RCB ಹೊಸ 'ಕ್ವೀನ್' ಅನನ್ಯಾ ಬಿರ್ಲಾ: ಕೋಟಿ ಅಭಿಮಾನಿಗಳ ನೆಚ್ಚಿನ ತಂಡಕ್ಕೆ ಬಿರ್ಲಾ ಪುತ್ರಿಯ ಎಂಟ್ರಿ! ಯಾರು ಈ ಮಲ್ಟಿ ಟ್ಯಾಲೆಂಟೆಡ್ ಸುಂದರಿ?

RCB (AnanyaBirla)
RCB (AnanyaBirla)
Published on

ಪ್ರಮುಖ ಮುಖ್ಯಾಂಶಗಳು

  • ಅನನ್ಯಾ ಬಿರ್ಲಾ ಅವರು ತಂಡದ ಹೊಸ 'ಫ್ಯಾನ್ ಫೇವರಿಟ್' ಆಗಿ ಹೊರಹೊಮ್ಮುತ್ತಿದ್ದಾರೆ.
  • 17ನೇ ವಯಸ್ಸಿಗೆ ಉದ್ಯಮ ಆರಂಭಿಸಿದ ಅದ್ಭುತ ಪ್ರತಿಭೆ!
  • RCB ಅಭಿಮಾನಿಗಳ ಕಣ್ಮಣಿ ಆಗಿದ್ದು ಏಕೆ?
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹೊಸ ಕಳೆ ಬಂದಿದೆ. ಐಪಿಎಲ್ ಇತಿಹಾಸದ ಅತಿದೊಡ್ಡ ಮಾಲೀಕತ್ವ ಬದಲಾವಣೆಯ ನಂತರ, ಈಗ ಎಲ್ಲರ ಕಣ್ಣು ಬಿದ್ದಿರುವುದು ಬಿರ್ಲಾ ಕುಟುಂಬದ ಕುಡಿ, ಯುವ ಉದ್ಯಮಿ ಮತ್ತು ಖ್ಯಾತ ಗಾಯಕಿ ಅನನ್ಯಾ ಬಿರ್ಲಾ ಅವರ ಮೇಲೆ. ಆದಿತ್ಯ ಬಿರ್ಲಾ ಸಮೂಹವು RCB ತಂಡವನ್ನು ಅಧಿಕೃತವಾಗಿ ತನ್ನದಾಗಿಸಿಕೊಂಡ ಬೆನ್ನಲ್ಲೇ, ಅನನ್ಯಾ ಬಿರ್ಲಾ ಅವರು ತಂಡದ ಹೊಸ 'ಫ್ಯಾನ್ ಫೇವರಿಟ್' ಆಗಿ ಹೊರಹೊಮ್ಮುತ್ತಿದ್ದಾರೆ.

ಕೇವಲ ಮಾಲೀಕತ್ವವಲ್ಲ, ಹೊಸ ಶಕ್ತಿ!

ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿಯಾಗಿರುವ ಅನನ್ಯಾ, ಈಗ ಆರ್‍ಸಿಬಿ ತಂಡದ ಸಹ-ಮಾಲೀಕತ್ವದ ಪ್ರಮುಖ ಮುಖವಾಗಿದ್ದಾರೆ. ಅನನ್ಯಾ ಅವರ ಸಹೋದರ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಫ್ರಾಂಚೈಸಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರೆ, ಅನನ್ಯಾ ಅವರು ಮಾಲೀಕತ್ವದ ಆಯಕಟ್ಟಿನ ಜಾಗದಲ್ಲಿ ನಿಂತು ತಂಡಕ್ಕೆ ಯುವ ಚೈತನ್ಯ ತುಂಬಲಿದ್ದಾರೆ. ಬಿರ್ಲಾ ಕುಟುಂಬದ ಐದನೇ ತಲೆಮಾರಿನ ಈ ಕುಡಿ, ಈಗಾಗಲೇ ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಆದಿತ್ಯ ಬಿರ್ಲಾ ಫ್ಯಾಶನ್ ಅಂಡ್ ರಿಟೇಲ್ ಲಿಮಿಟೆಡ್‌ನಂತಹ ದೈತ್ಯ ಕಂಪನಿಗಳ ಬೋರ್ಡ್ ಆಫ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಆರ್‍ಸಿಬಿ ಮೂಲಕ ಕ್ರೀಡಾ ಲೋಕಕ್ಕೂ ತಮ್ಮ ವ್ಯವಹಾರ ಚಾತುರ್ಯವನ್ನು ವಿಸ್ತರಿಸಿದ್ದಾರೆ.

17ನೇ ವಯಸ್ಸಿಗೆ ಉದ್ಯಮ ಆರಂಭಿಸಿದ ಅದ್ಭುತ ಪ್ರತಿಭೆ!

ಅನನ್ಯಾ ಬಿರ್ಲಾ ಕೇವಲ ಶ್ರೀಮಂತ ಉದ್ಯಮಿಯ ಮಗಳಲ್ಲ, ಸ್ವಂತ ಶಕ್ತಿಯ ಮೇಲೆ ಸಾಮ್ರಾಜ್ಯ ಕಟ್ಟಿದವರು. ಕೇವಲ 17 ವರ್ಷ ವಯಸ್ಸಿನಲ್ಲೇ ಅವರು 'ಸ್ವತಂತ್ರ ಮೈಕ್ರೋಫಿನ್' ಎಂಬ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ಈ ಸಂಸ್ಥೆಯು ಭಾರತದ 20 ರಾಜ್ಯಗಳ 78,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹರಡಿಕೊಂಡಿದ್ದು, ಲಕ್ಷಾಂತರ ಜನರಿಗೆ ಆರ್ಥಿಕ ನೆರವು ನೀಡುತ್ತಿದೆ. ಬಡವರಿಗಾಗಿ ಅಗ್ಗದ ದರದಲ್ಲಿ ಮನೆ ಕಟ್ಟಲು 'ಸ್ವತಂತ್ರ ಮೈಕ್ರೋ ಹೌಸಿಂಗ್ ಫೈನಾನ್ಸ್' ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆ.

ಜಾಗತಿಕ ಮಟ್ಟದ ಪಾಪ್ ಸ್ಟಾರ್ !

ಉದ್ಯಮದ ಜೊತೆಗೆ ಅನನ್ಯಾ ಅವರ ಮತ್ತೊಂದು ಮುಖವೆಂದರೆ ಸಂಗೀತ. ಅವರು ಅಂತರಾಷ್ಟ್ರೀಯ ಮಟ್ಟದ ಇಂಗ್ಲಿಷ್ ಪಾಪ್ ಗಾಯಕಿ. ಅವರು ಇಲ್ಲಿಯವರೆಗೆ 500 ಮಿಲಿಯನ್‌ಗಿಂತಲೂ (50 ಕೋಟಿ) ಹೆಚ್ಚು ಸ್ಟ್ರೀಮ್‌ಗಳನ್ನು ಹೊಂದಿದ್ದಾರೆ. ಪಿಯಾನೋ, ಗಿಟಾರ್ ಮತ್ತು ಡ್ರಮ್ಸ್ ನುಡಿಸುವುದರಲ್ಲಿ ಪರಿಣಿತರಾಗಿರುವ ಇವರು, ಅಂತರಾಷ್ಟ್ರೀಯ ಸಂಗೀತಗಾರರು ಮತ್ತು ಭಾರತದ ಹೆಮ್ಮೆ ಎ.ಆರ್. ರೆಹಮಾನ್ ಅವರ ಜೊತೆಗೂ ಕೆಲಸ ಮಾಡಿದ್ದಾರೆ.

RCB ಅಭಿಮಾನಿಗಳ ಕಣ್ಮಣಿ ಆಗಿದ್ದು ಏಕೆ?

RCB ಅಭಿಮಾನಿಗಳು ಯಾವಾಗಲೂ ತಂಡದ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡವರು. ಈಗ ಅನನ್ಯಾ ಬಿರ್ಲಾ ಅವರ ಎಂಟ್ರಿಯಿಂದ ತಂಡಕ್ಕೆ ಗ್ಲಾಮರ್ ಮತ್ತು ವ್ಯವಹಾರಿಕ ಶಕ್ತಿ ಎರಡೂ ಸಿಕ್ಕಂತಾಗಿದೆ. ಅವರ ಸರಳತೆ, ಸಾಧನೆ ಮತ್ತು ಕಲೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ "ಆರ್​ಸಿಬಿ ನ್ಯೂ ಬಾಸ್" ಎಂದು ಅನನ್ಯಾ ಅವರನ್ನು ಅಭಿಮಾನಿಗಳು ಸ್ವಾಗತಿಸುತ್ತಿದ್ದಾರೆ.
ಹೊಸ ನಾಯಕತ್ವ, ಹೊಸ ಮಾಲೀಕತ್ವ ಮತ್ತು ಅನನ್ಯಾ ಬಿರ್ಲಾ ಅವರಂತಹ ಯುವ ನಾಯಕಿಯ ಎಂಟ್ರಿಯೊಂದಿಗೆ ಆರ್‍ಸಿಬಿ ಈ ಬಾರಿ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಗೆ ಹೊಸ ಆಯಾಮ ನೀಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net