ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರಿಗೆ ಟ್ರೋಫಿ ಅರ್ಪಿಸಿದ ಆರ್​ಸಿಬಿ ನಾಯಕ ರಜತ್​ ಪಾಟೀದಾರ್

ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರಿಗೆ ಟ್ರೋಫಿ ಅರ್ಪಿಸಿದ ಆರ್​ಸಿಬಿ ನಾಯಕ ರಜತ್​ ಪಾಟೀದಾರ್
ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರಿಗೆ ಟ್ರೋಫಿ ಅರ್ಪಿಸಿದ ಆರ್​ಸಿಬಿ ನಾಯಕ ರಜತ್​ ಪಾಟೀದಾರ್
Published on
ಅಹಮದಾಬಾದ್: ಆರ್​ಸಿಬಿ (RCB) ತಂಡದ ನಾಯಕ ರಜತ್​ ಪಾಟೀದಾರ್​ ಸತತ 2ನೇ ಬಾರಿ ಗೆದ್ದಿರುವ ಐಪಿಎಲ್ (IPL)​ ಟ್ರೋಫಿಯನ್ನು ಕಳೆದ ವರ್ಷ ಬೆಂಗಳೂರಿನಲ್ಲಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ (stampede) ಮೃತಪಟ್ಟ 11 ಮಂದಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

"ಕಾಲ್ತುಳಿತ ದುರಂತದ ಬಗ್ಗೆ ನಮಗೆ ಬೇಸರವಿದೆ. ಗೆಲುವಿನ ಬಳಿಕ ನಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳುವುದು ಖಂಡಿತವಾಗಿಯೂ ಬೇಸರ ತರುತ್ತದೆ. ಅವರು ಬರೀ ಅಭಿಮಾನಿಗಳಲ್ಲ ನಮ್ಮ ಕುಟುಂಬದ ಸದಸ್ಯರು. ಹೀಗಾಗಿ ಈ ಟ್ರೋಫಿ ಅವರಿಗೆ ಅರ್ಪಣೆ. ಇದಕ್ಕಿಂತ ಹೆಚ್ಚಿನ ಭಾವನೆ ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ' ಎಂದು ಪಾಟೀದಾರ್ ಫೈನಲ್​ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ದುರಂತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಚಟುವಟಿಕೆಯೇ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಕೆಎಸ್​ಸಿಎ, ರಾಜ್ಯ ಸರ್ಕಾರ ಮತ್ತು ಬಿಸಿಸಿಐ ಪ್ರಯತ್ನದಿಂದ ಕೊನೆಗೂ ಹಾಲಿ ವರ್ಷ ಐಪಿಎಲ್​ ಮೂಲಕವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಪುನರಾರಂಭಗೊಂಡಿತ್ತು. ಈ ವೇಳೆ 11 ಮೃತ ಅಭಿಮಾನಿಗಳಿಗಾಗಿ ಕ್ರೀಡಾಂಗಣದ 11 ಸೀಟುಗಳನ್ನು ಖಾಲಿ ಬಿಡಲಾಗಿತ್ತು ಮತ್ತು ಉದ್ಘಾಟನಾ ಪಂದ್ಯಕ್ಕೆ ಮುನ್ನ ಆರ್​ಸಿಬಿ ತಂಡದ ಎಲ್ಲ ಆಟಗಾರರು 11 ನಂಬರ್​ ಜೆರ್ಸಿ ಧರಿಸಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಆರ್​ಸಿಬಿ ತಂಡ ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿತ್ತು. ಆದರೆ ಉಚಿತ ಟಿಕೆಟ್​ ಕಿರಿಕಿರಿಯಿಂದಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ಲೇಆಫ್​-ಫೈನಲ್​ ಪಂದ್ಯಗಳು ಸ್ಥಳಾಂತರಗೊಂಡಿದ್ದವು.
ಕಳೆದ ವರ್ಷದಷ್ಟು ಒತ್ತಡವಿರಲಿಲ್ಲ
ನಾವು ಈ ಬಾರಿ ಕಳೆದ ವರ್ಷದಷ್ಟು ಒತ್ತಡ ಎದುರಿಸಲಿಲ್ಲ. ಯಾಕೆಂದರೆ ನಮ್ಮ ತಂಡದ ತಾಕತ್ತು ಎಂಥದ್ದು ಎಂಬುದು ಗೊತ್ತಿತ್ತು. ಅಲ್ಲದೆ ನಾವು ಈ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದೆವು. ಲೀಗ್​ ಹಂತದಲ್ಲಿ ಆಡಿದ ಆಟವನ್ನೇ ಆಡಿದರೆ ಮತ್ತು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ಪ್ರಶಸ್ತಿ ಗೆಲ್ಲುವ ವಿಶ್ವಾಸವಿತ್ತು. ಫೈನಲ್​ನಲ್ಲಿ ನಮ್ಮ ಎಲ್ಲ ಆಟಗಾರರು ಸಂಪೂರ್ಣ ಏಕಾಗ್ರತೆ ಮತ್ತು ಪ್ರಬುದ್ಧತೆ ಪ್ರದರ್ಶಿಸಿದರು ಎಂದು ವಿರಾಟ್​ ಕೊಹ್ಲಿ ಫೈನಲ್​ ಗೆಲುವಿನ ಬಳಿಕ ಸಂಭ್ರಮಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net