ತವರು ತಾಣದ ಗುಟ್ಟು ಬಿಟ್ಟುಕೊಡದ ಆರ್‌ಸಿಬಿ!: ಬಿಸಿಸಿಐ ನೀಡಿದ ಗಡುವು ಮುಕ್ತಾಯ

 ಆರ್‌ಸಿಬಿ
ಆರ್‌ಸಿಬಿ
Published on
ಬೆಂಗಳೂರು: ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಪ್ರತಿಷ್ಠಿತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಈಗಾಗಲೆ ಸರ್ಕಾರದಿಂದ ಷರತ್ತುಬದ್ಧ ಅನುಮತಿ ಪಡೆದುಕೊಂಡ ನಡುವೆಯೂ ಹಾಲಿ ಚಾಂಪಿಯನ್ ಆರ್‌ಸಿಬಿ (RCB) ತಂಡ ಮುಂಬರುವ ಐಪಿಎಲ್ (IPL) 19ನೇ ಆವೃತ್ತಿಯಲ್ಲಿ ತನ್ನ ತವರು ಪಂದ್ಯಗಳನ್ನು ಆಡುವ ಮೈದಾನದ ಬಗೆಗಿನ ಗುಟ್ಟು ಬಿಟ್ಟುಕೊಟ್ಟಿಲ್ಲ. ತವರು ಮೈದಾನ ಅಂತಿಮಗೊಳಿಸಲು ಬಿಸಿಸಿಐ ನೀಡಿದ್ದ ಗಡುವು ಮಂಗಳವಾರಕ್ಕೆ (ಜ.27) ಮುಕ್ತಾಯಗೊಂಡಿದ್ದರೂ, ಆರ್‌ಸಿಬಿ ಫ್ರಾಂಚೈಸಿಯ ನಡೆ ಇನ್ನೂ ಕುತೂಹಲಕಾರಿಯಾಗಿದೆ.
ತಾತ್ಕಾಲಿಕ ಆರಂಭ ದಿನಾಂಕದ (ಮಾ.26) ಅನ್ವಯ ಐಪಿಎಲ್ ಟೂರ್ನಿ ಚಾಲನೆಗೆ 56 ದಿನಗಳು ಬಾಕಿಯಿದ್ದು, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆಯ ದೃಷ್ಟಿಯಿಂದ ಭದ್ರತಾ ತಾಪತ್ರಯ ತಪ್ಪಿಸಲು 19ನೇ ಆವೃತ್ತಿಯ ಅಂತಿಮ ವೇಳಾಪಟ್ಟಿ ಪ್ರಕಟಿಸುವುದನ್ನು ಬಿಸಿಸಿಐ ವಿಳಂಬಗೊಳಿಸಿದೆ. ಕಳೆದ ವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ತವರು ಮೈದಾನವನ್ನು ಶೀಘ್ರ ಅಂತಿಮಗೊಳಿಸುವಂತೆ ಬಿಸಿಸಿಐ, ಆರ್‌ಸಿಬಿ ಹಾಗೂ ರಾಜಸ್ಥಾನ ಫ್ರಾಂಚೈಸಿಗಳಿಗೆ ಗಡುವು ವಿಧಿಸಿತ್ತು.
ಆದರೆ, 18 ವರ್ಷಗಳಿಂದಲೂ ತನ್ನ ತವರು ಮೈದಾನವಾಗಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆ ಕುರಿತು ಆರ್‌ಸಿಬಿ ಫ್ರಾಂಚೈಸಿ ಇದುವರೆಗೆ ಕೆಎಸ್‌ಸಿಎಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದೇ ವಾರದಲ್ಲಿ ಮತ್ತೆ ಸಭೆ ಸೇರಲಿರುವ ಐಪಿಎಲ್ ಆಡಳಿತ ಮಂಡಳಿ, ಆರ್‌ಸಿಬಿ ತವರು ಮೈದಾನದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಕೆಎಸ್‌ಸಿಎ ಸಿದ್ಧವಾಗಿದ್ದು, ಸರ್ಕಾರದಿಂದ ನಿರಾಕ್ಷೇಪಣಾ ಅನುಮತಿ ಪತ್ರ (ಎನ್‌ಒಸಿ) ಪಡೆಯುವ ಭರವಸೆಯನ್ನುಫ್ರಾಂಚೈಸಿಗೆ ನೀಡಿದೆ.
ಆದರೆ, ಸರ್ಕಾರ ಜನಸಂದಣಿ ನಿಯಂತ್ರಣಕ್ಕೆ ಹೊರಡಿಸಿರುವ ಕೆಲ ಮಾರ್ಗಸೂಚಿಗಳಿಂದ ಆರ್‌ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ಆಡಲು ಹಿಂದೇಟು ಹಾಕುತ್ತಿದೆ. ಇದರಲ್ಲಿ ಪ್ರಮುಖವಾಗಿ ಪಂದ್ಯ ಆಯೋಜಿಸಿದ ಸಮಯದಲ್ಲಿ ಕ್ರೀಡಾಂಗಣದ ಒಳಗಿನ ಘಟನೆಗಳ ಜತೆಗೆ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಯಲ್ಲಿ ನಡೆಯವ ಅವಘಡಗಳಿಗೆ ಆಯೋಜಕರೇ ಹೊಣೆ ಎಂಬ ನಿಯಮ ಹಾಗೂ ಪಂದ್ಯದ ವೇಳೆ ಡಿಜೆ ಬಳಕೆಯ ನಿರ್ಬಂಧಗಳು ಸೇರಿವೆ.
ಚಿನ್ನಸ್ವಾಮಿಯಲ್ಲಿ ಐಪಿಎಲ್ ಗ್ಯಾರಂಟಿ?
ಆರ್‌ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು ಆಡಲು ಹಿಂದೇಟು ಹಾಕುತ್ತಿರುವ ನಡುವೆ ಬೇರೆ ಇತರ ಮೂರು ಫ್ರಾಂಚೈಸಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಆಸಕ್ತಿ ತೋರಿವೆ. ಆರ್‌ಸಿಬಿ ಬೆಂಗಳೂರಿನಿಂದ ಹೊರಗೆ ಆಡಲು ನಿರ್ಧರಿಸಿದರೆ, ಮೂರು ಬಾರಿಯ ಚಾಂಪಿಯನ್ ಕೆಕೆಆರ್ ತಂಡ ಉದ್ಯಾನನಗರಿಯಲ್ಲಿ ತನ್ನ ತವರು ಮೈದಾನದ ಕೆಲ ಪಂದ್ಯಗಳನ್ನು ಆಡಲು ಸಜ್ಜುಗೊಂಡಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಭದ್ರತಾ ಸಮಸ್ಯೆಯಿಂದಾಗಿ ಬೇರೆಡೆ ಆಡಲು ಕೆಕೆಆರ್ (KKR) ತಂಡದ ಮಾಲೀಕ, ಬಾಲಿವುಡ್ ನಟ ಶಾರುಖ್ ಖಾನ್ ಒಲವು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಆಡುವ ಕುರಿತು ಕೆಎಸ್‌ಸಿಎ ಅಧಿಕಾರಿಗಳೊಂದಿಗೆ ಪ್ರಾಥಮಿಕ ಹಂತದ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಸಹ ರೇಸ್‌ನಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net