ರಣಜಿ ಟ್ರೋಫಿ ಸೆಮಿಫೈನಲ್: ಲಖನೌದಲ್ಲಿ ಕರ್ನಾಟಕ-ಉತ್ತರಾಖಂಡ ಮುಖಾಮುಖಿ

ರಣಜಿ ಟ್ರೋಫಿ ಸೆಮಿಫೈನಲ್: ಲಖನೌದಲ್ಲಿ ಕರ್ನಾಟಕ-ಉತ್ತರಾಖಂಡ ಮುಖಾಮುಖಿ
ರಣಜಿ ಟ್ರೋಫಿ ಸೆಮಿಫೈನಲ್: ಲಖನೌದಲ್ಲಿ ಕರ್ನಾಟಕ-ಉತ್ತರಾಖಂಡ ಮುಖಾಮುಖಿ
Published on
ಲಖನೌ: ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ 91ನೇ ಆವೃತ್ತಿಯ ಸೆಮಿೈನಲ್ ಪಂದ್ಯಗಳು ಭಾನುವಾರ ಆರಂಭವಾಗಲಿವೆ. 11 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರುವ ಹಂಬಲದಲ್ಲಿರುವ ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಲಖನೌದ ಏಕನಾ ಕ್ರೀಡಾಂಗಣದಲ್ಲಿ ಆತಿಥೇಯ ಉತ್ತರಾಖಂಡ ವಿರುದ್ಧ ಕಣಕ್ಕಿಳಿಯಲಿದೆ. ಕೋಲ್ಕತದ ಕಲ್ಯಾಣಿಯ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಇನ್ನೊಂದು ಸೆಮೀಸ್‌ನಲ್ಲಿ ಆತಿಥೇಯ ಬಂಗಾಳ ಹಾಗೂ ಜಮ್ಮು-ಕಾಶ್ಮೀರ ತಂಡಗಳು ಮುಖಾಮುಖಿ ಆಗಲಿವೆ.
2013-14 ಮತ್ತು 2014-15ರ ಆವೃತ್ತಿಯಲ್ಲಿ ಸತತವಾಗಿ ಪ್ರಶಸ್ತಿ ಗೆದ್ದ ಬಳಿಕ ಕರ್ನಾಟಕ ತಂಡ ಈ ಬಾರಿ ಒಟ್ಟಾರೆ 9ನೇ ಪ್ರಶಸ್ತಿ ಗೆಲುವಿನ ನಿರೀಕ್ಷೆ ಮೂಡಿಸಿದೆ. ಲೀಗ್ ಹಂತದ ಏಕೈಕ ಸೋಲಿನ ಬಳಿಕ ನಾಯಕತ್ವದ ಬದಲಾವಣೆಯಿಂದ ಪುಟಿದೆದ್ದಿರುವ ಕರ್ನಾಟಕ ತಂಡ ಫೇವರಿಟ್ ಎನಿಸಿದೆ. ಮಾಜಿ ಕ್ರಿಕೆಟಿಗ ವಿನಯ್ ಕುಮಾರ್ ಸಾರಥ್ಯದಲ್ಲಿ ಸತತ 2 ಬಾರಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಅದೇ ಪ್ರದರ್ಶನ ಪುನರಾವರ್ತಿಸುವ ಹಂಬಲದಲ್ಲಿದ್ದಾರೆ.
ಕ್ವಾರ್ಟರ್ ಫೈನಲ್​ನಲ್ಲಿ ಮುಂಬೈ ಎದುರು ಚೇಸಿಂಗ್‌ನಲ್ಲಿ 138 ರನ್ ಗಳಿಸಿದ್ದ ರಾಹುಲ್, 2013-14, 2014-15ರ ಸೀಸನ್‌ನಲ್ಲಿ ಒಟ್ಟಾರೆ 1,871 ರನ್ ಸೇರಿಸಿದ್ದರು. ಮಾಜಿ ನಾಯಕ ಮಯಾಂಕ್ ಅಗರ್ವಾಲ್ (492 ರನ್), ದೇವದತ್ ಪಡಿಕ್ಕಲ್ (300), ಆರ್.ಸ್ಮರಣ್ (688) ಹಾಗೂ ಕರುಣ್ ನಾಯರ್ (631) ಬ್ಯಾಟಿಂಗ್ ಬಲವೂ ಕರ್ನಾಟಕ ತಂಡಕ್ಕಿದೆ. ರಣಜಿ ಟ್ರೋಫಿ ಮೊದಲ ಹಂತದಲ್ಲಿ ಉತ್ತಮ ರ್ಮ್‌ನಲ್ಲಿದ್ದ ಕರುಣ್, ಸ್ಮರಣ್ ಎರಡನೇ ಹಂತದಲ್ಲಿ ಅಸ್ಥಿರ ನಿರ್ವಹಣೆ ತೋರಿಸಿದ್ದಾರೆ. ಹಿಂದಿನ ಪಂದ್ಯದಲ್ಲಿ ಸ್ಮರಣ್ ಲಯಕ್ಕೆ ಮರಳಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಶ್ರೇಯಸ್ ಗೋಪಾಲ್ ಆಲ್ರೌಂಡ್ ಪ್ರದರ್ಶನ ತಂಡಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. ಶ್ರೇಯಸ್ 41 ವಿಕೆಟ್ ಕಬಳಿಸಿದರೆ, ಶಿಖರ್ ಶೆಟ್ಟಿ (33), ವಿದ್ವತ್ ಕಾವೇರಪ್ಪ (37) ಸಹ ಉತ್ತಮ ಬೆಂಬಲ ನೀಡಿದ್ದಾರೆ. ಪ್ರಸಿದ್ಧಕೃಷ್ಣ ಉಪಸ್ಥಿತಿ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲಿದೆ.
ಮೊದಲ ಬಾರಿ ಸೆಮೀಸ್ ಆಡಲಿರುವ ಉತ್ತರಾಖಂಡ ಚೊಚ್ಚಲ ಪ್ರಶಸ್ತಿಯ ತವಕದಲ್ಲಿದ್ದು, ಕ್ವಾರ್ಟರ್​ಫೈನಲ್​ನಲ್ಲಿ ಜಾರ್ಖಂಡ್ ವಿರುದ್ಧ ಇನಿಂಗ್ಸ್ ಹಾಗೂ 6 ರನ್ ಗೆಲುವು ಸಾಧಿಸಿತ್ತು. ಸ್ಪಿನ್ನರ್ ಮಯಾಂಕ್ ಮಿಶ್ರಾ 52 ವಿಕೆಟ್‌ನೊಂದಿಗೆ ಟೂರ್ನಿಯ ಗರಿಷ್ಠ ವಿಕೆಟ್ ಟೇಕರ್ ಎನಿಸಿದ್ದು, ಕರ್ನಾಟಕದಿಂದ ವಲಸೆ ಹೋಗಿರುವ ಆಲ್ರೌಂಡರ್ ಜೆ.ಸುಚಿತ್ ಇದುವರೆಗೆ ಬೌಲಿಂಗ್‌ನಲ್ಲಿ 25 ವಿಕೆಟ್ ಜತೆಗೆ ಬ್ಯಾಟಿಂಗ್‌ನಲ್ಲಿ 414 ರನ್ ಗಳಿಸಿ ಮಿಂಚಿದ್ದಾರೆ. ನಾಯಕ ಕುನಲ್ ಚಾಂದೇಲ 709 ರನ್‌ಗಳಿಸಿದ್ದಾರೆ.
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಜಿಯೋ ಹಾಟ್‌ಸ್ಟಾರ್
2. ಕರ್ನಾಟಕ ತಂಡ ರಣಜಿ ಟ್ರೋಫಿಯಲ್ಲಿ ಎರಡನೇ ಬಾರಿಗೆ ಉತ್ತರಾಖಂಡ ವಿರುದ್ಧ ಆಡಲಿದ್ದು, 2022-23ರಲ್ಲಿ ಮೊದಲ ಬಾರಿ ಎದುರಾದಾಗ ಕರ್ನಾಟಕ ತಂಡ ಇನಿಂಗ್ಸ್ ಮತ್ತು 281 ರನ್‌ಗಳ ಭರ್ಜರಿ ಜಯಭೇರಿ ಕಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net