ಬೆಂಗಳೂರು: ಆಸ್ಟ್ರೆಲಿಯಾ ಪ್ರವಾಸದ ವೇಳೆ ರಿಂಕು ಸಿಂಗ್ (Rinku Singh) ತಂಡದಲ್ಲಿದ್ದರೂ, ಕೊನೇ ಟಿ20 ಪಂದ್ಯಕ್ಕೆ ಮಾತ್ರ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಆದರೆ ಕೇವಲ 4.5 ಓವರ್ ಬಳಿಕ ಮಳೆಯಿಂದಾಗಿ ರದ್ದುಗೊಂಡ ಆ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ಲಭಿಸಿರಲಿಲ್ಲ. ಅದಕ್ಕೆ ಮುನ್ನ ಅವರು ಏಷ್ಯಾಕಪ್ ಫೈನಲ್ನಲ್ಲಿ ಆಡಿದ್ದರು ಮತ್ತು ಗೆಲುವಿನ ರನ್ ಬಾರಿಸಿದ್ದರು.
ಪ್ರಸಕ್ತ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಉತ್ತರ ಪ್ರದೇಶ ಪರ ಉತ್ತಮ ನಿರ್ವಹಣೆಯನ್ನೇ ತೋರಿದ್ದು, ಅದಕ್ಕೆ ಮುನ್ನ ರಣಜಿಯಲ್ಲೂ ಸತತ 2 ಶತಕ (165*, 176) ಸಿಡಿಸಿ ಮಿಂಚಿದ್ದರು. ಇದರ ಹೊರತಾಗಿಯೂ ಅವರನ್ನು ಟಿ20 ತಂಡದಿಂದ ಕೈಬಿಟ್ಟಿರುವ ಆಯ್ಕೆಗಾರರ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿವೆ.
ಭಾರತ ಪರ ಇದುವರೆಗೆ ಆಡಿರುವ 35 ಟಿ20 ಪಂದ್ಯಗಳಲ್ಲಿ 25ರಲ್ಲಿ ಮಾತ್ರ ಬ್ಯಾಟಿಂಗ್ ಅವಕಾಶ ಪಡೆದಿರುವ ರಿಂಕು, ಈ ಪೈಕಿ 12ರಲ್ಲಿ ಅಜೇಯರಾಗಿ ಉಳಿದಿದ್ದಾರೆ. ಹೀಗಾಗಿ, ಫಿನಿಷರ್ ಆಗಿ ಗುರುತಿಸಲ್ಪಟ್ಟಿರುವ ಅವರನ್ನು 2026ರ ಟಿ20 ವಿಶ್ವಕಪ್ಗೆ ಮುನ್ನ, ಸೂಕ್ತ ಕಾರಣಗಳಿಲ್ಲದೆ ಕೈಬಿಟ್ಟಿರುವ ಕ್ರಮವನ್ನು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.