ಬೆಂಗಳೂರು: ಐಪಿಎಲ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಪ್ರಕ್ರಿಯೆಯ ಮೊದಲ ಹಂತ ಅಧಿಕೃತವಾಗಿ ಆರಂಭಗೊಂಡಿದೆ. ಇದರ ಭಾಗವಾಗಿ ಆರ್ಸಿಬಿ ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವ ಡಿಯಾಜಿಯೋ (Diageo) ಕಂಪನಿಯು, ಆಸಕ್ತ ಖರೀದಿದಾರರಿಗೆ ಮಾಹಿತಿ ಪತ್ರಗಳನ್ನು ವಿತರಿಸಿದೆ. IPL 19ನೇ ಆವೃತ್ತಿ ಆರಂಭಕ್ಕೆ ಮೊದಲೇ ಮಾರಾಟ ಪ್ರಕ್ರಿಯೆ ಮುಕ್ತಾಯವಾಗುವ ನಿರೀಕ್ಷೆ ಇದೆ.
ಹಾಲಿ ವಿತ್ತ ವರ್ಷ ಮುಕ್ತಾಯಗೊಳ್ಳುವುದಕ್ಕೆ ಮುನ್ನ ಆರ್ಸಿಬಿ ತಂಡದ ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಡಿಯಾಜಿಯೋ ಈ ಮೊದಲೇ ಪ್ರಕಟಿಸಿತ್ತು. ಡಿಯಾಜಿಯೋ ವಿತರಿಸಿರುವ ಈ ಮಾಹಿತಿ ಪತ್ರದಲ್ಲಿ (ಸಿಐಎಂ) ಆರ್ಸಿಬಿ ತಂಡದ ಬಗೆಗಿನ ಕೆಲ ಗೌಪ್ಯ ಮಾಹಿತಿಗಳು ಇವೆ. ಯಾವುದೇ ಕಂಪನಿಯನ್ನು ಮಾರಾಟ ಮಾಡುವುದಕ್ಕೆ ಮುನ್ನ ಈ ರೀತಿ ಪ್ರಾಥಮಿಕ ಮಾರುಕಟ್ಟೆ ದಾಖಲೆಗಳನ್ನು ಹಂಚಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ ಎನಿಸಿದೆ.
ಸಂಭಾವ್ಯ ಖರೀದಿದಾರರು, ಆರ್ಸಿಬಿ ಫ್ರಾಂಚೈಸಿಯ ಖರೀದಿಗಾಗಿ ಸಲ್ಲಿಸಬೇಕಾದ ಬಿಡ್ ಮೊತ್ತವನ್ನು ಈ ದಾಖಲೆಪತ್ರಗಳಿಂದ ಮೌಲ್ಯಮಾಪನ ಮಾಡಬಹುದಾಗಿದೆ. ಡಿಯಾಜಿಯೋ ಈಗಾಗಲೆ ಆರ್ಸಿಬಿ ಫ್ರಾಂಚೈಸಿಗೆ ಸುಮಾರು 18 ಸಾವಿರ ಕೋಟಿ ರೂ. (2 ಶತಕೋಟಿ ಡಾಲರ್) ಮೌಲ್ಯ ನಿಗದಪಡಿಸಿದೆ.