ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಭಾನು'ವಾರ್​'!

ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಭಾನು'ವಾರ್​'!
ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಭಾನು'ವಾರ್​'!
Published on

ಪ್ರಮುಖ ಮುಖ್ಯಾಂಶಗಳು

  • ಮುಂದುವರಿಯಲಿದೆ ನೋ ಹ್ಯಾಂಡ್​ಶೇಕ್​ ಪಾಲಿಸಿ
  • ಭಾನುವಾರ ರಾತ್ರಿ 8 ಗಂಟೆಯಿಂದ ಮುಖಾಮುಖಿ
  • ಪಾಕ್​ ಬೌಲರ್​ಗಳಿಗೆ ವೈಭವ್​ ಸೂರ್ಯವಂಶಿ ಸವಾಲು
ದೋಹಾ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20 ಟೂರ್ನಿಯಲ್ಲಿ (Rising Stars Asia Cup T20 cricket) ಭಾನುವಾರ ಮುಖಾಮುಖಿ ಆಗಲಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಮತ್ತು ಸಿಕ್ಸರ್​ ಸುರಿಮಳೆ ಹರಿಸಿ ಬೀಗಿರುವ 14 ವರ್ಷದ ಬ್ಯಾಟರ್​ ವೈಭವ್​ ಸೂರ್ಯವಂಶಿ ಪಾಕಿಸ್ತಾನ ಶಹೀನ್ಸ್​ ತಂಡದ ಬೌಲರ್​ಗಳನ್ನು ಹೇಗೆ ಎದುರಿಸುವರು ಎಂಬುದು ಪಂದ್ಯದ ಪ್ರಮುಖ ಕುತೂಹಲವಾಗಿದೆ.

ಜಿತೇಶ್​ ಶರ್ಮ ಸಾರಥ್ಯದ ಭಾರತ ಎ ತಂಡ ಈ ಬಾರಿಯೂ ಪಾಕ್​ ಎದುರು "ನೋ ಹ್ಯಾಂಡ್​ಶೇಕ್​' ಪಾಲಿಸಿಯನ್ನು ಮುಂದುವರಿಸಲಿದೆ. ಕಳೆದ ಏಷ್ಯಾಕಪ್​ ಮತ್ತು ಮಹಿಳಾ ವಿಶ್ವಕಪ್​ನಲ್ಲೂ ಭಾರತ ಟಾಸ್​ ಮತ್ತು ಪಂದ್ಯದ ನಂತರ ಹಸ್ತಲಾಘವ ನೀಡಿರಲಿಲ್ಲ.

ಭಾರತ ತಂಡ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ 148 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರೆ, ಪಾಕ್​ ತಂಡ ಓಮನ್​ ವಿರುದ್ಧ ಜಯ ದಾಖಲಿಸಿ ಶುಭಾರಂಭ ಕಂಡಿತ್ತು. ಭಾರತ ಎ ತಂಡ ಐಪಿಎಲ್​ ತಾರೆಯರನ್ನು ಒಳಗೊಂಡಿದ್ದರೆ, ಪಾಕ್​ ಶಹೀನ್ಸ್​ ತಂಡ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಮಿಂಚಿದವರಿಂದ ತುಂಬಿದೆ.

ಪಾಕ್​ ಬೌಲಿಂಗ್​ ವಿಭಾಗ ಬಲಿಷ್ಠವೆನಿಸಿದ್ದು, ರಾಷ್ಟ್ರೀಯ ತಂಡದ ವೇಗಿ ನಸೀಮ್​ ಷಾ ಅವರ ಕಿರಿಯ ಸಹೋದರ ಉಬೇದ್​ ಷಾರನ್ನು ಒಳಗೊಂಡಿದೆ. ಪ್ರಿಯಾಂಶ್​ ಆರ್ಯ, ನೇಹಲ್​ ವಧೇರ, ನಮನ್​ ಧೀರ್​ರಂಥ ಐಪಿಎಲ್​ ತಾರೆಯರಿರುವ ಭಾರತ ಎ ತಂಡಕ್ಕೆ ಕನ್ನಡಿಗ ಸುನೀಲ್​ ಜೋಶಿ ಕೋಚ್​ ಆಗಿದ್ದಾರೆ.

ಆರಂಭ: ರಾತ್ರಿ 8.00
ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ಟೆನ್​ 3,4.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net