ಆರ್‌ಸಿಬಿ ಹೆಸರು ಬದಲಾಗಲಿದೆಯಾ..? ಅನನ್ಯಾ ಬಿರ್ಲಾ ಕೊಟ್ಟ ಶಾಕಿಂಗ್ ಉತ್ತರ ಇಲ್ಲಿದೆ! RCB

RCB (ಚಿತ್ರ X)
RCB (ಚಿತ್ರ X)
Published on
IPL 2026: ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈಗ ಹೊಸ ಮಾಲೀಕರನ್ನು ಹೊಂದಿದ್ದು, ಮಂಗಳವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್​ ಒಕ್ಕೂಟವು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನಿಂದ ಸುಮಾರು 16,708 ಕೋಟಿ ಮೊತ್ತಕ್ಕೆ ಖರೀದಿಸಿದೆ.
ಈ ಹೊಸ ರಚನೆಯ ಅಡಿಯಲ್ಲಿ, ಆದಿತ್ಯ ಬಿರ್ಲಾ ಸಮೂಹದ ನಿರ್ದೇಶಕ ವಿಕ್ರಮ್ ಬಿರ್ಲಾ ಆರ್‌ಸಿಬಿಯ ಹೊಸ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಟೈಮ್ಸ್ ಗ್ರೂಪ್‌ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಲಿದ್ದಾರೆ.

ತಂಡದ ಹೆಸರು ಬದಲಾಗಲಿದೆಯೇ?

ಹೊಸ ಮಾಲೀಕರು ತಂಡವನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಅಭಿಮಾನಿಗಳ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಯೆಂದರೆ ತಂಡದ ಹೆಸರು ಬದಲಾಗುತ್ತದೆಯೇ? ಎಂಬುದು. ಈ ಬಗ್ಗೆ ಸ್ಪಷ್ಟನೆ ನೀಡಿದ ಬಿರ್ಲಾ ಗ್ರೂಪ್‌ನ ಮಾಲಕಿ ಅನನ್ಯ ಬಿರ್ಲಾ ತಂಡದ ಹೆಸರನ್ನು ಬದಲಾಯಿಸಲಾಗುವುದಿಲ್ಲ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇದು ಆರ್​ಸಿಬಿ ಎಂಬ ಹೆಸರಿನೊಂದಿಗೆ ಅಭಿಮಾನಿಗಳು ಹೊಂದಿರುವ ಭಾವನಾತ್ಮಕ ನಂಟನ್ನು ಹೊಸ ಮಾಲೀಕರು ಗೌರವಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ.
ಈ ಮಾರಾಟದ ಕುರಿತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಅಧೀಕೃತವಾಗಿ ಪ್ರತಿಕ್ರಿಯಿಸಿದ್ದು, ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ನಲ್ಲಿ ಹೊಂದಿರುವ 100 ಪ್ರತಿಶತ ಈಕ್ವಿಟಿ ಪಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲು ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದೆ.
ಈ ಒಕ್ಕೂಟವು ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್, ಮತ್ತು ಬ್ಲಾಕ್‌ಸ್ಟೋನ್‌ನ ಶಾಶ್ವತ ಖಾಸಗಿ ಷೇರು ತಂತ್ರ, ಬ್ಲಾಕ್​ಸ್ಟೋನ್​ಗಳನ್ನು ಒಳಗೊಂಡಿದ್ದು, ಸಂಪೂರ್ಣ ನಗದು ವಹಿವಾಟಿನಲ್ಲಿ ಒಟ್ಟು INR 166.6 ಬಿಲಿಯನ್ ಮೌಲ್ಯದ್ದಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಈ ವಹಿವಾಟಿನಲ್ಲಿ ಆರ್‌ಸಿಬಿಯ ಪುರುಷ ಮತ್ತು ಮಹಿಳಾ ತಂಡಗಳನ್ನು ಒಳಗೊಂಡಿದ್ದು, ಫ್ರಾಂಚೈಸಿಗಳ ಒಡೆತನ ಮತ್ತು ನಿರ್ಹವಣೆಯನ್ನು ಹೊಂದಿದೆ. ಆದಾಗ್ಯೂ, ಈ ವಹಿವಾಟು ಪೂರ್ಣಗೊಂಡ ನಂತರ, ಒಕ್ಕೂಟವು RCSPL ನ ಮಾಲೀಕತ್ವದ ಮೂಲಕ, IPL ಮತ್ತು WPL ಫ್ರಾಂಚೈಸಿಯನ್ನು ಹೊಂದುವ ಮತ್ತು ನಿರ್ವಹಿಸುವ ಹಕ್ಕುಗಳನ್ನು ಪಡೆದುಕೊಳ್ಳುತ್ತದೆ ಎಂದು USL ಅಧೀಕೃತವಾಗಿ ಹೇಳಿಕೆ ನೀಡಿದೆ.

ಇತಿಹಾಸ ಮತ್ತು ಚಾಂಪಿಯನ್ ಪಟ್ಟ

2008ರಲ್ಲಿ ಐಪಿಎಲ್ ಆರಂಭವಾದಾಗ ಕೇವಲ 485 ಕೋಟಿಗೆ ಖರೀದಿಸಲ್ಪಟ್ಟಿದ್ದ ಆರ್‌ಸಿಬಿ, ಕಳೆದ 18 ವರ್ಷಗಳಲ್ಲಿ ದೈತ್ಯವಾಗಿ ಬೆಳೆದಿದೆ. 17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆರ್​ಸಿಬಿ ಮೊದಲ ಬಾರಿಗೆ ಐಪಿಎಲ್​ ಚಾಂಪಿಯನ್​ ಶಿಪ್​​ ಗೆದ್ದು ಇತಿಹಾಸ ಸೃಷ್ಟಿಸಿತು. ಈ ತಂಡ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಹೊಸ ಮಾಲೀಕರನ್ನು ಸ್ವಾಗತಿಸುತ್ತಿದೆ. 2008ರಲ್ಲಿ ಹೂಡಿಕೆ ಮಾಡಿದ್ದ ಮೊತ್ತಕ್ಕೆ ಹೋಲಿಸಿದರೆ ಈಗ ತಂಡವು ಸುಮಾರು 16 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿರುವುದು ಐಪಿಎಲ್‌ನ ವಾಣಿಜ್ಯ ಶಕ್ತಿಯನ್ನು ಸಾಬೀತುಪಡಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net