ಪ್ರಶಸ್ತಿ ಸುತ್ತಿಗೇರಲು ಆರ್​ಸಿಬಿ-ಗುಜರಾತ್ ಫೈಟ್: ಪಿಚ್ ರಿಪೋರ್ಟ್, ತಂಡಗಳ ಬಲಾಬಲ ಹೀಗಿದೆ!

ಪ್ರಶಸ್ತಿ ಸುತ್ತಿಗೇರಲು ಆರ್​ಸಿಬಿ-ಗುಜರಾತ್ ಫೈಟ್: ಪಿಚ್ ರಿಪೋರ್ಟ್, ತಂಡಗಳ ಬಲಾಬಲ ಹೀಗಿದೆ!
ಪ್ರಶಸ್ತಿ ಸುತ್ತಿಗೇರಲು ಆರ್​ಸಿಬಿ-ಗುಜರಾತ್ ಫೈಟ್: ಪಿಚ್ ರಿಪೋರ್ಟ್, ತಂಡಗಳ ಬಲಾಬಲ ಹೀಗಿದೆ!
Published on
ಧರ್ಮಶಾಲಾ: ಸತತ ಎರಡನೇ ವರ್ಷವೂ ಪ್ರಶಸ್ತಿ ಒಲಿಸಿಕೊಳ್ಳುವುದರ ಜತೆಗೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-19ರ ಮೊದಲ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿ ಆಗಲಿವೆ. ಮಂಗಳವಾರ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೇರಿದರೆ, ಸೋತವರಿಗೆ ಪ್ರಶಸ್ತಿ ಸುತ್ತಿಗೇರಲು ಮತ್ತೊಂದು ಅವಕಾಶ ಸಿಗಲಿದೆ.
ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಎರಡೂ ತಂಡಗಳು ಲೀಗ್ ಅಂಕಪಟ್ಟಿಯಲ್ಲಿ ಆಡಿದ 14ರಲ್ಲಿ ತಲಾ 18 ಅಂಕದ ಸಮಬಲ ಸಾಧಿಸಿದರೂ, ರನ್‌ರೇಟ್‌ನಲ್ಲಿ ಅಗ್ರಸ್ಥಾನ ಪಡೆದ ರಜತ್ ಪಾಟೀದಾರ್ ಬಳಗ ಕೊಂಚ ಮೇಲುಗೈ ಹೊಂದಿದೆ. ಆದರೆ, ಪ್ಲೇಆಫ್ ಹಂತದಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ತಂಡ ಗೆಲುವಿನ ಫೇವರಿಟ್ ಎನಿಸಿದೆ. 18 ವರ್ಷಗಳ ನಂತರ ಪ್ರಶಸ್ತಿ ಜಯಿಸಿದ ರಜತ್ ಪಾಟೀದಾರ್ ಪಡೆ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್‌ನೊಂದಿಗೆ, ಬೌಲಿಂಗ್ ವಿಭಾಗದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿದೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (557 ರನ್) ಆರೆಂಜ್ ಕ್ಯಾಪ್ ರೇಸ್‌ನಲ್ಲಿ 9ನೇ ಸ್ಥಾನದಲ್ಲಿದ್ದು, ಕನ್ನಡಿಗ ದೇವದತ್ ಪಡಿಕ್ಕಲ್ (433 ರನ್), ಅನುಭವಿ ಜೋಡಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಸಲ್‌ವುಡ್ (12 ವಿಕೆಟ್) ಜತೆಗೆ ರಸಿಕ್ ದಾರ್ (14 ವಿಕೆಟ್) ಪ್ರದರ್ಶನ ಆರ್‌ಸಿಬಿ ಬಲ ಹೆಚ್ಚಿಸಿದೆ. ತವರಿನಾಚೆಯೂ ಹಾಲಿ ವರ್ಷ 7ರಲ್ಲಿ 4 ಜಯ ಸಾಧಿಸಿರುವ ಆರ್‌ಸಿಬಿ, ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಎದುರು ಗೆದ್ದು ಬೀಗಿದ ಅನುಕೂಲತೆ ಹೊಂದಿದೆ. ಆದರೆ, ರಜತ್ ಪಾಟೀದಾರ್ (393) ಹಿಂದಿನ ಪಂದ್ಯಗಳಲ್ಲಿ ಅಸ್ಥಿರ ಪ್ರದರ್ಶನ ಜತೆಗೆ ಜಿತೇಶ್ ಶರ್ಮ (90), ರೊಮಾರಿಯೊ ಶೆರ್ಡ್ (83) ಫಾರ್ಮ್ ಕಳವಳಕಾರಿ ಎನಿಸಿದೆ. ಆಲ್ರೌಂಡರ್ ಕೃನಾಲ್ ಪಾಂಡ್ಯ (182 ರನ್ ಹಾಗೂ 11 ವಿಕೆಟ್) ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡವನ್ನು ಆಧರಿಸಿದ್ದಾರೆ.
ಗುಜರಾತ್‌ನ ಆರಂಭಿಕ ಸಾಯಿ ಸುದರ್ಶನ್ (638 ರನ್), ಶುಭಮಾನ್ ಗಿಲ್ (616) ನಡುವೆ ಆರೆಂಜ್ ಕ್ಯಾಪ್‌ಗೆ ನಿಕಟ ಪೈಪೋಟಿಯಿದ್ದು, ಇವರಿಬ್ಬರನ್ನು ಕಟ್ಟಿಹಾಕುವುದು ಆರ್‌ಸಿಬಿ ಬೌಲರ್‌ಗಳಿಗೆ ಸವಾಲೆನಿಸಿದೆ.
ಬ್ಯಾಟರ್ಸ್‌-ಬೌಲರ್ಸ್‌ ಕದನ!
ಆರ್‌ಸಿಬಿ-ಗುಜರಾತ್ ತಂಡಗಳ ಮುಖಾಮುಖಿಯೂ ಬ್ಯಾಟರ್ಸ್‌ ಹಾಗೂ ಬೌಲರ್ಸ್‌ಗಳ ಕದನ ಎನಿಸಿದೆ. ಧರ್ಮಶಾಲಾದಲ್ಲಿ ಬೌಲರ್‌ಗಳು ಹೆಚ್ಚುವರಿ ಬೌನ್ಸ್‌ನ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದು, ಭುವಿ-ರಬಾಡ ಪರ್ಪಲ್ ಕ್ಯಾಪ್ ರೇಸ್ ಜತೆಗೆ ಎರಡೂ ತಂಡಗಳ ಪ್ರಮುಖ ಆಟಗಾರರಾದ ಕೊಹ್ಲಿ- ಶುಭಮಾನ್ ಗಿಲ್ ಜತೆಗಿನ ಮುಖಾಮುಖಿ ಕುತೂಹಲ ಎನಿಸಿದೆ. ರಬಾಡ ಇದುವರೆಗೆ 16 ಇನಿಂಗ್ಸ್‌ಗಳಲ್ಲಿ 5 ಬಾರಿ ಕೊಹ್ಲಿ ವಿಕೆಟ್ ಪಡೆದರೆ, ಭುವಿ ಎದುರು ಗಿಲ್ ಕೇವಲ 16ರ ಸರಾಸರಿ ಹೊಂದಿದ್ದಾರೆ. ಪವರ್ ಪ್ಲೇಯಲ್ಲಿ ಫಿಲ್ ಸಾಲ್ಟ್ ಆಕ್ರಮಣಕಾರಿ ಆಟಕ್ಕೆ ವೇಗಿ ಮೊಹಮದ್ ಸಿರಾಜ್ ಸವಾಲೊಡ್ಡಲಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ರಶೀದ್ ಖಾನ್, ವಾಷಿಂಗ್ಟನ್ ಸುಂದರ್ ಗುಜರಾತ್‌ಗೆ ಬಲ ತುಂಬಿದರೂ, ರಜತ್ ಪಾಟೀದಾರ್ ಸ್ಪಿನ್ನರ್‌ಗಳ ಎದುರು ಉತ್ತಮ ದಾಖಲೆ ಹೊಂದಿದ್ದಾರೆ. ಜೇಸನ್ ಹೋಲ್ಡರ್ (13 ವಿಕೆಟ್), ಪ್ರಸಿದ್ಧಕೃಷ್ಣ (14) ಜತೆಗೆ ಟಿಮ್ ಡೇವಿಡ್ ಅವರಂಥ ಮ್ಯಾಚ್ ವಿನ್ನರ್‌ಗಳು ಎರಡೂ ತಂಡಗಳಲ್ಲಿದ್ದಾರೆ.
ಭುವಿ ವರ್ಸಸ್ ರಬಾಡ
ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ದ.ಆಫ್ರಿಕಾದ ಕಗಿಸೊ ರಬಾಡ ತಲಾ 24 ವಿಕೆಟ್‌ನೊಂದಿಗೆ ಟೂರ್ನಿಯಲ್ಲಿ ಇದುವರೆಗಿನ ಗರಿಷ್ಠ ವಿಕೆಟ್ ಸಾಧಕರರೆನಿಸಿದ್ದಾರೆ. ಇವರಿಬ್ಬರು ತನ್ನ ತಂಡಗಳ ಬೌಲಿಂಗ್ ಟ್ರಂಪ್ ಕಾರ್ಡ್ ಆಗಿದ್ದು, ಪವರ್ ಪ್ಲೇಯಲ್ಲಿ ರಬಾಡ-ಭುವಿ ಬೌಲಿಂಗ್ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ರಬಾಡಗೆ ಹೋಲಿಸಿದರೆ ಡೆತ್ ಓವರ್‌ಗಳಲ್ಲಿ 16 ಓವರ್ ಎಸೆದಿರುವ ಭುವಿ ಮೇಲುಗೈ ಸಾಧಿಸಿದ್ದಾರೆ. ರಬಾಡ ಪವರ್ ಪ್ಲೇಯಲ್ಲಿ ಆರ್‌ಸಿಬಿ ಅಗ್ರ ಕ್ರಮಾಂಕಕ್ಕೆ ಕಡಿವಾಣ ಹೇರಿದರೆ, ಸ್ಪಿನ್ನರ್ ರಶೀದ್ ಖಾನ್ ಎದುರು ಆರ್‌ಸಿಬಿ ಮಧ್ಯಮ ಕ್ರಮಾಂಕಕ್ಕೆ ಪರೀಕ್ಷೆ ಎದುರಾಗಲಿದೆ. ಇತ್ತ, ಭುವನೇಶ್ವರ್ ಪವರ್ ಪ್ಲೇಯಲ್ಲಿ ಗುಜರಾತ್‌ನ ಆರಂಭಿಕರಾದ ಗಿಲ್-ಸುದರ್ಶನ್ ವಿಕೆಟ್ ಪಡೆದರೆ, ಜೋಶ್ ಬಟ್ಲರ್, ವಾಷಿಂಗ್ಟನ್ ಸುಂದರ್ ಒತ್ತಡಕ್ಕೆ ಒಳಗಾಗಲಿದ್ದಾರೆ.
ಪಿಚ್ ರಿಪೋರ್ಟ್
ಕ್ವಾಲಿೈಯರ್-1ರ ಪಂದ್ಯಕ್ಕೆ ಮಳೆ ಭೀತಿಯಿಲ್ಲ, ಆದರೆ, ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹಾಲಿ ವರ್ಷ ನಡೆದ ಎರಡು ರಾತ್ರಿ ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡವೇ ಗೆಲುವು ಒಲಿಸಿಕೊಂಡಿದೆ. ಚಿಕ್ಕ ಔಟ್ ಫೀಲ್ಡ್ ಜತೆಗೆ ಕ್ರೀಡಾಂಗಣವೂ ಬೆಟ್ಟದ ಮೇಲಿರುವುದರಿಂದ ಗಾಳಿಯೂ ನಿರ್ಣಾಯಕ ಎನಿಸಿದ್ದು, ಮೊದಲ ಬ್ಯಾಟಿಂಗ್ ತಂಡ ಮೊತ್ತವನ್ನು ರಕ್ಷಿಸಿಕೊಳ್ಳಲು ಕಠಿಣ ಶ್ರಮವಹಿಸಬೇಕಾಗುತ್ತದೆ.
ಮುಖಾಮುಖಿ: 9
ಆರ್‌ಸಿಬಿ: 4
ಗುಜರಾತ್: 4
ರದ್ದು: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net