ನಾನಿರುವ ವಿಮಾನ​ ಈಗಲೇ ಕೆಳಗಿಳಿಯುವುದು... ವೇದಿಕೆಯಲ್ಲಿ​ ನಿವೃತ್ತಿ ಕುರಿತು ರೋಹಿತ್ ಮುಕ್ತ ಮಾತು | Rohit Sharma

ರೋಹಿತ್ ಶರ್ಮ
ರೋಹಿತ್ ಶರ್ಮ
Published on

ಪ್ರಮುಖ ಮುಖ್ಯಾಂಶಗಳು

  • 2023ರ ವಿಶ್ವಕಪ್​ ಸೋಲಿನ ಬಗ್ಗೆ ರೋಹಿತ್ ಮನದಾಳ
  • ನಿವೃತ್ತಿ ಕುರಿತು ಪದೇ ಪದೇ ಕೇಳುವ ಪ್ರಶ್ನೆಗೆ ಹಿಟ್​ಮ್ಯಾನ್​ ಉತ್ತರ
  • ವಿಮಾನ ಪ್ರಯಾಣ ಉದಾಹರಣೆ ಮೂಲಕ ಖಡಕ್ ಪ್ರತಿಕ್ರಿಯೆ
ಮುಂಬೈ: ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್​, ಮಾಜಿ ನಾಯಕ ರೋಹಿತ್ ಶರ್ಮ ಮೈದಾನದಲ್ಲಿ ಇರಲಿ ಅಥವಾ ಹೊರಗೇ ಇರಲಿ, ಅವರಿದ್ದ ಸ್ಥಳದಲ್ಲಿ ಸಡಗರದ ವಾತಾವರಣ ಇರುವುದು ಪಕ್ಕಾ. ಕಾರಣ, ತಮ್ಮೊಂದಿಗೆ ಇರುವವರನ್ನು ನಗೆಗಡಲಲ್ಲಿ ತೇಲಿಸುವ ಗುಣ ಅವರದ್ದು. ತಮ್ಮ ನಾಯಕತ್ವದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರೋಹಿತ್, ಹಲವು ಪ್ರತಿಷ್ಠಿತ ಟೂರ್ನಿಯಲ್ಲಿ ಟೀಮ್​ ಇಂಡಿಯಾಗೆ ಗೆಲವು ತಂದುಕೊಟ್ಟಿದ್ದಾರೆ.
ಆ ಕೀರ್ತಿ ರೋಹಿತ್ ಶರ್ಮಾ ಅವರಿಗೆ ಎಂದೆಂದಿಗೂ ವಿಶೇಷವಾಗಿ ಸಲ್ಲುತ್ತದೆ. ಗೆಲವು-ಸೋಲುಗಳನ್ನು ಬದಿಗಿಟ್ಟು ಒಬ್ಬ ವ್ಯಕ್ತಿಯಾಗಿ ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡುವ ರೋಹಿತ್ ಶರ್ಮ, ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಕ್ರಿಕೆಟ್​ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಈ ವೇಳೆ ಹಿಂದಿನ ಘಟನೆಗಳನ್ನು ನೆನೆದು ಕೊಂಚ ಭಾವುಕರಾದರು.
ಮಾಸ್ಟರ್ಸ್ ಯೂನಿಯನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಹಿತ್, ಅಂದು ಅಹಮದಾಬಾದ್​ನಲ್ಲಿ (2023) ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನಮ್ಮ ತಂಡ ಸೋಲುಂಡಿತು. ಆ ಸೋಲಿನಿಂದ ನನಗೆ ಭಾರೀ ದುಃಖ ಕಾಡಿತು. ಇನ್ಮುಂದೆ ಕ್ರಿಕೆಟ್ ಆಡುವುದೇ ಬೇಡವೆನಿಸಿತು. ಕ್ರಿಕೆಟ್​ ಲೋಕಕ್ಕೆ ಗುಡ್​ಬೈ ಹೇಳಿಬಿಡೋಣ ಎಂದು ನಿರ್ಧರಿಸಿದ್ದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ.
"ವಿಶ್ವಕಪ್ ಫೈನಲ್ ಸೋಲಿನ ನಂತರದ ಕ್ಷಣಗಳನ್ನು ಯಾರೂಬ್ಬರೂ ಅರ್ಥಮಾಡಿಕೊಳ್ಳುವುದಿಲ್ಲ. ಆ ಸೋಲಿನ ಬಳಿಕ ಎಲ್ಲರೂ ಅಕ್ಷರಶಃ ಬೇಸರಗೊಂಡಿದ್ದರು. ವೈಯಕ್ತಿಕವಾಗಿ, ಇದು ನನಗೆ ಅತ್ಯಂತ ಕಷ್ಟಕರ ಸಮಯವಾಗಿತ್ತು. 2022ರಲ್ಲಿ ನಾನು ತಂಡದ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ವಿಶ್ವಕಪ್‌ ಗೆಲುವಿಗಾಗಿ ಶ್ರಮಿಸುತ್ತಿದ್ದೇನೆ. ಅಂದು ವಿಶ್ವಕಪ್​ ಸೋಲು ನನ್ನನ್ನು ಕ್ರೀಡಾ ವೃತ್ತಿಗೆ ವಿದಾಯ ಹೇಳಬೇಕೆಂದು ದೂಡಿತು. ಆ ಹತಾಶೆ, ಬೇಸರದಿಂದ ಹೊರಬರಲು ಬಹಳ ಸಮಯವೇ ಹಿಡಿಯಿತು ಎಂದರು.

ನಿವೃತ್ತಿ ಬಗ್ಗೆಯೂ ಮಾತು

"ನನ್ನ ಜೀವನದಲ್ಲಿ ಆರಂಭ ಬಹಳ ಕಷ್ಟಕರವಾಗಿತ್ತು. ಆದರೆ, ಒಮ್ಮೆ ಆ ವೇಗವನ್ನು ಪಡೆದುಕೊಂಡ ಬಳಿಕ ಸುಲಭ ಎನಿಸಿತು. ವಿಮಾನದಲ್ಲಿ ಕುಳಿತಾಗ, ಅದು ಎತ್ತರಕ್ಕೆ ಹಾರಿದಾಗ ಅಷ್ಟು ಬೇಗ ಕೆಳಗಿಳಿಯುವುದು ಬೇಡ ಎನಿಸುತ್ತದೆ. ಫ್ಲೈಟ್​ ಸುಮಾರು 35,000ರಿಂದ 40,000 ಎತ್ತರವನ್ನು ತಲುಪಿದಾಗ, ಅದೇನೋ ಸಂತಸ ಮತ್ತು ನಿರಾಳತೆ ಲಭಿಸುತ್ತದೆ. ಇಲ್ಲಿ ಲ್ಯಾಂಡಿಂಗ್ ಕೂಡ ಮುಖ್ಯ. ಆದರೆ, ನೀವು ಯಾವಾಗ ಇಳಿಯಲು ಬಯಸುತ್ತೀರಿ ಎಂಬುದರ ಮೇಲೆ ಎಲ್ಲ ನಿಂತಿದೆ. ಪ್ರಸ್ತುತ, ನಾನಿನ್ನು ಮೇಲೇ ಇರಲು ಬಯಸುವೆ ಎಂದು ವಿಮಾನದ ಉದಾಹರಣೆ ನೀಡಿ, ನಿವೃತ್ತಿ ಘೋಷಿಸುವುದಿಲ್ಲ ಎಂಬ ಸಂದೇಶವನ್ನು ರೋಹಿತ್ ರವಾನಿಸಿದ್ದಾರೆ.
ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಟೀಮ್ ಇಂಡಿಯಾದ ಹಿಟ್​ಮ್ಯಾನ್​, ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಮನ್​ ಗಿಲ್​ ನೇತೃತ್ವದಲ್ಲಿ ರೋಹಿತ್ ಉಪನಾಯಕನಾಗಿ ಆಡಿದರು. 2027ರ ಏಕದಿನ ವಿಶ್ವಕಪ್ ಬಳಿಕ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಎಲ್ಲ ಸಾಧ್ಯತೆಗಳಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net