ಟಿ20 ವಿಶ್ವಕಪ್: ಭಾರತ-ವಿಂಡೀಸ್​ 'ಕ್ವಾರ್ಟರ್​ಫೈನಲ್​'ನಲ್ಲಿ ರನ್​ಮಳೆ ನಿರೀಕ್ಷೆ; ವರುಣನ ಭೀತಿ ಇಲ್ಲ

ಟಿ20 ವಿಶ್ವಕಪ್: ಭಾರತ-ವಿಂಡೀಸ್​ 'ಕ್ವಾರ್ಟರ್​ಫೈನಲ್​'ನಲ್ಲಿ ರನ್​ಮಳೆ ನಿರೀಕ್ಷೆ; ವರುಣನ ಭೀತಿ ಇಲ್ಲ
ಟಿ20 ವಿಶ್ವಕಪ್: ಭಾರತ-ವಿಂಡೀಸ್​ 'ಕ್ವಾರ್ಟರ್​ಫೈನಲ್​'ನಲ್ಲಿ ರನ್​ಮಳೆ ನಿರೀಕ್ಷೆ; ವರುಣನ ಭೀತಿ ಇಲ್ಲ
Published on
ಕೋಲ್ಕತ: ಆತಿಥೇಯ ಹಾಗೂ ಹಾಲಿ ಚಾಂಪಿಯನ್​ ಭಾರತ ತಂಡಕ್ಕೆ ಟಿ20 ವಿಶ್ವಕಪ್ (T20 World Cup)​ ಸೆಮಿಫೈನಲ್​ ಪ್ರವೇಶಿಸುವ ನಿಟ್ಟಿನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಸೂಪರ್​-8 ಹಂತದ 3ನೇ ಹಾಗೂ ಕೊನೇ ಪಂದ್ಯ ನಿರ್ಣಾಯಕವೆನಿಸಿದೆ. ಈಡನ್​ ಗಾರ್ಡನ್ಸ್​ನಲ್ಲಿ ಭಾನುವಾರ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ರನ್​ಮಳೆ ಹರಿಯುವ ನಿರೀಕ್ಷೆ ಇದೆ. ಸ್ಕಾಟ್ಲೆಂಡ್​ ತಂಡ ಇಟಲಿ ವಿರುದ್ಧ ಹಾಲಿ ಟೂರ್ನಿಯ ಮೊದಲ 200 ಪ್ಲಸ್​ ಮೊತ್ತ ಕಲೆಹಾಕಿದ ಪಿಚ್​ನಲ್ಲೇ ಈ ಪಂದ್ಯ ನಿಗದಿಯಾಗಿದೆ.
ಆತಿಥೇಯ ಬಂಗಾಳ ಕ್ರಿಕೆಟ್​ ಸಂಸ್ಥೆಯ ಅಧ್ಯಕ್ಷ ಸೌರವ್​ ಗಂಗೂಲಿ ಶುಕ್ರವಾರ ಪಿಚ್​ ಸಿದ್ಧತೆ ಪರಿಶೀಲಿಸಿ ಸ್ಥಳಿಯ ಕ್ಯುರೇಟರ್​ ಸುಜನ್​ ಮುಖರ್ಜಿ ಮತ್ತು ಬಿಸಿಸಿಐ ಕ್ಯುರೇಟರ್​ ಆಶಿಶ್​ ಬೌಮಿಕ್​ ಜತೆ ಚರ್ಚಿಸಿದರು. ಸ್ಪಿನ್ನರ್​ಗಳಿಗೂ ಪಿಚ್​ನಿಂದ ನೆರವು ಲಭಿಸುವ ನಿರೀಕ್ಷೆ ಇದೆ. ಆದರೆ, ಪಂದ್ಯಕ್ಕೆ ಇಬ್ಬನಿ ಸಮಸ್ಯೆಯೂ ಕಾಡುವ ಸಾಧ್ಯತೆ ಇದೆ ಎಂದು ಸುಜನ್​ ಮುಖರ್ಜಿ ತಿಳಿಸಿದ್ದಾರೆ.

ಭಾರತಕ್ಕೆ ಈಡನ್​ನಲ್ಲಿ ಇದು ಟೂರ್ನಿಯ ಮೊದಲ ಪಂದ್ಯ ಆಗಿದ್ದರೆ, ವಿಂಡೀಸ್​ ತಂಡ ಇಲ್ಲಿ ಈಗಾಗಲೆ ಸ್ಕಾಟ್ಲೆಂಡ್​, ಇಟಲಿ ವಿರುದ್ಧ 2 ಪಂದ್ಯ ಆಡಿದ್ದು, 2ಲ್ಲೂ ಗೆದ್ದಿತ್ತು.
ಪಂದ್ಯಕ್ಕೆ ಮಳೆ ಭೀತಿ ಇಲ್ಲ
ವಿಂಡೀಸ್​ ವಿರುದ್ಧದ ಕ್ವಾರ್ಟರ್​ಫೈನಲ್​ ಮಾದರಿಯ ಕಾದಾಟದಲ್ಲಿ ಗೆದ್ದರೆ ಭಾರತ ಸತತ 3ನೇ ಬಾರಿ ಉಪಾಂತ್ಯಕ್ಕೇರಬಹುದಾಗಿದೆ. ಆದರೆ ಈ ಪಂದ್ಯ ಮಳೆಯಿಂದ ರದ್ದುಗೊಂಡರೆ ಭಾರತಕ್ಕೆ ಸೆಮೀಸ್​ ಟಿಕೆಟ್​ ಕೈತಪ್ಪಲಿರುವುದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಗ್ರೂಪ್​-1ರಲ್ಲಿ ಉಭಯ ತಂಡಗಳು ತಲಾ 2 ಅಂಕ ಹೊಂದಿದ್ದು, ರನ್​ರೇಟ್​ ಲೆಕ್ಕಾಚಾರದಲ್ಲಿ ವೆಸ್ಟ್​ ಇಂಡೀಸ್​ (+1.791) ತಂಡ ಭಾರತಕ್ಕಿಂತ (-0.100) ಮುಂದಿದೆ. ಇದರಿಂದ ಪಂದ್ಯ ರದ್ದಾದರೆ ವಿಂಡೀಸ್​ ತಂಡವೇ ಉಪಾಂತ್ಯಕ್ಕೇರಲಿದೆ. ಆದರೆ ಕೋಲ್ಕತದ ಹವಾಮಾನ ಇಲಾಖೆ ವರದಿಯ ಪ್ರಕಾರ, ಭಾನುವಾರ ಮಳೆ ಸುರಿಯುವ ಎಳ್ಳಷ್ಟು ಸಾಧ್ಯತೆಯೂ ಇಲ್ಲ. ಅದರಲ್ಲೂ ಸಂಜೆ 6ರಿಂದ ರಾತ್ರಿ 11ರವರೆಗೆ ಮಳೆ ಸಾಧ್ಯತೆಯೇ ಇಲ್ಲ ಎಂದು ಹವಾಮಾನ ವರದಿ ಸ್ಪಷ್ಟಪಡಿಸಿದೆ. ಇದರಿಂದ ಭಾರತ ಉಪಾಂತ್ಯಕ್ಕೇರಲು ವಿಂಡೀಸ್​ ವಿರುದ್ಧ ಗೆಲುವಿನತ್ತ ಮಾತ್ರ ಗಮನಹರಿಸಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net