ಧರ್ಮಶಾಲಾದಲ್ಲಿ ಇಂದು ಭಾರತ-ಅಫ್ಘಾನಿಸ್ತಾನ ಮೊದಲ ಏಕದಿನ ಕಾದಾಟ

ಧರ್ಮಶಾಲಾದಲ್ಲಿ ಇಂದು ಭಾರತ-ಅಫ್ಘಾನಿಸ್ತಾನ ಮೊದಲ ಏಕದಿನ ಕಾದಾಟ
ಧರ್ಮಶಾಲಾದಲ್ಲಿ ಇಂದು ಭಾರತ-ಅಫ್ಘಾನಿಸ್ತಾನ ಮೊದಲ ಏಕದಿನ ಕಾದಾಟ
Published on
ಧರ್ಮಶಾಲಾ: ಐಪಿಎಲ್​ ಬೆನ್ನಲ್ಲೇ ನಡೆದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಮೂರೇ ದಿನಗಳಲ್ಲಿ ಗೆಲುವು ದಾಖಲಿಸಿ ಬೀಗಿರುವ ಭಾರತ ತಂಡ (Team India), ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿ (ODI Cricket) ಆಡಲು ಸಜ್ಜಾಗಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಶನಿವಾರ ಧರ್ಮಶಾಲಾದ ಎಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿದ್ದು, ಶುಭಮಾನ್​ ಗಿಲ್​ ಪಡೆ ಶುಭಾರಂಭ ಕಾಣುವ ನಿರೀಕ್ಷೆ ಇದೆ. ನಾಲ್ವರು ಪ್ರಮುಖ ಆಟಗಾರರಾದ ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​ ಮತ್ತು ಹಾರ್ದಿಕ್​ ಪಾಂಡ್ಯ ಗೈರಿನ ನಡುವೆ ಭಾರತ ಮುಂದಿನ ವರ್ಷದ ಏಕದಿನ ವಿಶ್ವಕಪ್​ಗೆ ಸಿದ್ಧತೆಯನ್ನು ಆರಂಭಿಸಲಿದೆ. 

ಸತತ 2 ಟಿ20 ವಿಶ್ವಕಪ್​ ಗೆದ್ದಿರುವ ನಡುವೆ ಕಳೆದ 2 ವರ್ಷಗಳಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡದ ನಿರ್ವಹಣೆ ಬಲಿಷ್ಠವಾಗಿಲ್ಲ. ಕೊನೇ 5 ಏಕದಿನ ಪಂದ್ಯಗಳಲ್ಲಿ ಭಾರತ 3ರಲ್ಲಿ ಸೋತಿದೆ. ಇದರಲ್ಲಿ ನ್ಯೂಜಿಲೆಂಡ್​ ವಿರುದ್ಧ ತವರಿನಲ್ಲಿ ಕಂಡ ಸರಣಿ ಸೋಲು ಕೂಡ ಸೇರಿದೆ. ಹೀಗಾಗಿ ವಿಶ್ವಕಪ್​ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಕೋಚ್​ ಗೌತಮ್​ ಗಂಭೀರ್​ ಈ ಸರಣಿಯಿಂದಲೇ ಯೋಜನೆ ರೂಪಿಸುವ ನಿರೀಕ್ಷೆ ಇದೆ. ಭಾರತ ವಿಶ್ವಕಪ್​ ತನಕ 25 ಏಕದಿನ ಪಂದ್ಯಗಳನ್ನು ಆಡಲಿದ್ದು, ಹಲವು ಕಾಂಬಿನೇಷನ್​ ಪರೀಸಬಹುದು ಮತ್ತು ಕೆಲ ಹೊಸ ಆಟಗಾರರು ಅವಕಾಶ ಪಡೆಯಬಹುದು. 

2023ರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಸನಿಹ ಬಂದಿದ್ದ ಅಫ್ಘಾನಿಸ್ತಾನ ಆಡಿದ ಕೊನೇ 4 ಏಕದಿನ ಪಂದ್ಯದಲ್ಲೂ ಗೆದ್ದ ದಾಖಲೆ ಹೊಂದಿದ್ದು, ಲುವಾಗಿ ಪರಿಗಣಿಸಲಾಗದು. ಟೆಸ್ಟ್​ನಂತೆ ಏಕದಿನದಲ್ಲಿ ಅಫ್ಘಾನಿಸ್ತಾನ ಸುಲಭ ತುತ್ತಾಗುವ ನಿರೀಕ್ಷೆ ಇಲ್ಲ.  
*ಟೀಮ್​ ನ್ಯೂಸ್​: 
ಭಾರತ: ವಿರಾಟ್​ ಕೊಹ್ಲಿ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿರುವುದರಿಂದ, ಇಶಾನ್​ ಕಿಶನ್​ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆಯುವ ನಿರೀಕ್ಷೆ ಇದೆ. ನಾಯಕ ಶುಭಮಾನ್​ ಗಿಲ್​ ಜತೆ ಮಾಜಿ ನಾಯಕ ರೋಹಿತ್​ ಶರ್ಮ ಇನಿಂಗ್ಸ್​ ಆರಂಭಿಸಲಿದ್ದಾರೆ. ವೇಗದ ಬೌಲಿಂಗ್​ ಆಲ್ರೌಂಡರ್​ ಸ್ಥಾನವನ್ನು ನಿತೀಶ್​ ಕುಮಾರ್​ ರೆಡ್ಡಿ ಮತ್ತು ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ಸ್ಥಾನವನ್ನು ವಾಷಿಂಗ್ಟನ್​ ಸುಂದರ್​ ತುಂಬಲಿದ್ದಾರೆ. ಸಿರಾಜ್​ ಬದಲಿಗೆ ತಂಡ ಸೇರಿರುವ ಕನ್ನಡಿಗ ಪ್ರಸಿದ್ಧಕೃಷ್ಣ, ಅರ್ಷದೀಪ್​ ಜತೆ ಹೊಸ ಚೆಂಡು ಹಂಚಿಕೊಳ್ಳಲಿದ್ದಾರೆ. 3ನೇ ವೇಗದ ಬೌಲರ್​ ಸ್ಥಾನಕ್ಕೆ ಪ್ರಿನ್ಸ್​ ಯಾದವ್​-ಗುರುನೂರ್​ ಬ್ರಾರ್​ ನಡುವೆ ಸ್ಪರ್ಧೆ ಇದ್ದು, ಯಾರೇ ಆಡಿದರೂ ಪದಾರ್ಪಣೆಯ ಪಂದ್ಯವಾಗಲಿದೆ.
ಅಫ್ಘಾನಿಸ್ತಾನ: ಕಳೆದ ಏಕೈಕ ಟೆಸ್ಟ್​ನಲ್ಲಿ ಮಿಂಚಿದ್ದ ವೇಗಿ ಮೊಹಮದ್​ ಸಲೀಮ್​ ಇದೀಗ ಏಕದಿನ ತಂಡದಲ್ಲೂ ಗಮನಸೆಳೆಯುವ ಹಂಬಲದಲ್ಲಿದ್ದಾರೆ. ಅನುಭವಿ ಆಲ್ರೌಂಡರ್​ ಮೊಹಮದ್​ ನಬಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಮೊದಲ ಏಕದಿನದಲ್ಲಿ ಆಡುವುದು ಅನುಮಾನವೆನಿಸಿದೆ. ಏಕೈಕ ಟೆಸ್ಟ್​ನಿಂದ ವಿಶ್ರಾಂತಿ ಪಡೆದಿದ್ದ ಅನುಭವಿ ಸ್ಪಿನ್ನರ್​ ರಶೀದ್​ ಖಾನ್​ ಏಕದಿನ ಸರಣಿಯಲ್ಲಿ ಬಲ ತುಂಬಲಿದ್ದಾರೆ.
ರೋಹಿತ್​, ರೆಡ್ಡಿ ಮೇಲೆ ಗಮನ
ಭಾರತ ಈ ಸರಣಿಯಲ್ಲಿ ಅನುಭವಿ ಬ್ಯಾಟರ್​ ರೋಹಿತ್​ ಶರ್ಮ ಮತ್ತು ಯುವ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಮೇಲೆ ಹೆಚ್ಚಿನ ಗಮನಹರಿಸಲಿದೆ. 39 ವರ್ಷದ ರೋಹಿತ್​ ಇತ್ತೀಚೆಗೆ ಸತತವಾಗಿ ಫಿಟ್ನೆಸ್​ ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ವರ್ಷದ ವಿಶ್ವಕಪ್​ವರೆಗೆ ತಂಡದಲ್ಲಿ ಮುಂದುವರಿಯುವರೇ ಎಂದು ನಿರ್ಧರಿಸಲು ಈ ಸರಣಿ ಸಹಾಯಕವಾಗಬಹುದು. ಇನ್ನು ಹಾರ್ದಿಕ್​ ಗೈರಿನಲ್ಲಿ ಸ್ಥಾನ ಪಡೆದಿರುವ ನಿತೀಶ್​, ತಂಡಕ್ಕೆ ಮುಂದಿನ ವೇಗದ ಬೌಲಿಂಗ್​ ಆಲ್ರೌಂಡರ್​ ಆಗಿ ಬಲ ತುಂಬಬಲ್ಲರೇ ಎಂಬ ಸತ್ವಪರೀಕ್ಷೆಯೂ ನಡೆಯಲಿದೆ. 
ಮುಖಾಮುಖಿ: 4
ಭಾರತ: 3
ಅಫ್ಘಾನಿಸ್ತಾನ: 0
ಟೈ: 1
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​
1: ಭಾರತ-ಅಫ್ಘಾನಿಸ್ತಾನ ನಡುವಿನ ಮೊಟ್ಟಮೊದಲ ದ್ವಿಪಯ ಏಕದಿನ ಸರಣಿ ಇದಾಗಿದೆ. ಉಭಯ ತಂಡಗಳು ಈ ಹಿಂದೆ ವಿಶ್ವಕಪ್​, ಏಷ್ಯಾಕಪ್​ಗಳಲ್ಲಿ ಮಾತ್ರ ಏಕದಿನ ಪಂದ್ಯದಲ್ಲಿ ಮುಖಾಮುಖಿ ಆಗಿವೆ. 
*3: ಶ್ರೇಯಸ್​ ಅಯ್ಯರ್​ 23 ರನ್​ ಮತ್ತು ಶುಭಮಾನ್​ ಗಿಲ್​ 47 ರನ್​ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 3 ಸಾವಿರ ರನ್​ ಪೂರೈಸಲಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net