ಸೌತ್ ಆಫ್ರಿಕಾ ಕ್ಯಾಪ್ಟನ್ ಬವುಮಾಗೆ ಕುಳ್ಳ ಎಂದಿದ್ದ ಬುಮ್ರಾ
ಅಂದು ಪ್ರತಿಕ್ರಿಯಿಸದ ಬವುಮಾ ಇಂದು ಇಬ್ಬರ ಹೆಸರು ಉಲ್ಲೇಖ
ನವದೆಹಲಿ: ಇತ್ತೀಚೆಗಷ್ಟೇ ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ, ಏಕದಿನ ಸರಣಿ ಮತ್ತು ಟಿ20 ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿತು. ಇದೆಲ್ಲವೂ ಮುಗಿದು ಹೋಗಿರುವ ಸಮಯದಲ್ಲಿ ಅಂದು ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಆಡಿದ ಮಾತುಗಳಿಂದ ತಮಗಾದ ಬೇಸರದ ಬಗ್ಗೆ ಇದೀಗ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಟೆಂಬಾ ಬವುಮಾ ಮೌನ ಮುರಿದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬವುಮಾ ವಿರುದ್ಧ ಎಲ್ಬಿಡಬ್ಲ್ಯೂ ಅಪೀಲ್ ಮಾಡಲು ಮುಂದಾದ ವೇಳೆ ಟೀಕೆ ವ್ಯಕ್ತವಾಯಿತು. ಬವುಮಾ ಔಟ್ ಕುರಿತು ಡಿಆರ್ಎಸ್ ತೆಗೆದುಕೊಳ್ಳಬೇಕೇ, ಬೇಡವೇ ಎಂಬುದನ್ನು ಚರ್ಚಿಸುತ್ತಿದ್ದಾಗ, ಮೈದಾನದಲ್ಲಿದ್ದ ಬುಮ್ರಾ ಹಿಂದಿಯಲ್ಲಿ 'ಬೌನಾ' (ಕುಳ್ಳ) ಎಂಬ ಪದ ಬಳಕೆ ಮಾಡಿದ್ದಾಗಿ ವರದಿಯಾಯಿತು.
ಇದು ಪಂತ್ ಹಾಗೂ ಬುಮ್ರಾ ನಡುವೆ ನಡೆದ ಹಿನ್ನೆಲೆ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಆ ಸಮಯಕ್ಕೆ ಕುಳ್ಳ ಎಂಬುದಕ್ಕೆ ಪ್ರತಿಕ್ರಿಯಿಸದ ಸೌತ್ ಆಫ್ರಿಕಾ ಕ್ಯಾಪ್ಟನ್, ಭಾರತೀಯ ಆಟಗಾರರು ತಮ್ಮ ಬಳಿ ಕ್ಷಮೆಯಾಚಿದ್ದಾಗಿ ಹೇಳಿದ್ದಾರೆ.
"ನನಗೆ ಗೊತ್ತಿತ್ತು ಅವರೇನೋ ಅವರ ಭಾಷೆಯಲ್ಲಿ ಹೇಳಿದರು ಅಂತ. ಆದರೆ, ಆ ಕ್ಷಣಕ್ಕೆ ನಾನು ಅಷ್ಟಾಗಿ ತಲೆಕಡಿಸಿಕೊಳ್ಳಲಿಲ್ಲ. ಆದರೆ, ದಿನದಾಟದ ಅಂತ್ಯಕ್ಕೆ ಬುಮ್ರಾ ಮತ್ತು ಪಂತ್ ಖುದ್ದಾಗಿ ನನ್ನ ಬಳಿ ಬಂದು ಕ್ಷಮೆ ಕೋರಿದರು. ಆಗ ನನಗೆ ಅನಿಸಿದ್ದು, ಅವರಿಬ್ಬರು ಬಳಸಿದ ಪದವಾದರೂ ಏನು ಎಂಬುದು. ಇದರ ಬಗ್ಗೆ ಅರಿವಿರಲಿಲ್ಲ. ಅಸಲಿಗೆ, ಮೈದಾನದಲ್ಲಿ ಅವರಿಬ್ಬರು ಆಡಿದ ಮಾತೇನು ಎಂಬುದನ್ನು ನನ್ನ ಮಾಧ್ಯಮ ಸಲಹೆಗಾರರನ್ನು ಕೇಳಿ, ತಿಳಿದುಕೊಂಡೆ" ಎಂದರು.
"ಮೈದಾನದಲ್ಲಿ ಏನು ನಡೆಯುತ್ತೋ, ಅದು ಅಲ್ಲಿಗಷ್ಟೇ ಸೀಮಿತ. ಆದರೆ, ಆಡಿದ ಪದಗಳು, ಮಾತುಗಳು ಮರೆಯೋಲ್ಲ. ಅದನ್ನೇ ಪ್ರೇರಣೆ, ಎನರ್ಜಿಯಾಗಿ ಬಳಸಿಕೊಳ್ಳುವೆ. ಇಲ್ಲಿ ನನಗೆ ಯಾವುದೇ ಕೋಪ, ಸೇಡು ಬೇಸರವಿಲ್ಲ" ಎಂದು ಬವುಮಾ ಸ್ಪಷ್ಟನೆ ನೀಡಿದ್ದಾರೆ,(ಏಜೆನ್ಸೀಸ್).