ್​ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 10.5 ಓವರ್‌ಗಳಲ್ಲಿ ಈ ಜೋಡಿ 120 ರನ್‌ಗಳ ಅಮೋಘ ಜೊತೆಯಾಟವಾಡಿತು. ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ 78 ರನ್ ಚಚ್ಚುವ ಮೂಲಕ ಮುಂಬೈ ಬೌಲಿಂಗ್ ಪಡೆಯ ಲಯ ತಪ್ಪಿಸಿದರು. ಅವರಿಗೆ ಸಾಥ್ ನೀಡಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 50 ರನ್ ಗಳಿಸಿ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿಕೊಟ್ಟರು.

ವಿಶ್ವದಾಖಲೆ ಬರೆದ ಕಿಂಗ್ ಕೊಹ್ಲಿ

ಇಂದಿನ ಇನ್ನಿಂಗ್ಸ್ ಹಾದಿಯಲ್ಲಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸಿದರು. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ನೀಡಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಇದುವರೆಗೆ 47 ಬಾರಿ ಇಂತಹ ಜೊತೆಯಾಟದಲ್ಲಿ ಭಾಗಿಯಾಗಿರುವ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಬಾಬರ್ ಅಜಮ್ ಅವರ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ರಜತ್ ಪಟಿದಾರ್ ಮತ್ತು ಟಿಮ್ ಡೇವಿಡ್ ಫಿನಿಶಿಂಗ್

ಆರಂಭಿಕರು ನಿರ್ಗಮಿಸಿದ ಬಳಿಕ ಕ್ರೀಸ್‌ಗೆ ಬಂದ ರಜತ್ ಪಟಿದಾರ್ ಅಕ್ಷರಶಃ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದರು. ಕೇವಲ 20 ಎಸೆತಗಳಲ್ಲಿ 53 ರನ್ ಸಿಡಿಸಿದ ಪಟಿದಾರ್, ಮುಂಬೈ ಇಂಡಿಯನ್ಸ್ ಆಟಗಾರರನ್ನು ಕಂಗೆಡಿಸಿದರು. ಇನಿಂಗ್ಸ್‌ನ ಅಂತಿಮ ಹಂತದಲ್ಲಿ ಟಿಮ್ ಡೇವಿಡ್ ಕೂಡ ಅಬ್ಬರಿಸಿದರು. 16 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದ ಡೇವಿಡ್, ತಂಡದ ಮೊತ್ತವನ್ನು 240ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net