ಆರ್​ಸಿಬಿ ಮಾರಾಟವಾದ ಬಳಿಕ ಹೆಸರು ಬದಲಾವಣೆ! ಹೀಗಿದೆ ಕಾರಣ...

ಆರ್​ಸಿಬಿ ಮಾರಾಟವಾದ ಬಳಿಕ ಹೆಸರು ಬದಲಾವಣೆ!
ಆರ್​ಸಿಬಿ ಮಾರಾಟವಾದ ಬಳಿಕ ಹೆಸರು ಬದಲಾವಣೆ!
Published on

ಬೆಂಗಳೂರು: ಐಪಿಎಲ್ (IPL)​ 18ನೇ ಆವೃತ್ತಿಯ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡವನ್ನು ಮಾರಾಟ ಮಾಡುವುದು ಈಗಾಗಲೆ ಖಚಿತಗೊಂಡಿದೆ. ಅಲ್ಲದೆ ಮುಂದಿನ ವರ್ಷ ಮಾರ್ಚ್​ 31ರೊಳಗೆ ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವಿಶ್ವಾಸವನ್ನೂ ತಂಡದ ಮಾಲೀಕರಾದ ಡಿಯಾಜಿಯೋ ಕಂಪನಿಯ ಅಂಗಸಂಸ್ಥೆಯಾದ ಯುನೈಟೆಡ್​ ಸ್ಪಿರಿಟ್ಸ್​ ಲಿಮಿಟೆಡ್​ (ಯುಎಸ್​ಎಲ್​) ವ್ಯಕ್ತಪಡಿಸಿದೆ. ಆರ್​ಸಿಬಿ ಪುರುಷರ ತಂಡದೊಂದಿಗೆ ಮಹಿಳೆಯರ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ (ಡಬ್ಲ್ಯುಪಿಎಲ್​) ಆಡುವ ಆರ್​ಸಿಬಿ ಮಹಿಳಾ ತಂಡವನ್ನೂ ಮಾರಾಟ ಮಾಡಲಾಗುವುದು ಕೂಡ ಖಚಿತಗೊಂಡಿದೆ. ಐಪಿಎಲ್​ನ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿಗೆ ಇದಕ್ಕಿಂತ ಆಘಾತಕಾರಿ ವಿಷಯವೂ ಇದೆ. ಅದೇನೆಂದರೆ, ಹೊಸ ಮಾಲೀಕರಿಗೆ ಮಾರಾಟವಾದ ಬಳಿಕ ಆರ್​ಸಿಬಿ ತಂಡದ ಹೆಸರು ಕೂಡ ಬದಲಾಗಲಿದೆ!

2008ರ ಆರಂಭಿಕ ಆವೃತ್ತಿಯಿಂದಲೂ ಐಪಿಎಲ್​ ಭಾಗವಾಗಿರುವ ಆರ್​ಸಿಬಿ ಫ್ರಾಂಚೈಸಿ ಈ ಮುನ್ನ ವಿಜಯ್​ ಮಲ್ಯ ಅವರ ಮಾಲೀಕತ್ವವನ್ನು ಹೊಂದಿತ್ತು. ವಿಜಯ್​ ಮಲ್ಯ ಅವರು ತನ್ನ ಕಂಪನಿಯ ಅತ್ಯಂತ ಜನಪ್ರಿಯ ವಿಸ್ಕಿ ಬ್ರ್ಯಾಂಡ್​ ಅಂದರೆ "ರಾಯಲ್​ ಚಾಲೆಂಜ್​' ಪ್ರಚಾರಕ್ಕಾಗಿ ತಂಡಕ್ಕೆ "ರಾಯಲ್​ ಚಾಲೆಂಜರ್ಸ್​ ಬೆಂಗಳೂರು' ಎಂಬ ಹೆಸರು ಇಟ್ಟಿದ್ದರು. ನಂತರ ಅವರ ಮದ್ಯದ ಉದ್ಯಮದ ಯುನೈಟೆಡ್​ ಸ್ಪಿರಿಟ್​ ಕಂಪನಿ ಮಾರಾಟವಾದಾಗ, ಆರ್​ಸಿಬಿ ತಂಡವೂ ಡಿಯಾಜಿಯೋ ಪಾಲಾಗಿತ್ತು. ಆಗ ರಾಯಲ್​ ಚಾಲೆಂಜ್​ ವಿಸ್ಕಿ ಬ್ರ್ಯಾಂಡ್​​ ಕೂಡ ಅದರ ಒಡೆತನಕ್ಕೆ ಸೇರಿದ್ದರಿಂದ ಅದು ತಂಡದ ಬದಲಾವಣೆ ಮುಂದಾಗಲಿಲ್ಲ. cricket

ಆದರೆ ಇದೀಗ ಆರ್​ಸಿಬಿ ತಂಡ ಮಾರಾಟವಾದರೆ, ಹೊಸ ಮಾಲೀಕರು ಬರಲಿದ್ದಾರೆ. ಅವರು ಮತ್ತೆ ಅದೇ ರಾಯಲ್​ ಚಾಲೆಂಜ್​ ಬ್ರ್ಯಾಂಡ್​​ನ ಪ್ರಚಾರಕ್ಕೆ ಮುಂದಾಗುವ ಸಾಧ್ಯತೆ ಇಲ್ಲ. ಹೀಗಾಗಿ ಅವರು ತಂಡದ ಹೆಸರು ಬದಲಾವಣೆಗೆ ಮುಂದಾಗುವುದು ನಿಶ್ಚಿತ. ಬೇರೆ ಬ್ರ್ಯಾಂಡ್​ ಪ್ರಚಾರಕ್ಕೆ ಬದಲಾಗಿ ಅವರು ತಮ್ಮದೇ ಬ್ರ್ಯಾಂಡ್​ ಪ್ರಚಾರಕ್ಕಾಗಿ ಆರ್​ಸಿಬಿ ತಂಡದ ಹೆಸರು ಬದಲಾಯಿಸಬಹುದು.

ಹೆಸರು ಬದಲಾವಣೆ ಮುಂದಿನ ದಿನಗಳಲ್ಲಿ ಆರ್​ಸಿಬಿ ತಂಡದ ಬ್ರ್ಯಾಂಡ್​ ಮೌಲ್ಯಕ್ಕೆ ಹೊಡೆತ ನೀಡಬಹುದು. ಆದರೂ ಇದಕ್ಕಾಗಿ ಹೊಸ ಮಾಲೀಕರು, 'ರಾಯಲ್​ ಚಾಲೆಂಜ್​' ಬ್ರ್ಯಾಂಡ್​ ಪ್ರಚಾರವನ್ನು ಮುಂದುವರಿಸುವ ಸಾಧ್ಯತೆ ಇಲ್ಲ.

ಈ ಬೆಳವಣಿಗೆ ಆರ್​ಸಿಬಿ ಅಭಿಮಾನಿಗಳಿಗೆ ಬೇಸರದ ಸಂಗತಿಯೇ ಆದರೂ ಅದರಲ್ಲೊಂದು ಖುಷಿ, ಹೆಮ್ಮೆಯೂ ಇದೆ. ಅದೇನೆಂದರೆ ಆರ್​ಸಿಬಿ ತಂಡ ಕಪ್​ ಗೆಲ್ಲದ ನೋವಿನೊಂದಿಗೆ ಹೆಸರು ಬದಲಾವಣೆ ಕಾಣುತ್ತಿಲ್ಲ. ಬದಲಾಗಿ ಕಪ್​ ಗೆಲುವಿನೊಂದಿಗೆ ತನ್ನ ಹೆಸರು ಬದಲಾಯಿಸುತ್ತಿದೆ. ಹೀಗಾಗಿ ಆರ್​ಸಿಬಿ ಹೆಸರಿನ ಜತೆಗಿನ ಅಭಿಮಾನಿಗಳ ಭಾವನಾತ್ಮಕ ಸಂಬಂಧ ಅದೇ ರೀತಿ ಮುಂದುವರಿಯಬಹುದು ಮತ್ತು ಹೆಮ್ಮೆ ಪಡುವುದನ್ನು ಮುಂದುವರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net